Rashtriya Bal Puraskar: ಬೆಂಗಳೂರಿನ ರಿಷಿ ಶಿವ ಪ್ರಸನ್ನಗೆ ಬಾಲ ಪುರಸ್ಕಾರ; 8ರ ಪೋರನ ಸಾಹಸ ಅಷ್ಟಿಷ್ಟಲ್ಲ!
ಎಂಟನೇ ವಯಸ್ಸಿಗೇ ಮೂರು ಆ್ಯಂಡ್ರಾಯ್ಡ್ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿರುವ ರಿಷಿ ಶಿವ ಪ್ರಸನ್ನ ಎರಡು ಪುಸ್ತಕಗಳನ್ನೂ ಬರೆದಿದ್ದಾನೆ. ಮೂರನೇ ಪುಸ್ತಕ ಬರೆಯುತ್ತಿದ್ದಾನೆ. ಎಲೆ ಮರೆಯ ಕಾಯಿಯಂತಿದ್ದ ಆ ಪೋರನನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಗುರುತಿಸಿದೆ.
ಬೆಂಗಳೂರು: ಆ ಬಾಲಕನ ಐಕ್ಯು (IQ) ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ಗಿಂತಲೂ (Albert Einstein) ಹೆಚ್ಚಿನದ್ದು! ಆತ ಎಂಟನೇ ವಯಸ್ಸಿಗೇ ಮೂರು ಆ್ಯಂಡ್ರಾಯ್ಡ್ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಎರಡು ಪುಸ್ತಕಗಳನ್ನೂ ಬರೆದಿದ್ದಾನೆ. ಇಷ್ಟಾದರೂ ಎಲೆ ಮರೆಯ ಕಾಯಿಯಂತಿದ್ದ ಆ ಪೋರನನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ (Pradhan Mantri Rashtriya Bal Puraskar Award) ಗುರುತಿಸಿದೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಬೆನ್ನಲ್ಲೇ ಬಾಲಕನ ಹೆಸರು ರಾಜ್ಯದಾದ್ಯಂತ ಮನೆ ಮಾತಾಗಿದೆ. ಇದು ಮತ್ಯಾರೂ ಅಲ್ಲ, ಬೆಂಗಳೂರಿನ (Bengaluru) ಉತ್ತರಹಳ್ಳಿಯ ಬಾಲಕ ರಿಷಿ ಶಿವ ಪ್ರಸನ್ನ (Rishi Shiv Prasanna). ಹೌದು ಶಿವ ಪ್ರಸನ್ನನ ಸಾಧನೆ ಗುರುತಿಸಿರುವ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ಅಲ್ಬರ್ಟ್ ಐನ್ಸ್ಟೈನ್ಗಿಂತಲೂ ಹೆಚ್ಚಿನ ಐಕ್ಯು!
ಅಂದಹಾಗೆ ಬಾಲಕ ರಿಷಿ ಶಿವ ಪ್ರಸನ್ನನ ಐಕ್ಯು ಮಟ್ಟ 180 ಇದೆ. ಇದು ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ಐಕ್ಯುಗಿಂತಲೂ ಹೆಚ್ಚು. ನೊಬೆಲ್ ಪುರಸ್ಕೃತ ವಿಜ್ಞಾನಿ ಹೊಂದಿದ್ದ ಐಕ್ಯು 160 ಆಗಿತ್ತು. ಐಕ್ಯು ಎನ್ನುವುದು ಜನರ ಬುದ್ಧಮತ್ತೆ ಅಳೆಯುವ ಪ್ರಮಾಣವಾಗಿದೆ. 130ಕ್ಕಿಂತ ಹೆಚ್ಚು ಐಕ್ಯು ಇರುವವರನ್ನು ಹೆಚ್ಚು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹೆಚ್ಚು ಐಕ್ಯು ಹೊಂದಿರುವ ಜನರುಳ್ಳ ಮೆನ್ಸಾ ಇಂಟರ್ನ್ಯಾಷನಲ್ ಸದಸ್ಯನೂ ಆಗಿದ್ದಾನೆ ರಿಷಿ. ಯೂಟ್ಯೂಬರ್ ಕೂಡ ಆಗಿರುವ ಈತ ವಿಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಾನೆ.
ಇದನ್ನೂ ಓದಿ: Padma Awards: ಪದ್ಮ ವಿಭೂಷಣ ಪ್ರಶಸ್ತಿ ಸಿಗುವ ನಿರೀಕ್ಷೆ ಇರಲಿಲ್ಲ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ
ಬಾಲಕ ರಿಷಿ ಮಕ್ಕಳಿಗಾಗಿ ‘ಐಕ್ಯು ಟೆಸ್ಟ್ ಆ್ಯಪ್’, ‘ಕಂಟ್ರೀಸ್ ಆಫ್ ದಿ ವರ್ಲ್ಡ್’, ‘ಕೋವಿಡ್ ಹೆಲ್ಪ್ಲೈನ್ ಬೆಂಗಳೂರು’ ಎಂಬ ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ. ಎರಡು ಪುಸ್ತಕಗಳನ್ನು ಬರೆದಿದ್ದು, ಮೂರನೇ ಪುಸ್ತಕ ಬರೆಯುತ್ತಿದ್ದಾನೆ.
ಮೂಲತಃ ನಂಜನಗೂಡಿನ ಬಾಲಕ
ಮೂಲತಃ ಮೈಸೂರಿನ ನಂಜನಗೂಡಿನ ರಿಷಿ ಸದ್ಯ ತಂದೆ-ತಾಯಿ ಜತೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ. ರಿಷಿಯ ತಂದೆ ಪ್ರಸನ್ನ ಕುಮಾರ್ ಎಂ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ರಾಚೇಶ್ವರಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸರಿ ಹಂತದ ಶಿಕ್ಷಣದ ಸಂದರ್ಭದಲ್ಲೇ ಬಾಲಕ ರಿಷಿ ಅಗಾಧ ಬುದ್ಧಿಮತ್ತೆ ಹೊಂದಿರುವುದು ಶಿಕ್ಷಕರ ಅರಿವಿಗೆ ಬಂದಿತ್ತು. ಮೂರನೇ ವಯಸ್ಸಿನಲ್ಲೇ ಈ ಪೋರ ಸೌರ ವ್ಯವಸ್ಥೆ, ಗ್ರಹಗಳ ಬಗ್ಗೆ ಮಾತನಾಡುತ್ತಿದ್ದ. ಬಾಲಕನ ವಿಜ್ಞಾನದ ಆಸಕ್ತಿ ನಂತರ ತಂತ್ರಜ್ಞಾನದ ಕಡೆಗೆ ಹೊರಳಿತು. ಐದನೇ ವಯಸ್ಸಿನಲ್ಲೇ ಕೋಡಿಂಗ್ ಅನ್ನೂ ಕಲಿತಿದ್ದ ರಿಷಿ ಎಂಬುದು ಶಿಕ್ಷಕರು ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.
ಸಚಿವೆ ಸ್ಮೃತಿ ಇರಾನಿ ‘ಪಾಸ್ತಾಮ್ಯಾನ್’ ಎಂದಿದ್ದೇಕೆ?
ನಿನಗೇನು ಇಷ್ಟವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕೇಳಿದರು. ‘ಪಾಸ್ತಾ’ ಎಂದೆ. ಅದಕ್ಕವರು ‘ಪಾಸ್ತಾಮ್ಯಾನ್’ ಎಂದು ಅಡ್ಡ ಹೆಸರಿಟ್ಟರು. ಜತೆಗೆ ನಮಗೆಲ್ಲರಿಗೂ ಪಾನಿಪೂರಿ ಕೊಡಿಸಿದರು ಎಂದು ಸಂತಸ ವ್ಯಕ್ತಪಡಿಸಿದ್ದಾನೆ ರಿಷಿ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ದೊಡ್ಡ ಗೌರವ ಎಂದು ರಿಷಿ ಪ್ರತಿಕ್ರಿಯಿಸಿರುವುದಾಗಿ ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪ್ರಧಾನಿಯವರು ನಾನು ಅಭಿವೃದ್ಧಿಪಡಿಸಿದ ಆ್ಯಪ್ಗಳ ಬಗ್ಗೆ ಕೇಳಿ ತಿಳಿದುಕೊಂಡರು. ಅವರಿಗೆ ಆ್ಯಪ್ಗಳ ಬಗ್ಗೆ ವಿವರಿಸಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹರ್ಷ ವ್ಯಕ್ತಪಡಿಸಿದ್ದಾನೆ ರಿಷಿ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Fri, 27 January 23