PSI ನೇಮಕಾತಿ ಹಗರಣದಲ್ಲಿ ಮತ್ತೊಬ್ಬ ಅಧಿಕಾರಿ ತಲೆದಂಡ; ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ವರ್ಗಾವಣೆ

| Updated By: ಆಯೇಷಾ ಬಾನು

Updated on: May 04, 2022 | 8:01 AM

ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜುರನ್ನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿಯ ಆಪ್ತನಾಗಿರುವ ಶಾಂತರಾಜು ಪ್ರಕರಣ ಹೊರಬರುತ್ತಿದ್ದಂತೆ 2ನೇ ಅಧಿಕಾರಿ ವರ್ಗಾವಣೆಯಾಗಿದೆ.

PSI ನೇಮಕಾತಿ ಹಗರಣದಲ್ಲಿ ಮತ್ತೊಬ್ಬ ಅಧಿಕಾರಿ ತಲೆದಂಡ; ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ವರ್ಗಾವಣೆ
ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ
Follow us on

ಬೆಂಗಳೂರು: ರಾಜ್ಯದ 545 ಪಿಎಸ್‌ಐ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಅನ್ನೋ ವಿಷ್ಯ ಬಯಲಾಗ್ತಿದ್ದಂತೆ ಮೊದಲು ಕೇಳಿ ಬಂದಿದ್ದೆ ಕಲಬುರಗಿ ಹೆಸರು. ಬಳಿಕ ಬೆಂಗಳೂರು. ಈ ಎರಡು ಕಡೆ ಅನೇಕ ಆಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಇವತ್ತಿನ ಬೆಳವಣಿಗೆ ಎಂದರೆ ಬೆಂಗಳೂರಿನಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಟಿವಿ9ಗೆ ಸಿಐಡಿ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಗುಮಾನಿ ಹಿನ್ನಲೆ ಡಿವೈಎಸ್ಪಿ ಶಾಂತರಾಜು ಸಿಐಡಿ ವಿಚಾರಣೆಗೆ ಕರೆಸಿ ಗ್ರಿಲ್ ಮಾಡಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿ ಪಿಎಸ್ಐ ಹಗರಣ ಹೊರಬರ್ತಿದ್ದಂತೆ ISDಗೆ ವರ್ಗಾವಣೆಯಾಗಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಈ ಸಂಬಂಧ ಶಾಂತರಾಜುಗೆ ಸಿಐಡಿ ಗ್ರಿಲ್ ಮಾಡುತ್ತಿದೆ.

ಕೆಲ ಸಾಕ್ಣ್ಯಧಾರದ ಹಿನ್ನಲೆ ಸಿಐಡಿ ಅಧಿಕಾರಿಗಳು ಡಿವೈಎಸ್ಪಿ ಶಾಂತರಾಜು ವಿಚಾರಣೆ ನಡೆಸಿದ್ದಾರೆ. ಅಭ್ಯರ್ಥಿಗಳಿಗೆ OMR ಶೀಟ್ ತಿದ್ದಲು ಡೀಲ್ ನಡೆದಿದೆ ಎನ್ನಲಾಗುತ್ತಿದೆ. ಸೀಲ್ ಆಗಿ ಬರ್ತಿದ್ದ OMR ಶೀಟ್ ಗಳೇ ಎಕ್ಸ್ ಚೇಂಜ್ ಆಗುತ್ತಿದ್ದವು. ನೇಮಕಾತಿ ವಿಭಾಗದಲ್ಲಿ ಅವ್ಯವಹಾರ ಶಂಕೆ ಹಿನ್ನೆಲೆ ಸಿಐಡಿ ತನಿಖೆ ಚುರುಕುಗೊಳಿಸಿದೆ. ಖಾಕಿಯನ್ನೂ ಬಿಡದೆ ಕಾರ್ಲಟನ್ ಭವನ ಕಚೇರಿಯಲ್ಲಿ ಸಿಐಡಿ ಗ್ರಿಲ್ ನಡೆಸಿದೆ. ಪಿಸಿ ಯಿಂದ ಡಿವೈಎಸ್ಪಿ ಹುದ್ದೆಗೇರಿದ ಶಾಂತರಾಜು, ಸರ್ವಿಸ್ನ ಬಹುತೇಕ ಸಮಯ ನೇಮಕಾತಿ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸಿದ್ದರು. ಒಒಡಿ ಮೇಲೆ ನೇಮಕಾತಿ ವಿಭಾಗಕ್ಕೆ ಕರ್ತವ್ಯಕ್ಕೆ ನೇಮಕಗೊಂಡಿದ್ದರು. 2006 ರಲ್ಲಿ ಪಿಎಸ್ಐ ಆಗಿ ನೇಮಕಾತಿ ವಿಭಾಗದಲ್ಲೇ ಮುಂದುವರೆದು ಆ ಬಳಿಕ ಇನ್ಸ್ ಪೆಕ್ಟರ್ ಆಗಿ ISD ಗೆ ಪ್ರಮೋಶನ್ ಪಡೆದಿದ್ದರು. ಮತ್ತೆ ISD ಯಿಂದ ನೇಮಕಾತಿ ವಿಭಾಗಕ್ಕೆ ವಾಪಾಸ್ ಬಂದು ಠಿಕಾಣಿ ಹೂಡಿದ್ದರು. ವರ್ಷಗಟ್ಟಲೇ ನೇಮಕಾತಿ ವಿಭಾಗದಲ್ಲೇ ಠಿಕಾಣಿ ಹೂಡಿದ್ದರು.

ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ವರ್ಗಾವಣೆ
ಸದ್ಯ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜುರನ್ನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿಯ ಆಪ್ತನಾಗಿರುವ ಶಾಂತರಾಜು ಪ್ರಕರಣ ಹೊರಬರುತ್ತಿದ್ದಂತೆ 2ನೇ ಅಧಿಕಾರಿ ವರ್ಗಾವಣೆಯಾಗಿದೆ. ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ರನ್ನು ಏಪ್ರಿಲ್ 27ರಂದು ಎತ್ತಂಗಡಿ ಮಾಡಲಾಗಿತ್ತು.

ಶಾಂತರಾಜುಗೆ ಇದೇಯಾ ಪಕ್ಷಾತೀತಾ ರಾಜಕಾರಣಿಗಳ ಶ್ರೀರಕ್ಷೆ?
ಯಾವುದೇ ಪಕ್ಷ ಅಧಿಕಾರಿದಲ್ಲಿದ್ರು ಶಾಂತರಾಜು ಮಾತ್ರ ನೇಮಕಾತಿ ವಿಭಾಗದಲ್ಲೇ ಠಿಕಾಣಿ ಹೂಡಿದ್ದರು. ಯಾವುದೇ ವಿಭಾಗಕ್ಕೆ ಎತ್ತಂಗಡಿ ಮಾಡಿದ್ರು ಮತ್ತೆ ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಾಸ್ ಆಗುತ್ತಿದ್ದರು. ಖಡಕ್ ಐಪಿಸಿ ಅಧಿಕಾರಿ ಮಧುಕರ್ ಶೆಟ್ಟಿ ಡಿಜಿಪಿ ಅವಧಿಯಲ್ಲಿ ಶಾಂತರಾಜು ಎತ್ತಂಗಡಿ ಆಗಿದ್ದರು. ಡಿಜಿಪಿ ಮಧುಕರ್ ಶೆಟ್ಟಿ ಮೂರು ವರ್ಷ ಒಂದೇ ಕಡೆ ಠಿಕಾಣಿ ಹೂಡಿದ್ದವರ ವರ್ಗಾವಣೆ ಮಾಡಿದ್ದರು. ಈ ವೇಳೆ ISD ಗೆ ವರ್ಗಾವಣೆ ಗೊಂಡು ಬಳಿಕ ಮತ್ತೆ ನೇಮಕಾತಿ ವಿಭಾಗಕ್ಕೆ ವಾಪಾಸ್ ಟ್ರಾನ್ಸ್ ಫರ್ ಆಗಿದ್ದರು. ಮಧುಕರ್ ಶೆಟ್ಟಿ ವರ್ಗಾವಣೆ ಬಳಿಕ‌ ಶಾಂತರಾಜು ಮತ್ತೆ ಸಿಐಡಿಗೆ ರೀ ಎಂಟ್ರಿ‌ ಕೊಟ್ಟಿದ್ದರು. ಸದ್ಯ ISD ಗೆ ವರ್ಗಾವಣೆ ಆಗಿರುವ ಡಿವೈಎಸ್ ಪಿ ಶಾಂತರಾಜು ಮೇಲೆ ಸಿಐಡಿ ದಟ್ಟವಾದ ಅನುಮಾನ ವ್ಯಕ್ತಪಡಿಸಿದೆ.

ಕೆಮ್ಮೋ ಮೂಲಕ ಸಿಗ್ನಲ್ ನೀಡ್ತಿದ್ದ ಅಭ್ಯರ್ಥಿಗಳು
ಇನ್ನು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಕೆಮ್ಮೋ ಮೂಲಕ ಅಭ್ಯರ್ಥಿಗಳು ಸಿಗ್ನಲ್ ನೀಡ್ತಿದ್ದರಂತೆ. ತಮಗೆ ಯಾವ ಸಿರಿಜ್ ಪ್ರಶ್ನೆಪತ್ರಿಕೆ ಬಂದಿದೆ ಅನ್ನೋ ಮಾಹಿತಿ ರವಾನೆ ಮಾಡ್ತಿದ್ದರು. ಒಮ್ಮೆ ಕೆಮ್ಮಿದ್ರೆ ಏ ಸಿರಿಜ್, ಎರಡು ಬಾರಿ ಕೆಮ್ಮಿದ್ರೆ ಬಿ‌ ಸಿರಿಜ್ ಪ್ರಶ್ನೆ ಪತ್ರಿಕೆ ಅನ್ನೋ ಸಿಗ್ನಲ್ ನೀಡ್ತಿದ್ದರು. ಸಿಗ್ನಲ್ ಸಿಗುತ್ತಿದ್ದಂತೆ ಆ ಸೀರಿಸ್ ಉತ್ತರ ಹೇಳ್ತಿದ್ದರು. ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳ್ತಿದ್ದರು. ಉತ್ತರ ಹೇಳಲಿಕ್ಕೆಂದೆ ಕೆಲವರನ್ನು ಕರೆದುಕೊಂಡು ಹೋಗುತ್ತಿದ್ದ ಕಿಂಗ್ ಪಿನ್ಗಳು ಸೇಫ್ ಜಾಗದಲ್ಲಿ ಕೂತು ಉತ್ತರ ಹೇಳ್ತಿದ್ದರು. ಈ ಬಗ್ಗೆ ಬಂಧಿತ‌ ಅಭ್ಯರ್ಥಿಗಳಿಂದ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ

ಕಿಂಗ್ ಪಿನ್ ಗಳ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡಿರೋ ಕೆಲ ಅಧಿಕಾರಿಗಳಿಗೆ ಸಿಐಡಿ ಬಲೆ ಬೀಸಿದೆ. ಪೊಲೀಸ್ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳಿಂದಲೇ ಡೀಲ್ ನಡೆದಿರುವುದು ಬಯಲಾಗಿದೆ. ಅಭ್ಯರ್ಥಿ ಗಳ ಪರವಾಗಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್ಗೆ ಅಧಿಕಾರಿಗಳು ಹಣ ನೀಡಿದ್ದಾರೆ. ರುದ್ರಗೌಡ ಪಾಟೀಲ್ ಗೆ ಹೇಳಿ ಅಧಿಕಾರಿಗಳು ಡೀಲ್ ಕುದುರಿಸುತ್ತಿದ್ದರು. ಈಗಾಗಲೇ ಓರ್ವ ಅಧಿಕಾರಿಯನ್ನು ಕರೆದು ವಿಚಾರಣೆ ಕೂಡಾ ನಡೆಸಿದ್ದು ಸಿಐಡಿ ಅಕ್ರಮದ ಸಾಕ್ಷಿ ಸಂಗ್ರಹಿಸುತ್ತಿದೆ.

ಪರೀಕ್ಷಾ ಅಕ್ರಮಕ್ಕೆ ನೆರವು ನೀಡಿದ್ದ ಮಂಜುನಾಥ ಮೇಳಕುಂದಿ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿವಾಸಿ ಶಾಂತಿಬಾಯಿ PSI ಪರೀಕ್ಷೆ ಬರೆಯಲು ಕಿಂಗ್ಪಿನ್ಗಳು ನೆರವು ನೀಡಿದ್ದರು. ಕಲಬುರಗಿ ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ನೆರವು ನೀಡಿದ್ದರು. ಪರೀಕ್ಷೆಯಲ್ಲಿ ಅಕ್ರಮವೆಸಗಿ ಶಾಂತಿಬಾಯಿ ಆಯ್ಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಮಂಜುನಾಥ ಮೇಳಕುಂದಿ ₹40 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದರು. ಪರೀಕ್ಷೆಗೂ ಮುನ್ನವೇ ಶಾಂತಿಬಾಯಿ ಪತಿ 10 ಲಕ್ಷ ಹಣ ನೀಡಿದ್ದರು. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬರುತ್ತಿದ್ದಂತೆ ಉಳಿದ 30 ಲಕ್ಷ ಹಣ ನೀಡುವಂತೆ ಮೇಳಕುಂದಿ ಬೇಡಿಕೆ ಇಟ್ಟಿದ್ದ. 30 ಲಕ್ಷ ಹಣ ಹೊಂದಿಸಲು ಶಾಂತಿಬಾಯಿ ಪತಿ ಪರದಾಡುತ್ತಿದ್ದರು. ಆಯ್ಕೆಪಟ್ಟಿಯಲ್ಲಿ ಹೆಸರು ಬರುತ್ತಿದ್ದಂತೆ ಶಾಂತಿಬಾಯಿ ತಿರುಪತಿಗೆ ತೆರಳಿದ್ದರು. ಪತಿ, ಪುತ್ರನ ಜತೆ ಕೇಶಮುಂಡನ ಮಾಡಿಸಿಕೊಂಡಿದ್ದರು. ಮೇಳಕುಂದಿಗೆ ತಿರುಪತಿಯಿಂದ ಲಾಡು ಪ್ರಸಾದ ತಂದು ನೀಡಿದ್ದರು. ನನಗೆ ತಿಮ್ಮಪ್ಪನ ಲಾಡು ಬೇಡ, ಹಣ ಬೇಕೆಂದು ಮೇಳಕುಂದಿ ಕೇಳಿದ್ದ. ಸದ್ಯ ತಲೆ ಮರೆಸಿಕೊಂಡಿರುವ ಪಿಎಸ್ಐ ಅಭ್ಯರ್ಥಿ ಶಾಂತಿಬಾಯಿಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಕಾಲು ಕಳೆದುಕೊಂಡ ಡೆಲಿವರಿ ಬಾಯ್, ಕಮಿಷನ್ ಗಲಾಟೆಗೆ ಎಪಿಎಂಸಿ ಏಜೆಂಟ್ ಕೊಲೆ

Lord Ganesha: ಇಂದು ಬುಧವಾರ ಗಣಪತಿಗೆ ಈ ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ