
ಬೆಂಗಳೂರು, ಮೇ 13: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂಧನ ಉಳಿತಾಯ ಮತ್ತು ಸಾರ್ವಜನಿಕ ಸಾರಿಗೆ ಬಳಕೆಯ ಬಗ್ಗೆ ನೀಡಿದ ಕರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೆಟ್ರೋ (Namma Metro) ಮತ್ತು ಬಸ್‌ಗಳ ಬಳಕೆಗೆ ಪ್ರಧಾನಿ ನೀಡಿದ ಸಲಹೆಯನ್ನು ಬೆಂಗಳೂರಿಗರು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಒಗ್ಗಟ್ಟಾಗಬೇಕು ಮತ್ತು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ವಿನಂತಿಸಿದ್ದರು. ಇದರ ಪರಿಣಾಮವಾಗಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ‘ದೇಶದ ಹಿತದೃಷ್ಟಿಯಿಂದ ಪ್ರಧಾನಿಯವರ ಮಾತು ಸರಿಯಾಗಿದೆ. ನಾವು ಬೈಕ್ ಬಳಸುವ ಬದಲು ಮೆಟ್ರೋ ಬಳಸುವುದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ’ ಎಂದು ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಪ್ರಯಾಣಿಕರು ತಾವು ಇಷ್ಟು ದಿನ ಕಚೇರಿಗೆ ಹೋಗಲು ಬೈಕ್ ಬಳಸುತ್ತಿದ್ದೆವು, ಆದರೆ ಈಗ ಮೆಟ್ರೋದಲ್ಲಿ ಸಂಚರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಆಮದು ಕಡಿಮೆ ಮಾಡುವುದರಿಂದ ಭಾರತದ ಆರ್ಥಿಕತೆಗೆ ಬಲ ಸಿಗಲಿದೆ ಎಂಬ ಜಾಗೃತಿ ಜನರಲ್ಲಿ ಮೂಡುತ್ತಿದೆ.
ಇದೇ ವೇಳೆ, ದೇಶಾದ್ಯಂತ ಡೀಸೆಲ್ ಅಭಾವದ ಎಚ್ಚರಿಕೆಯನ್ನು ನೀಡಲಾಗಿದೆ. ಬಲ್ಕ್ ಸರಬರಾಜು ದರ ಮತ್ತು ಚಿಲ್ಲರೆ ಮಾರಾಟ ದರದ ನಡುವಿನ ವ್ಯತ್ಯಾಸದಿಂದಾಗಿ ದೊಡ್ಡ ಕೈಗಾರಿಕೆಗಳು ನೇರವಾಗಿ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಹೈ ಸ್ಪೀಡ್ ಡೀಸೆಲ್ (HSD) ಖರೀದಿ ಮಾಡುತ್ತಿವೆ. ಇದರಿಂದ ಚಿಲ್ಲರೆ ಬಂಕ್‌ಗಳಲ್ಲಿ ದಾಸ್ತಾನು ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಧಾನಿ ಮೋದಿ ಅವರಿಗೆ ದೂರು ಸಲ್ಲಿಸಿದೆ. ಕೈಗಾರಿಕೆಗಳು ನಿಗದಿತ ಬಲ್ಕ್ ಸರಬರಾಜು ಮೂಲಕವೇ ಇಂಧನ ಪಡೆಯುವಂತೆ ಕ್ರಮ ಕೈಗೊಳ್ಳಲು ಸಂಘಟನೆ ಆಗ್ರಹಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್ನಲ್ಲಿ ಬಂದೆ ಎಂದ ಪ್ರಯಾಣಿಕ!
ಜಾಗತಿಕವಾಗಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಭೀತಿ ಮತ್ತೆ ಎದುರಾಗುತ್ತಿರುವುದರಿಂದ ಇಂಧನ ಉಳಿತಾಯದ ಮುಂಜಾಗ್ರತಾ ಕ್ರಮಗಳು ಅನಿವಾರ್ಯವಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ