AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೀಣ್ಯ ಫ್ಲೈಓವರ್ ಬಂದ್: ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿರುವ ಆ್ಯಂಬುಲೆನ್ಸ್​

ತುಮಕೂರು ರಸ್ತೆ ಪ್ಲೈಓವರ್ ಮೇಲೆ ಸಂಚರಿಸುವ ವಾಹನಗಳು ಸರ್ವೀಸ್ ರಸ್ತೆ ಮೂಲಕ ಚಲಿಸುತ್ತಿವೆ. ಹೆದ್ದಾರಿ ಪ್ರಾಧಿಕಾರದ ಕೋರಿಕೆ ಮೇರೆಗೆ ಪೀಣ್ಯ ಸಂಚಾರ ಪೊಲೀಸರು ಸಂಚಾರ ನಿಷೇಧಿಸಿದ್ದಾರೆ. ಪೀಣ್ಯ, ಜಾಲಹಳ್ಳಿ ಕ್ರಾಸ್​​ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​ ಸಿಕ್ಕಿ ಹಾಕಿಕೊಂಡಿದೆ.

ಪೀಣ್ಯ ಫ್ಲೈಓವರ್ ಬಂದ್: ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿರುವ ಆ್ಯಂಬುಲೆನ್ಸ್​
ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿರುವ ಆ್ಯಂಬುಲೆನ್ಸ್​
Kiran Surya
| Updated By: ಆಯೇಷಾ ಬಾನು|

Updated on: Jan 17, 2024 | 11:08 AM

Share

ಬೆಂಗಳೂರು, ಜ.17: ಬೆಂಗಳೂರು ನಗರದಿಂದ ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಪೀಣ್ಯ ಫ್ಲೈಓವರ್ (Peenya Flyover) ನಿನ್ನೆ ರಾತ್ರಿ 11 ಗಂಟೆಯಿಂದ ಬಂದ್ ಆಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಅಂದ್ರೆ ಜ.19ರ ಬೆಳಗ್ಗೆ 11 ಗಂಟೆವರೆಗೆ ಸಂಪೂರ್ಣ ವಾಹನಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಹೀಗಾಗಿ ಈ ಭಾಗದ ವಾಹನ ಸವಾರರಿಗೆ ಕೊಂಚ ಟ್ರಾಫಿಕ್ ಬಿಸಿ ತಟ್ಟಿದೆ (Traffic). ನೆಲಮಂಗಲದಿಂದ ಹಿಡಿದು ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಎಸ್​ಆರ್​ಎಸ್ ಜಂಕ್ಷನ್, ಸಿಎಂಟಿಐ ಜಂಕ್ಷನ್, ನಾಗಸಂದ್ರ, 8ನೇ ಮೈಲಿ, ಪೀಣ್ಯ ಬಳಿ ಟ್ರಾಫಿಕ್ ಜಾಮ್ ಉಂಟಾಗಿದ್ದು ದಿನ ನಿತ್ಯ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಸಮಸ್ಯೆ ಎದುರಾಗಿದೆ. ಸವಾರರು ಪರದಾಡುವಂತಾಗಿದೆ. ಒಂದು ಕಿಲೋ ಮೀಟರ್​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್ ನಿಯಂತ್ರಿಸಲು ಪೀಣ್ಯ ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಟ್ರಾಫಿಕ್ ಸಾಗರವನ್ನ ದಾಟಲು ಸವಾರರು ಸುಸ್ತೋ ಸುಸ್ತು

ತುಮಕೂರು ರಸ್ತೆ ಪ್ಲೈಓವರ್ ಮೇಲೆ ಸಂಚರಿಸುವ ವಾಹನಗಳು ಸರ್ವೀಸ್ ರಸ್ತೆ ಮೂಲಕ ಚಲಿಸುತ್ತಿವೆ. ಹೆದ್ದಾರಿ ಪ್ರಾಧಿಕಾರದ ಕೋರಿಕೆ ಮೇರೆಗೆ ಪೀಣ್ಯ ಸಂಚಾರ ಪೊಲೀಸರು ಸಂಚಾರ ನಿಷೇಧಿಸಿದ್ದಾರೆ. ಪೀಣ್ಯ, ಜಾಲಹಳ್ಳಿ ಕ್ರಾಸ್​​ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಪೀಣ್ಯ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​ ಸಿಕ್ಕಿ ಹಾಕಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ಲೋಡ್ ಟೆಸ್ಟಿಂಗ್ ನಡೆಸಲಿರುವ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಮೀ ಉದ್ದವಿರು ಪೀಣ್ಯ ಮೇಲ್ಸೇತುವೆಯ ವಯಾಡಕ್ಟ್​​ನ ಸಮಗ್ರತೆ ಹಾಗೂ ಲೋಡ್ ಟೆಸ್ಟಿಂಗ್ ಪರಿಶೀಲನೆ ಸಂಚಾರಕ್ಕೆ ನಿರ್ಬಂಧ ಹೇರಲು ಮುಖ್ಯ ಕಾರಣವಾಗಿದೆ. ಈ ಹಿಂದೆ ದುರಸ್ಥಿ ಸಂಬಂಧ ಐಐಎಸ್ಸಿ ತನಿಖೆ ಮಾಡಿ ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ನಲ್ಲಿ ಲೋಪ ಇರುವ ಸಂಬಂಧ ರಿಪೋರ್ಟ್ ನೀಡಿದ್ದು. ಈ ಕಾರಣ ಸಮಸ್ಯೆ ಇದ್ದ ಸ್ಥಳದಲ್ಲಿ ಕೇಬಲ್ ಗಳ ಬದಲಾವಣೆ ಮಾಡಿದ್ದು, ಸದ್ಯ ಆ ಭಾಗಗಳಲ್ಲಿ ಲೋಡ್ ಟೆಸ್ಟಿಂಗ್ ಮಾಡಬೇಕಿರುವ ಕಾರಣ ಸದ್ಯ ಫ್ಲೈ ಓವರ್ ಬಂದ್ ಮಾಡಿ ಟೆಸ್ಟಿಂಗ್ ಗೆ ಎನ್ಎಚ್ಎಐ ಮುಂದಾಗಿದೆ‌.‌ ಆದರೆ ಇದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕಳಪೆ ಕಾಮಗಾರಿ ಎಷ್ಟು ಸಾರಿ ರಿಪೇರಿ ಮಾಡುತ್ತಾರೆ ಹೇಳಿ ಪದೇ ಪದೇ ರಿಪೇರಿ ಅಂತ ಫೈಓವರ್ ಬಂದ್ ಮಾಡಿದ್ರೆ ವಾಹನ ಸವಾರರ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಯತೀಂದ್ರರ ಜನಪ್ರಿಯತೆ ಹೆಚ್ಚಾಗಿದೆಯೇ?

ಇನ್ನೂ ಸೇತುವೆ ಸಂಚಾರ ಬಂದ್ ಆಗಿರೋ ಕಾರಣ ಸದ್ಯ ಎರಡಿ ಕಡೆಯಿಂದ ಸಂಚರಿಸಬೇಕಿರೋ ವಾಹನ ಸವಾರರ ಪರ್ಯಾಯ ಮಾರ್ಗ ಅನುಸರಿಸಬೇಕಿದೆ. ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಪಕ್ಕದ ಎನ್​​ಹೆಚ್-೪ ಮತ್ತು ಸರ್ವೀಸ್ ರಸ್ತೆಯ ಮೂಲಕ ೮ನೇ ಮೈಲಿ-ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ. ಇನ್ನೂ ಸಿಎಂಟಿಐ ಜಂಕ್ಷನ್​ನಿಂದ ನೆಲಮಂಗಲ ಕಡೆಗೆ ಫ್ಲೈ ಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಹೆಚ್-೪ ಮತ್ತು ಸರ್ವೀಸ್ ರಸ್ತೆಯಲ್ಲಿ ಎಸ್​ಆರ್​ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8 ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ