
ಬೆಂಗಳೂರು, ಮೇ 10: ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರು-ಕನಕಪುರ ಮುಖ್ಯರಸ್ತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಕನಕಪುರದ ಕಡೆಗೆ ಸಂಚರಿಸುವ ವಾಹನಗಳು ಬೆಂಗಳೂರು-ಕೆಂಗೇರಿ-ಬಿಡದಿ-ರಾಮನಗರ ಮೂಲಕ ಕನಕಪುರ ತಲುಪಲು ಸೂಚಿಸಲಾಗಿದೆ. ಅದೇ ರೀತಿ ಕನಕಪುರದಿಂದ ಬೆಂಗಳೂರಿಗೆ ಬರುವ ವಾಹನಗಳು ಕನಕಪುರ-ಹಾರೋಹಳ್ಳಿ-ಕಗ್ಗಲಿಪುರ ರಸ್ತೆ-ಬನ್ನೇರುಘಟ್ಟ ಮಾರ್ಗವಾಗಿ ನಗರ ಪ್ರವೇಶಿಸಬೇಕಿದೆ.
ನೈಸ್ ರಸ್ತೆಯಲ್ಲೂ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಸಂಚಾರ ನಿರ್ಬಂಧವಿರಲಿದ್ದು, ತುಮಕೂರು ರಸ್ತೆಯಿಂದ ಕನಕಪುರ ಕಡೆ ಹೋಗುವವರು ಸಿಎಂಟಿಐ ಜಂಕ್ಷನ್ ಬಳಿ ಬಲ ತಿರುವು ಪಡೆದು ಡಾ. ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆ ಮೂಲಕ ಸಂಚರಿಸಬೇಕು.
ಬೆಳಗ್ಗೆ 11 ಗಂಟೆಗೆ ಹೆಚ್‌ಎಎಲ್‌ನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಊದಿಪಾಳ್ಯ ಗ್ರಾಮದ ಬಳಿ ಇರುವ ಆಶ್ರಮಕ್ಕೆ ಮೋದಿ ಆಗಮಿಸಲಿದ್ದಾರೆ. ಆಶ್ರಮದ 45ನೇ ವರ್ಷಾಚರಣೆ ಮತ್ತು ಗುರೂಜಿಯವರ ಜನ್ಮದಿನದ ಸವಿನೆನಪಿಗಾಗಿ ನಿರ್ಮಿಸಲಾದ ಭವ್ಯ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30ರ ವರೆಗೆ ಆಶ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ ಮೇ 10ರಂದು ಸಂಚಾರ ಮಾರ್ಗಗಳಲ್ಲಿ ಕೆಲ ಬದಲಾವಣೆ: ಮಾಹಿತಿ ಇಲ್ಲಿದೆ
ಪ್ರಧಾನಿ ಆಗಮನದ ಹಿನ್ನೆಲೆ ಹೆಚ್‌ಎಎಲ್ ಗೇಟ್ ನಂ. 30ರ ರಸ್ತೆಯಲ್ಲಿ ಅಂಬ್ರೆಲಾ ಜಂಕ್ಷನ್‌ನಿಂದ ಗೇಟ್ ನಂ. 30ರ ವರೆಗೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಹಾಗೂ ಪಾರ್ಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರ್ ಎಸ್.ಎಂ.ವಿ ಕಾಲೇಜು ಮೈದಾನ ಹಾಗೂ ಹೆಚ್‌ಎಎಲ್ ಬಸ್ ಯಾರ್ಡ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 am, Sun, 10 May 26