ಹರ್ಷ ಕೊಲೆ ಆರೋಪಿಗೆ ಪರಪ್ಪನ‌‌ ಅಗ್ರಹಾರದಲ್ಲಿ ರಾಜಾತಿಥ್ಯ; ಪ್ರತಿಭಟನೆಯ ಎಚ್ಚರಿಕೆ ನೀಡಿದ ಹರ್ಷ ಸಹೋದರಿ

| Updated By: ವಿವೇಕ ಬಿರಾದಾರ

Updated on: Jul 04, 2022 | 5:07 PM

ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ವರ್ಗಾವಣೆ ಬಳಿಕವೂ ಅಕ್ರಮ ನಿಲ್ಲುತ್ತಿಲ್ಲ. ಕೈದಿಗಳು  ಜೈಲಿನಲ್ಲಿದ್ದುಕೊಂಡೇ ತಮ್ಮ ಆಪ್ತರಿಗೆ, ಕುಟುಂಬಸ್ಥರಿಗೆ ವಿಡಿಯೋ ಕಾಲ್​ ಮಾಡುತ್ತಿದ್ದಾರೆ.

ಹರ್ಷ ಕೊಲೆ ಆರೋಪಿಗೆ ಪರಪ್ಪನ‌‌ ಅಗ್ರಹಾರದಲ್ಲಿ ರಾಜಾತಿಥ್ಯ; ಪ್ರತಿಭಟನೆಯ ಎಚ್ಚರಿಕೆ ನೀಡಿದ ಹರ್ಷ ಸಹೋದರಿ
ಕೇಂದ್ರ ಕಾರಾಗೃಹ ಬೆಂಗಳೂರು
Follow us on

ಬೆಂಗಳೂರು: ಪರಪ್ಪನ ಅಗ್ರಹಾರ (Bengaluru Central Jail) ಜೈಲಿನ ಅಧಿಕಾರಿಗಳ ವರ್ಗಾವಣೆ ಬಳಿಕವೂ ಅಕ್ರಮ ನಿಲ್ಲುತ್ತಿಲ್ಲ. ಕೈದಿಗಳು (Prisoners) ಜೈಲಿನಲ್ಲಿದ್ದುಕೊಂಡೇ ತಮ್ಮ ಆಪ್ತರಿಗೆ, ಕುಟುಂಬಸ್ಥರಿಗೆ ವಿಡಿಯೋ ಕಾಲ್​ ಮಾಡುತ್ತಿದ್ದಾರೆ. ಹರ್ಷ (Harsha) ಕೊಲೆ ಆರೋಪಿಯೂ ಕೂಡ ವಿಡಿಯೋ ಕಾಲ್ ಮಾಡುತ್ತಿದ್ದಾನೆ. ಈ ಬಗ್ಗೆ ಜೈಲಾಧಿಕಾರಿ ರಂಗನಾಥ್​​​ ಪರಪ್ಪನ ಅಗ್ರಹಾರ ಪೊಲೀಸರಿಗೆ ​ದೂರು ನೀಡಿದ್ದಾರೆ. ರಂಗನಾಥ್ ವಿರುದ್ಧವೂ ಅಕ್ರಮ ಆರೋಪ ಕೇಳಿ ಬಂದಿದೆ. ಕೈದಿಗಳ ಬಳಿ ಮೊಬೈಲ್, ಗಾಂಜಾ ಸಿಕ್ಕಿರುವ ಹಿನ್ನೆಲೆ 7 ಜೈಲು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿತ್ತು. ಆದರೂ ಕೂಡ ಜೈಲಿನಲ್ಲಿ ಅಕ್ರಮ ನಿಲ್ಲುತ್ತಿಲ್ಲ.

ಇದನ್ನು ಓದಿ: ಅಮೃತ್ ಪೌಲ್ ನ್ಯಾಯಾಂಗ ಬಂಧನಕ್ಕೆ, ಏನು ಈ ಅಧಿಕಾರಿ ಹಿನ್ನೆಲೆ? ಓಎಂಅರ್ ಶೀಟ್ ಭರ್ತಿ ಹೇಗೆ- ಎಲ್ಲಿ ಆಗ್ತಿತ್ತು ಗೊತ್ತಾ?

ಈಗ ಹರ್ಷನ ಕೊಲೆ‌ ಆರೋಪಿಗಳ ಅಕ್ರಮ ಬಯಲಾಗಿದ್ದು, ಡಿಸಿಪಿ ನೇತೃತ್ವದಲ್ಲಿ ಜೈಲಿನಲ್ಲಿ ದಾಳಿ ಮಾಡಿದಾಗ ಹರ್ಷ ಕೊಲೆ ಆರೋಪಿ ಸೇರಿ ಹಲವರ ಮೊಬೈಲ್ ಸಕ್ರಿಯವಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್​ ಬಳಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಇರುವ ಸಿಬ್ಬಂದಿ  ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು. ಜೈಲಲ್ಲಿ ಜಾಮರ್ ಅಳವಡಿಕೆಗೆ ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲಿಯೇ ಜಾಮರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಜೈಲಲ್ಲಿರುವ ಕೆಲವರು ತಮ್ಮ ಕರ್ತವ್ಯದಲ್ಲಿ ಫೇಲ್​ ಆಗಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಆಗಲಿದೆ ಎಂದು ಖಡಖ್​​ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಮಳೆಯಿಂದಾಗಿ ಕುದುರೆ ಸವಾರಿ ಮಾಡಿ ಫುಡ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್; ವಿಡಿಯೋ ವೈರಲ್

ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ‌‌ ಅಗ್ರಹಾರದಲ್ಲಿ ರಾಜಾತಿಥ್ಯ ಹಿನ್ನೆಲೆ ಹರ್ಷ ಸಹೋದರಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದು, ವಿಚಾರ ಕೇಳಿದ ಕೊಡಲೇ ನಾವು ಬದುಕಿದ್ದೂ ಸತ್ತ ಹಾಗಾಗಿದೆ. ನನ್ನ ತಮ್ಮ ಬಜರಂಗದಳಕ್ಕೆ ಸೇರಿದ್ದ ಅನ್ನೋ ಕಾರಣಕ್ಕೆ ಹತ್ತು ಜನ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರಿ, ಆದರೆ ಆರೋಪಿಗಳು ಬೆಂಗಳೂರಿನ ಜೈಲಿನಲ್ಲಿ ವಿಡಿಯೋ ಕಾಲ್ ಮೂಲಕ ಸ್ನೇಹಿತರು, ಮನೆಯವರ ಜೊತೆ ಮಾತನಾಡುತ್ತಾರೆ. ಇದನ್ನು ನೋಡಿದರೆ ನಮ್ಮ ವ್ಯವಸ್ಥೆ ಎಷ್ಟು ಲೂಸ್ ಆಗಿದೆ ಅನ್ನೋದು ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕ್ರಿಮಿನಲ್​​​ಗಳನ್ನು ನೀವು ದೇವರ ತರ ನೋಡುತ್ತಿದ್ದೀರಾ ? ದುಡ್ಡಿಗಾಗಿ ಆಸೆಪಟ್ಟು ಈ ರೀತಿ ಮಾಡುತ್ತಿದ್ದೀರಾ ? ಅಥವಾ ಆರೋಪಿಗಳು ನಿಮ್ಮ ಸಂಬಂಧಿಕರಾ ? ಇದಕ್ಕೆ ಬೆಂಬಲ ಕೊಟ್ಟ ಅಧಿಕಾರಿಗಳನ್ನು ವರ್ಗಾವಣೆ ಅಲ್ಲ ಸಸ್ಪೆಂಡ್ ಮಾಡಬೇಕು. ಆರೋಪಿಗಳಿಗೆ ಶಿಕ್ಷೆ ಆಗುತ್ತದೆ ಎನ್ನುವ ವಿಶ್ವಾಸ ಕಳೆದುಕೊಂಡಿದ್ದೇವೆ. ಸಸ್ಪೆಂಡ್ ಆಗಿಲ್ಲ ಅಂದರೆ ಪರಪ್ಪನ ಅಗ್ರಹಾರದ ಮುಂದೆ ಹೋಗಿ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ವಿಡಿಯೋ ನೋಡಿದ ಮತ್ತಷ್ಟು ಕ್ರಿಮಿನಲ್ ಗಳಿಗೆ ನಾವು ಏನು ಬೇಕಾದರೂ ಮಾಡಬಹುದು ಅಂದುಕೊಳ್ಳುತ್ತಾರೆ. ನನಗೆ ನನ್ನ ಕುಟುಂಬಕ್ಕೆ ಆತಂಕ ಶುರುವಾಗಿದೆ. ಇಷ್ಟು ಆರಾಮಾಗಿರುವ ಕ್ರಿಮಿನಲ್​ ಗಳು ನಾಳೆ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಬಹುದು. ಹೀಗಾಗಿ ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ನಮಗೆ ರಕ್ಷಣೆ ನೀಡಬೇಕು. ಈ ಬೆಳವಣಿಗೆಯಿಂದ ನಮ್ಮ ಕುಟುಂಬಕ್ಕೆ ಭಯ ಶುರುವಾಗಿದೆ ಎಂದು ಆತಂಕ ವ್ಯಕ್ತಡಿಸಿದ್ದಾರೆ.