ಅಪಘಾತದಲ್ಲಿ ಕಾಲು ಕಳೆದುಕೊಂಡ ಡೆಲಿವರಿ ಬಾಯ್, ಕಮಿಷನ್ ಗಲಾಟೆಗೆ ಎಪಿಎಂಸಿ ಏಜೆಂಟ್ ಕೊಲೆ

ಟಿಪ್ಪರ್ ಡಿಕ್ಕಿಯಾಗಿ ಡೆಲಿವರಿ ಬಾಯ್​ ಕಾಲು ಕಳೆದುಕೊಂಡ ಘಟನೆ ಬೆಂಗಳೂರಿನ ಆದರ್ಶ ಜಂಕ್ಷನ್​ನಲ್ಲಿ ತಡರಾತ್ರಿ ಸಂಭವಿಸಿದೆ.

ಅಪಘಾತದಲ್ಲಿ ಕಾಲು ಕಳೆದುಕೊಂಡ ಡೆಲಿವರಿ ಬಾಯ್, ಕಮಿಷನ್ ಗಲಾಟೆಗೆ ಎಪಿಎಂಸಿ ಏಜೆಂಟ್ ಕೊಲೆ
ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಡೆಲಿವರಿ ಬಾಯ್ ಕಾಲು ನಜ್ಜುಗುಜ್ಜಾಗಿದೆ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 04, 2022 | 7:32 AM

ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಡೆಲಿವರಿ ಬಾಯ್​ ಕಾಲು ಕಳೆದುಕೊಂಡ ಘಟನೆ ಬೆಂಗಳೂರಿನ ಆದರ್ಶ ಜಂಕ್ಷನ್​ನಲ್ಲಿ ತಡರಾತ್ರಿ ಸಂಭವಿಸಿದೆ. ಅಪಘಾತದಲ್ಲಿ ಉತ್ತರ ಕರ್ನಾಟಕದ ಪವನ್ ಕುಮಾರ್ ಅವರ ಕಾಲು ನಜ್ಜುಗುಜ್ಜಾಗಿದೆ. ಗಾಯಾಳು ಪವನ್​ ಕುಮಾರ್​ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಂಜೆಯವರೆಗೆ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಅವರು, ನಂತರ ತಡರಾತ್ರಿವರೆಗೆ ಡೆಲಿವರಿ ಬಾಯ್​ ಆಗಿ ದುಡಿಯುತ್ತಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಆಸ್ಪತ್ರೆಗೆ ಸೇರಿದ್ದರಿಂದ ಕುಟುಂಬ ಕಂಗಾಲಾಗಿದೆ. ಮುಂದೆ ನಮ್ಮ ಪರಿಸ್ಥಿತಿ ಹೇಗೆಂದು ಪವನ್ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಟಿಪ್ಪರ್​ ಚಾಲಕ ಕುಡಿದ ಮತ್ತಿನಲ್ಲಿ ಚಾಲನೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದಿರುವ ಸಂಚಾರ ವಿಭಾಗದ ಪೊಲೀಸರು ಟಿಪ್ಪರ್ ಜಪ್ತಿ ಮಾಡಿದ್ದಾರೆ. 40 ವರ್ಷ ವಯಸ್ಸಿನ ಪವನ್ ಕುಮಾರ್ ಕುಟುಂಬ ನಿರ್ವಹಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಅಪಘಾತದಲ್ಲಿ ಅವರ ಎಡಗಾಲಿಗೆ ತೀವ್ರ ಹಾನಿಯಾಗಿದೆ. ಪೊಲೀಸರು ಪವನ್ ಕುಮಾರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಪಿಎಂಸಿ ಏಜೆಂಟ್ ಹತ್ಯೆ

ಮೈಸೂರಿನಲ್ಲಿ ಕಮಿಷನ್ ವಿಚಾರಕ್ಕೆ ಎಪಿಎಂಸಿ ಏಜೆಂಟ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಂಡೀಪಾಳ್ಯ ಎಪಿಎಂಸಿ ಮಾರ್ಕೆಟ್​ನಲ್ಲಿ ಕೊಲೆ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ನಿವಾಸಿ ರವಿ ಅಲಿಯಾಸ್​ ಕ್ಯಾಪ್ಸಿಕಂ ರವಿ ಕೊಲೆಯಾದವರು. ಗೌತಮ್ ಸೇರಿದಂತೆ ನಾಲ್ವರು ದುಷ್ಕರ್ಮಿಗಳ ತಂಡದ ಈ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಕಮಿಷನ್ ವಿಚಾರದಲ್ಲಿ ಗೌತಮ್, ರವಿ ನಡುವೆ ಜಗಳವಾಗಿತ್ತು. ಇದೇ ದ್ವೇಷದಿಂದ ರವಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜೀಪ್ ಮೇಲೆ ಕಲ್ಲು ತೂರಿದ ಯುವಕ

ಕುಡಿದ ಮತ್ತಿನಲ್ಲಿ ಪೊಲೀಸ್ ಜೀಪ್ ಮೇಲೆ ಯುವಕನೊಬ್ಬ ಕಲ್ಲು ತೂರಿದ ಘಟನೆ ನಡೆದಿದೆ. ಬಸವ ಜಯಂತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಕೆಲ ಯುವಕರು ಕುಣಿಯುತ್ತಿದ್ದರು. ರಾತ್ರಿ 11 ಗಂಟೆಯ ನಂತರ ಡಿಜೆ ಬಂದ್ ಮಾಡುವಂತೆ ಪೊಲೀಸರು ಯುವಕರಿಗೆ ತಿಳಿ ಹೇಳಿದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕ ಪೊಲೀಸ್ ವಾಹನದ ಮೇಲೆ ಕಲ್ಲು ತೂದ್ದರಿಂದ ಪೊಲೀಸ್ ಜೀಪ್​ನ ಗಾಜು ಪುಡಿಯಾಯಿತು. ಘಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರನ್ನು ಡಿವೈಎಸ್​ಪಿ ಬಸವರಾಜ್ ಯಲಿಗಾರ ತರಾಟೆಗೆ ತೆಗೆದುಕೊಂಡರು.

ಗ್ಲಾಸ್ ಒಡೆದ ಸಂಗತಿಯನ್ನು ನಂತರ ಪರಿಶೀಲಿಸೋಣ. ನೀವು ಎನು ಮಾಡುತ್ತಿದ್ದೀರಿ ಎಂದು ನಿಮ್ಮ ಆತ್ಮವನ್ನು ಕೇಳಿಕೊಳ್ಳಿ. ಬಸವಣ್ಣನವರ ಫೋಟೊ ಇರಿಸಿಕೊಂಡು ಹೀಗೆಲ್ಲಾ ಕುಣಿಯುವುದು ಸರಿಯೇ ಎಂದು ಮೋದಿ ಪ್ರಶ್ನಿಸಿದರು. ಬಸವ ಜಯಂತಿಗೆ ಡಿಜೆ ಯಾಕೆ ಬೇಕು? ಡಿಜೆ ಹಾಕಿ ಕುಣಿಯುವುದಿದ್ದರೆ ನಿಮ್ಮ ಹೊಲಗಳಲ್ಲಿ ಕುಣಿಯಿರಿ. ಬಸವ ಜಯಂತಿ ದಿನ ಕುಡಿಯುವುದು, ಕುಣಿಯುದು ಸರಿಯೇ ಎಂದು ಅಲ್ಲಿದ್ದ ಸಾರ್ವಜನಿಕರನ್ನು ಡಿವೈಎಸ್​ಪಿ ಯಲಿಗಾರ್ ಪ್ರಶ್ನಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಿಗೂಢವಾಗಿ ಕೊಲೆಯಾದ ಮಹಿಳಾ ಉದ್ಯಮಿ ಕೇಸ್; ಮರ್ಡರ್ ಮಾಹಿತಿ ಟಿವಿ9ಗೆ ಲಭ್ಯ

ಇದನ್ನೂ ಓದಿ: Crime News: ಬೆಂಗಳೂರಿನ ಸೂಪರ್ ಮಾರ್ಕೆಟ್​ನಲ್ಲಿ ಕಳವು, ಮೈಸೂರಿನಲ್ಲಿ ಗಾಂಜಾ ಕಳ್ಳರ ಬಂಧನ

Published On - 7:32 am, Wed, 4 May 22