AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಗುಂಡಿಗಳ ಬಗ್ಗೆ ಪೊಲೀಸರೇ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಬಿಬಿಎಂಪಿ

ಸಂಚಾರ ದಟ್ಟಣೆ ನಿವಾರಿಸಲು ಕೆಲವೊಮ್ಮೆ ಪೊಲೀಸರು ಕಾಂಕ್ರಿಟ್ ಮತ್ತು ಇತರ ವಸ್ತುಗಳನ್ನು ಬಳಸಿ ತಾವೇ ಗುಂಡಿ ಮುಚ್ಚಲು ಮುಂದಾಗಿದ್ದೂ ಉಂಟು.

ರಸ್ತೆ ಗುಂಡಿಗಳ ಬಗ್ಗೆ ಪೊಲೀಸರೇ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಬಿಬಿಎಂಪಿ
ಬಿಬಿಎಂಪಿ ರೂಪಿಸಿರುವ ರಸ್ತೆ ಗುಂಡಿ ವರದಿ ಮಾಡುವ ಆ್ಯಪ್ (ಎಡಚಿತ್ರ). ರಸ್ತೆ ಗುಂಡಿಗೆ ಕಲ್ಲು ತುಂಬುತ್ತಿರುವ ಟ್ರಾಫಿಕ್ ಪೊಲೀಸ್ (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 18, 2022 | 3:16 PM

Share

ಬೆಂಗಳೂರು: ನಗರದ ವಿವಿಧೆಡೆ ಕಂಡುಬರುವ ರಸ್ತೆ ಗುಂಡಿಗಳ ಬಗ್ಗೆ ಬಿಬಿಎಂಪಿಯೇ ರೂಪಿಸಿರುವ ಆ್ಯಪ್ ಮೂಲಕ ಮಾಹಿತಿ ನೀಡಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಗುಂಡಿ ಬಿದ್ದಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದರೂ ಬಿಬಿಎಂಪಿ ಗಮನ ಹರಿಸುತ್ತಿಲ್ಲ. ಬಿಬಿಎಂಪಿಯೇ ನಿರ್ಮಿಸಿರುವ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಮೂಲಕ ಬಿಬಿಎಂಪಿಗೆ ಗುಂಡಿಗಳ ಟ್ರಾಫಿಕ್ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಯಾವ ರಸ್ತೆ, ಎಷ್ಟು ಗುಂಡಿಗಳಿವೆ ಎಂದು ಫೋಟೊ ಸಮೇತ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಪ್ರತಿದಿನ ಹತ್ತಕ್ಕೂ ಗುಂಡಿಗಳ ಪೋಟೊ ತೆಗೆದು ಅಪ್​ಲೋಡ್ ಮಾಡುತ್ತಿದ್ದಾರೆ. ಆದರೆ ಸ್ಪಂದನೆ ಮಾತ್ರ ಅಷ್ಟಕ್ಕಷ್ಟೇ ಎನ್ನುವಂತಿದೆ. ಕೇವಲ ಬೆರಳೆಣಿಕೆಯಷ್ಟು ಗುಂಡಿಗಳನ್ನು ಮುಚ್ಚಿರುವ ಬಿಬಿಎಂಪಿ ಈಗ ಮೌನಕ್ಕೆ ಶರಣಾಗಿದೆ. ಕೆಲವೆಡೆ ಗುಂಡಿಗಳಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸಂಚಾರ ದಟ್ಟಣೆ ನಿವಾರಿಸಲು ಕೆಲವೊಮ್ಮೆ ಪೊಲೀಸರು ಕಾಂಕ್ರಿಟ್ ಮತ್ತು ಇತರ ವಸ್ತುಗಳನ್ನು ಬಳಸಿ ತಾವೇ ಗುಂಡಿ ಮುಚ್ಚಲು ಮುಂದಾಗಿದ್ದೂ ಉಂಟು.

ಮಲ್ಲೇಶ್ವರಂ ಸಂಚಾರ ಪೊಲೀಸರು ಸ್ಯಾಂಡಲ್​ವುಡ್ ಸೋಪ್ ಫ್ಯಾಕ್ಟರಿ ಬಳಿ ಗುಂಡಿ ಮುಚ್ಚಿದ್ದಾರೆ. ಯಶವಂತಪುರ ಪೊಲೀಸರು ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಿದ್ದಾರೆ. ಬಾಣಸವಾಡಿ ಪೊಲೀಸರು ಹೆಣ್ಣೂರು ರಿಂಗ್ ರೋಡ್ ಅಂಡರ್ ಪಾಸ್​ನಲ್ಲಿ, ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಬಿಎಫ್​ಡಬ್ಲ್ಯು ಜಂಕ್ಷನ್​ನಲ್ಲಿ ಗುಂಡಿಗಳನ್ನು ಮುಚ್ಚಿದ್ದಾರೆ.

ಬಿಬಿಎಂಪಿಯಿಂದ ಪರಿಹಾರ

ಅಪಘಾತ ಮತ್ತು ಸಾವಿಗೆ ರಸ್ತೆಯಲ್ಲಿರುವ ಗುಂಡಿಗಳು ಕಾರಣವಾಗಿದ್ದರೆ ಬಿಬಿಎಂಪಿ ಪರಿಹಾರ ನೀಡುತ್ತದೆ. ಮೃತಪಟ್ಟರೆ ಅವರ ಕುಟುಂಬಕ್ಕೆ ₹ 3 ಲಕ್ಷ, ಗಂಭೀರ ಗಾಯಗೊಂಡರೆ ₹ 15 ಸಾವಿರ, ಮೂರು ದಿನಕ್ಕಿಂತ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ₹ 10 ಸಾವಿರ ಮತ್ತು ಸಣ್ಣ ಗಾಯಗಳಾದರೆ ₹ 5 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಬಿಬಿಎಂಪಿಯಿಂದ ಸ್ಪಂದನೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರು ದೂರು ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಪಘಾತ ನಡೆದ 30 ದಿನದಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಒಂದು ತಿಂಗಳ ನಂತರದಲ್ಲಿ ಬರುವ ಮನವಿಯನ್ನು ಬಿಬಿಎಂಪಿ ಸ್ವೀಕರಿಸುವುದಿಲ್ಲ. ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಪಾಲಿಕೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಅಪಘಾತಕ್ಕೆ ಪಾಲಿಕೆ ಅಸಮರ್ಪಕ ನಿರ್ವಹಣೆ ಕಾರಣ ಎಂಬುದು ದೃಢಪಟ್ಟರೆ ಪಾಲಿಕೆಯಿಂದ ಪರಿಹಾರ ನೀಡಲಾಗುತ್ತದೆ.