ಬೆಂಗಳೂರು ಅಗ್ನಿ ಅವಘಡದ ಹಿಂದಿದೆಯೇ ರಾಜಕಾರಣಿ, ಭೂ ಮಾಫಿಯಾದವರ ಕೈವಾಡ?
ಅದು ನಗರದಲ್ಲಿನ ಕೋಟ್ಯಂತರ ಮೌಲ್ಯದ ವಿವಾದಿತ ಜಾಗ. ಕಿಡಿಗೇಡಿಗಳು ಹಚ್ಚಿದ ಬೆಂಕಿ ಇಡೀ ಲೇಔಟ್ ವ್ಯಾಪಿಸಿ ರಾತ್ರಿ ಇಡೀ ಧಗ-ಧಗನೆ ಹೊತ್ತಿ ಉರಿದಿತ್ತು. ಬೆಂಕಿಯ ಜ್ವಾಲೆ ಚಿಮ್ಮಿದ್ರೆ, ಹೊಗೆ ಇಡೀ ಏರಿಯಾವನ್ನು ಆವರಿಸಿತ್ತು. ಪರಿಸರ ಮಾಲಿನ್ಯಗೊಂಡಿತ್ತು. ಈ ಪರಿಯ ಖಾಲಿ ಲೇಔಟ್ ಹೊತ್ತಿ ಉರಿದಿದ್ದೇಕೆ? ಸ್ಥಳೀಯರ ಆರೋಪವೇನು ಅನ್ನೋದರ ವರದಿ ಇಲ್ಲಿದೆ.
ಬೆಂಗಳೂರು, ಮಾರ್ಚ್.12: ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿರುವ ವಿವಾದಿತ ಲೇಔಟ್ನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಬರೋಬ್ಬರಿ 8 ಎಕರೆ ವಿಸ್ತೀರ್ಣದ ಖಾಲಿ ಲೇಔಟ್, ಕಳೆದ ಹತ್ತಾರು ವರ್ಷಗಳಿಂದ ವಿವಾದಿತ ಲೇಔಟ್ ಆಗಿದೆ. ಈ ಲೇಔಟ್ ಮೇಲೆ ಸ್ಥಳೀಯ ರಾಜಕಾರಣಿಗಳು ಮತ್ತು ಭೂ ಮಾಫಿಯದವ್ರ ವಕ್ರ ದೃಷ್ಟಿ ಬಿದ್ದಿತ್ತು. ಹತ್ತಾರು ವರ್ಷಗಳ ವಿವಾದಿತ ಜಾಗ ಸ್ಕ್ರಾಪ್ ಮತ್ತು ಕಸದ ಗುಡ್ಡೆಯನ್ನ ಸಮತಟ್ಟು ಮಾಡಿ, ಹಳ್ಳತೆಗೆದು ಮುಚ್ಚಲು ಭೂ ಮಾಫಿಯಾದ ಕಾಣದ ಕೈಗಳು ಮುಂದಾಗಿದ್ದವು. ಆದರೆ ಇದೇ ವೇಳೆ ಕಿಡಿಗೇಡಿಗಳು ಈ ಹಳ್ಳಕ್ಕೆ ಬೆಂಕಿ ಹಚ್ಚಿದ್ದಾರೆ, ಹತ್ತಾರು ವರ್ಷಗಳಿಂದ ಪ್ಲಾಸ್ಟಿಕ್, ವೇಸ್ಟೇಜ್, ಟಯರ್ ಗಳು ಡಂಪ್ ಮಾಡಿದ್ದ ಪರಿಣಾಮ ಪ್ಲಾಸ್ಟಿಕ್ ಕಸದ ರಾಶಿಯೂದ್ದಕ್ಕೂ ಬೆಂಕಿ ವ್ಯಾಪಿಸಿದೆ. ಲೇಔಟ್ ನಲ್ಲಿದ್ದ ತಾತ್ಕಾಲಿಕ ಶೆಡ್ ಕೂಡ ಅಗ್ನಿ ಅವಘಡಕ್ಕೆ ತುತ್ತಾಗಿದೆ.
ಸ್ಥಳೀಯರು ಆರೋಪಿಸುವಂತೆ ಭೂ ಮಾಫಿಯಾದ ಕಾರಣದಿಂದಲೇ ಬೆಂಕಿ ಹೊತ್ತಿದೆ, ಸ್ಥಳೀಯ ಬಿಜೆಪಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಕೃಷ್ಣಯ್ಯ ವಿರುದ್ದ ಆರೋಪ ಇದ್ದು, ಎರಡು ದಿನಗಳಿಂದ ಜೆಸಿಬಿ ಮೂಲಕ ಜಾಗ ಸಮತಟ್ಟು ಮಾಡಿಸುತ್ತಿದ್ದರು. ಜಾಗದ ಮೂಲ ಮಾಲೀಕ ಸಿದ್ದರಾಮಯ್ಯ ಎಂಬಾತನಿಂದ ಕರೀಂ ಸಾಬ್ ಖರೀದಿಸಿದ್ದರು. ಕರೀಂ ಸಾಬ್ ಲೇಔಟ್ ಮಾಡಿ ನಿವೇಶನಗಳ ಮಾರಾಟ ಮಾಡಿದರು. ಆದರೆ ಆ ಬಳಿಕ ಲೇಔಟ್ ವಿವಾದದ ಸ್ವರೂಪ ಪಡೆದುಕೊಳ್ತು. ಇನ್ನೂ ಕೂಡ ಈ ಜಾಗದ ವಿಚಾರದ ವ್ಯಾಜ್ಯ ನ್ಯಾಯಾಲಯದಲ್ಲಿ ಬಾಕಿ ಇದೆ. ಆದಾಗ್ಯೂ ಕಳೆದ ಎರಡು ದಿನಗಳಿಂದ ಕೆಲಸ ಮಾಡಿಸ್ತಿದ್ದಾರೆ. ಲೇಔಟ್ ನಲ್ಲಿ ಟಯರ್ ಗಳು, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳ ಡಂಪ್ ಮಾಡಲಾಗಿತ್ತು. ಲೇಔಟ್ ಸಮತಟ್ಟು ಮಾಡಲು ಒಂದೆಡೆ ಹಳ್ಳ ತೆಗೆದು ಡಂಪ್ ಮಾಡಿದ್ರು. ಇದೇ ಹಳ್ಳಕ್ಕೆ ಬೆಂಕಿ ಹಚ್ಚಿದ ಪರಿಣಾಮ ಇಡೀ ಲೇಔಟ್ ಖಾಲಿ ಜಾಗ ಬೆಂಕಿ ಜ್ವಾಲೆ ಆವರಿಸಿದೆ. ಬೆಂಕಿ ವ್ಯಾಪಿಸಿದ ಪರಿಣಾಮ ಎರಡು ತಾತ್ಕಾಲಿಕ ಶೆಡ್ ಗಳು ಹಾನಿಯಾಗಿದೆ. ಭೂ ಮಾಫಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ದೂರು ನೀಡಲಿದ್ದೇವೆ ಎಂದು ವಿವಾದಿತ ಲೇಔಟ್ ನ ನಿವೇಶನ ಮಾಲೀಕ ವಿಶ್ವನಾಥ್ ಆರೋಪಿಸಿದ್ದಾರೆ.
ಅಗ್ನಿ ಅವಘಡದ ವಿಡಿಯೋ
ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಭಾಸ್ ಫ್ಯಾನ್ಗೆ ಅಲ್ಲು ಅರ್ಜುನ್ ಅಭಿಮಾನಿಗಳಿಂದ ಥಳಿತ
ಅದೇನೆ ಇರಲಿ, ಅದೆಂತದ್ದೆ ವಿವಾದಿತ ಜಾಗವಾಗಿರಲಿ, ಸಾವಿರಾರು ಜನರು ವಾಸ ಮಾಡುವ ರೆಸಿಡೆನ್ಶಿಯಲ್ ಏರಿಯಾದಲ್ಲಿ ಈ ಪರಿಯ 8 ಎಕರೆ ಜಾಗದ ಕಸದ ರಾಶಿ ಬೆಂಕಿ ಉಗುಳಿದ್ದು, ಏರಿಯಾದ ಪರಿಸರವನ್ನೇ ಹಾಳುಗೆಡವಿದೆ, ದಟ್ಟವಾದ ಹೊಗೆ ಏರಿಯಾವನ್ನು ಆವರಿಸಿದ್ದು,ಅಗ್ನಿ ಅವಘಡಕ್ಕೆ ಕಾರಣಕರ್ತರ ವಿರುದ್ದ ರಾಜಗೋಪಾಲ ನಗರ ಪೊಲೀಸರು ಕಾನೂನು ರೀತ್ಯಾ ಕ್ರಮ ಜರುಗಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ