ಡಿ.23ರಂದು ನಿಗದಿಯಾಗಿದ್ದ ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ
PSI recruitment: ಡಿ.23ರಂದು ನಿಗದಿಯಾಗಿದ್ದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು ಒಂದು ತಿಂಗಳು ಅಂದರೆ 2024ರ ಜನವರಿ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿ ಗೃಹ ಸಚಿವ ಡಾ.ಪರಮೇಶ್ವರ್ ಮರು ಪರೀಕ್ಷೆ ದಿನಾಂಕ ಪ್ರಕಟಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 04: ಡಿ.23ರಂದು ನಿಗದಿಯಾಗಿದ್ದ 545 ಪಿಎಸ್ಐ ಹುದ್ದೆಗಳ (PSI recruitment) ನೇಮಕಾತಿ ಮರು ಪರೀಕ್ಷೆಯನ್ನು ಒಂದು ತಿಂಗಳು ಅಂದರೆ 2024ರ ಜನವರಿ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಿ ಗೃಹ ಸಚಿವ ಡಾ.ಪರಮೇಶ್ವರ್ ಮರು ಪರೀಕ್ಷೆ ದಿನಾಂಕ ಪ್ರಕಟಿಸಿದ್ದಾರೆ. PSI ಮರು ಪರೀಕ್ಷೆ ಮುಂದೂಡುವಂತೆ ಆಡಳಿತ, ವಿಪಕ್ಷ ಸದಸ್ಯರು ಆಗ್ರಹಿಸಿದ್ದರು. ಹಾಗಾಗಿ ಜ.23ರಂದು ಎಲ್ಲಾ 54,233 ಅಭ್ಯರ್ಥಿಗಳು ಬೆಂಗಳೂರಲ್ಲೇ ಪಿಎಸ್ಐ ಮರು ಪರೀಕ್ಷೆ ಬರೆಸಲು ನಿರ್ಧಾರ ಮಾಡಲಾಗಿದೆ.
ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದಿಷ್ಟು
ಈ ಕುರಿತಾಗಿ ಬೆಳಗಾವಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್, PSI ಪರೀಕ್ಷೆ ಸಮಯಾವಕಾಶ ಬೇಕು ಎಂದು ಪರೀಕ್ಷಾರ್ಥಿಗಳು ಮನವಿ ಮಾಡಿದ್ದರು. ಹಾಗಾಗಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಲಾಗಿದೆ. ಸದನದಲ್ಲಿ ಯತ್ನಾಳ್ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಅನೇಕ ಶಾಸಕರುಗಳು ಪಕ್ಷಾತೀತವಾಗಿ ಬೇಡಿಕೆಯನ್ನ ಇಟ್ಟಿದ್ದರು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿ ಒಂದು ತಿಂಗಳ ಪರೀಕ್ಷೆಯನ್ನ ಮುಂದೂಡಿಕೆ ಮಾಡಲಾಗಿದೆ.
ದಿನಾಂಕವನ್ನ ಶೀಘ್ರದಲ್ಲೇ ಪ್ರಕಟಿಸಲಾಗುವುದು. KEA ಕ್ಯಾಲೆಂಡರ್ ನೋಡಿಕೊಂಡು ದಿನಾಂಕ ಪ್ರಕಟ ಮಾಡುತ್ತೇವೆ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ತಯಾರಿ ಮಾಡಿಕೊಂಡು ಬರೆಯಿರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: 545 PSI ಹುದ್ದೆಗಳಿಗೆ ಮರುಪರೀಕ್ಷೆ: ಕಾಲಾವಕಾಶ ನೀಡುವಂತೆ ಪ್ರತಿಭಟನೆಗಿಳಿದ ಅಭ್ಯರ್ಥಿಗಳು ಪೋಲಿಸ್ ವಶಕ್ಕೆ
ಎಮ್‌ಎಲ್‌ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಮತ್ತು ಶಾಸಕ ಬಸನಗೌಡ ತುರವಿಹಾಳ ಅವರು ಮರುಪರೀಕ್ಷೆ ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯಗೆ ಇತ್ತೀಚೆಗೆ ಪತ್ರ ಬರೆದಿದ್ದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನದ ವೇಳೆ PSI ಪರೀಕ್ಷಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಪರೀಕ್ಷೆಗೆ ಕೇವಲ 30 ದಿನಗಳ ಕಾಲಾವಕಾಶ ನೀಡಿದ್ದಾರೆ. ಕನಿಷ್ಠ 2 ತಿಂಗಳು ಕಾಲಾವಕಾಶ ನೀಡಬೇಕೆಂದು ಪರೀಕ್ಷಾರ್ಥಿಗಳು ಆಗ್ರಹಿಸಿದ್ದರು.
ಪಿಎಸ್ಐ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ
ಬೆಳಗಾವಿ ಚಳಿಗಾಲ ಅಧಿವೇಶನ ಮೊದಲ ದಿನದ ಶೂನ್ಯವೇಳೆಯಲ್ಲಿ ಪಿಎಸ್ಐ ಹಗರಣದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ್ದಾರೆ. ಮರು ಪರೀಕ್ಷೆಯನ್ನು ಕನಿಷ್ಠ ಮೂರು ತಿಂಗಳು ಅಥವಾ ಆರು ತಿಂಗಳು ಮುಂದೂಡುವಂತೆ ಮನವಿ ಮಾಡಿದ್ದರು. ಜೊತೆಗೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಿಎಸ್‌ಐ ಮರುಪರೀಕ್ಷೆ ದಿನಾಂಕ ಮುಂದೂಡಲು ಕೈ ಶಾಸಕರಿಂದಲೇ ಮನವಿ; ರಾಹುಲ್ ಗಾಂಧಿ, ಸಿಎಂಗೆ ಪತ್ರ
ಕರ್ನಾಟಕ ಪೊಲೀಸ್ ಇಲಾಖೆಯ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ 2021ರ ಅಕ್ಟೋಬರ್ 3ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಅಕ್ರಮ ಕಂಡುಬಂದಿತ್ತು. ಈ ಕಾರಣಕ್ಕೆ ಪರೀಕ್ಷೆ ರದ್ದಾಗಿತ್ತು. ಈ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್‍ಪಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು, ಪರೀಕ್ಷಾರ್ಥಿಗಳು, ಅವರ ಕೆಲವು ಪಾಲಕರನ್ನು ಸಹ ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:26 pm, Mon, 4 December 23