Ernesto Che Guevara: ಔಷಧಗಳಿಗೆ ಅಮೆರಿಕ ಪೇಟೆಂಟ್ ಆಟ, ಕ್ಯುಬಾಕ್ಕೆ ಸಂಕಟ; ಆಧುನಿಕ ಶೋಷಣೆಯ ಮುಖ ತೆರೆದಿಟ್ಟ ಚೆಗೆವಾರ ಪುತ್ರಿ
Aleida Guevara: ನಮಗೆ ಔಷಧಿಗಳನ್ನು ಕೊಟ್ಟಿದ್ದಾರೆ ಎಂದು ತಿಳಿದರೆ ಅಂಥ ದೇಶಗಳನ್ನೂ ಅಮೆರಿಕ ಕಾಡುತ್ತದೆ ಎಂದು ಕ್ಯೂಬಾ ದೇಶದ ಸಂಕಟವನ್ನು ಅಲಿಡಾ ವಿವರಿಸಿದರು.
ಬೆಂಗಳೂರು: ‘ಅಪ್ಪನಿಗೆ ಹುಷಾರಿಲ್ಲದಾಗ ವೈದ್ಯರು ಸಿಗಾರ್ ಸೇದುವುದನ್ನು ಕಡಿಮೆ ಮಾಡುವಂತೆ ಸೂಚಿಸಿದ್ದರು. ಇದರಿಂದ ಅಪ್ಪನಷ್ಟೇ ಸಿಗಾರ್ ಕಂಪನಿಯ ಕಾರ್ಮಿಕರೂ ಚಿಂತಿತರಾಗಿದ್ದರು. ಅತ್ಯಂತ ಬೇಸರದಿಂದಲೇ ಅವರು ಒಂದು ಅಡಿ ಉದ್ದದ ಸಿಗಾರ್ ತಂದುಕೊಟ್ಟಿದ್ದರು’ ಎಂದು ತನ್ನ ಅಪ್ಪ, ಕ್ಯೂಬಾದ ಯಶಸ್ವಿ ಕ್ರಾಂತಿಯ ಹರಿಕಾರ ಹಾಗೂ ಇಂದಿಗೂ ಕೋಟ್ಯಂತರ ಯುವಕರ ಪ್ರೇರಣಾಶಕ್ತಿ ಅರ್ನೆಸ್ಟೊ ಚೆಗೆವಾರ (Ernesto Che Guevara) ಅವರ ಬದುಕಿನ ಅಪರೂಪದ ಪುಟವೊಂದನ್ನು ತೆರೆದಿಟ್ಟರು ಅಲಿಡಾ ಗೆವಾರ (Aleida Guevara). ನಗರದಲ್ಲಿ ಗುರುವಾರ (ಜ 19) ಸಂಜೆ ವಿವಿಧ ಪ್ರಗತಿಪರ ಸಂಘಟನೆಗಳ ಸಮಾನ ಮನಸ್ಕರು ಒಗ್ಗೂಡಿ ಆಯೋಜಿಸಿದ್ದ ‘ನಾಗರಿಕ ಸನ್ಮಾನ ಮತ್ತು ಕ್ಯೂಬಾ ಸೌಹಾರ್ದತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಯೂಬಾದ ಪ್ರಚಲಿತ ವಿದ್ಯಮಾನಗಳು ಹಾಗೂ ಸಹಜ ಬದುಕಿನ ಸಂಕಷ್ಟಗಳ ಬಗ್ಗೆಯೂ ಅವರ ಮಾತು ಹೊರಳಿತು. ‘ಅಮೆರಿಕಾ ಇನ್ನೂ ಕ್ಯೂಬಾದ ಬಗ್ಗೆ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಪಾಲಿಸುತ್ತಿದೆ. ಕೊವಿಡ್ ಸಮಯದಲ್ಲಿ ನನ್ನ ದೇಶ ಇನ್ನಿಲ್ಲದಂತೆ ನಲುಗಿದೆ. ನಮ್ಮಲ್ಲಿದ್ದ ಎಲ್ಲಾ ಮೀಸಲು ನಿಧಿಗಳು ಜನರ ಬದುಕು ಉಳಿಸುವ ಉದ್ದೇಶಕ್ಕಾಗಿ ಬಳಸಬೇಕಾಯಿತು’ ಎಂದು ವಿವರಿಸಿದರು.
‘ಬಹುತೇಕ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅದು ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾವುದಾದರೂ ದೇಶ ಅಮೆರಿಕದಿಂದ ಔಷಧಿಗಳನ್ನು ಖರೀದಿಸಿ, ನಾವು ಆ ದೇಶದಿಂದ ಔಷಧಗಳನ್ನು ಖರೀದಿಸಬೇಕಿದೆ. ನಮಗೆ ಔಷಧಿಗಳನ್ನು ಕೊಟ್ಟಿದ್ದಾರೆ ಎಂದು ತಿಳಿದರೆ ಅಂಥ ದೇಶಗಳನ್ನೂ ಅಮೆರಿಕ ಕಾಡುತ್ತದೆ. ಹೀಗಾಗಿ ನಾವು ಕನಿಷ್ಠ ಐದು ಜನರ ಕೈದಾಟಿದ ಮೇಲೆ ಔಷಧಿ ಕೊಳ್ಳಬೇಕು. ಆಗ ಬೆಲೆ ಎಷ್ಟು ಹೆಚ್ಚಾಗುತ್ತದೆ ಯೋಚಿಸಿ’ ಎಂದು ತಮ್ಮ ದೇಶದ ಸಂಕಟ ತೋಡಿಕೊಂಡರು.
‘ಒಂದು ದೇಶವಾಗಿ ಕ್ಯೂಬಾ ಈ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದೆ. ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ. ನಮ್ಮ ವಿಜ್ಞಾನಿಗಳು ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್ ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ನೇಸಲ್ ವ್ಯಾಕ್ಸಿನ್ ಕಂಡುಹಿಡಿದೆವು. ಆಗ ನಮ್ಮ ಜೊತೆಗೆ ನಿಂತಿದ್ದು ಭಾರತ, ಕೇರಳ. ನಾವು ನಂಬಿರುವುದು ಒಗ್ಗಟ್ಟನ್ನು ಮಾತ್ರ’ ಎಂದು ಭಾರತದ ಬಗ್ಗೆ ಕ್ಯೂಬನ್ನರಿಗೆ ಇರುವ ಪ್ರೀತಿಯ ಬಗ್ಗೆ ಹೇಳಿದರು.
‘ಒಬ್ಬ ಕ್ರಾಂತಿಕಾರನಿಗೆ ಬೇಕಾದುದು ಏನು’ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡ ಅವರು ತನ್ನ ತಂದೆ ಚೆಗೆವಾರರ ಮಾತು ನೆನಪಿಸಿಕೊಂಡರು. ‘ಅಪ್ಪ ಹೇಳುತ್ತಿದ್ದರು, ಒಬ್ಬ ಕ್ರಾಂತಿಕಾರಿಗೆ ಹುಚ್ಚು ಪ್ರೀತಿ ಬೇಕು. ಹುಚ್ಚನಂತೆ ಪ್ರೀತಿಸಬಲ್ಲವನು ಮಾತ್ರ ಕ್ರಾಂತಿಕಾರಿಯಾಗಬಲ್ಲ. ಅಪ್ಪನಿಗೆ ಕವನಗಳು ಎಂದರೆ ವಿಪರೀತ ಪ್ರೀತಿ. ರಾತ್ರಿ ಹೊತ್ತು ಅಮ್ಮನಿಗಾಗಿ ಕವಿತೆಗಳನ್ನು ಓದುತ್ತಿದ್ದರು. ಕ್ರಾಂತಿಗಾಗಿ ಮನೆಬಿಟ್ಟು ಹೋಗುವಾಗ ಅವರ ದನಿಯಲ್ಲಿ ಕವಿತೆಗಳನ್ನು ರೆಕಾರ್ಡ್ ಮಾಡಿ, ಅಮ್ಮನಿಗಾಗಿ ಬಿಟ್ಟು ಹೋಗುತ್ತಿದ್ದರು’ ಎಂದು ನೆನಪು ಮೊಗೆದರು.
ಮಕ್ಕಳಂತೆ ಸಂಭ್ರಮಿಸಿದ ಅಲಿಡಾ
ಕಾರ್ಯಕ್ರಮದಲ್ಲಿ ಚೆಗೆವಾರ ನೆನಪು ಮತ್ತು ವೈಚಾರಿಕ ಪ್ರಸ್ತುತತೆಯ ಬಗ್ಗೆ ಜಿ.ರಾಮಕೃಷ್ಣ, ಗುರುಶಾಂತಪ್ಪ, ನಾಗಮೋಹನ್ ದಾಸ್, ಪಿಜಿಆರ್ ಸಿಂಧ್ಯಾ, ಎಚ್ ಎಲ್ ಪುಷ್ಪಾ, ಸಿದ್ದನಗೌಡ, ಮಾವಳ್ಳಿ ಶಂಕರ್, ಬರಗೂರು ಮಾತನಾಡಿದರು. ಜಿ.ಎನ್.ಮೋಹನ್ ಅವರು ಕ್ಯೂಬಾ ಮತ್ತು ಚೆಗೆವಾರ ಕುರಿತು ಆಸಕ್ತಿದಾಯಕ ವಿಷಯಗಳನ್ನು ಹೇಳುತ್ತಿದ್ದರು. ಚಿಂತನ್ ವಿಕಾಸ್ ಅವರ ಹಾಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿಯ ಆಯ್ದಭಾಗದ ರಂಗಪ್ರಸ್ತುತಿ ನಡೆಯಿತು. ದೊಡ್ಡ ಗುಲಾಬಿ ಹಾರ, ಮೈಸೂರು ಪೇಟಾ ಇಟ್ಟಾಗ ಅಲಿಡಾ ಅಕ್ಷರಶಃ ಮಕ್ಕಳಂತೆ ಸಂಭ್ರಮಿಸಿದರು.
ಇದನ್ನೂ ಓದಿ: Che Guevara: ಬೆಂಗಳೂರು, ಬಾಗೇಪಲ್ಲಿಯಲ್ಲಿ ಕ್ಯೂಬಾದ ಕ್ರಾಂತಿಕಾರಿ ಚೆಗೆವಾರ ಮಗಳು, ಮೊಮ್ಮಗಳಿಗೆ ನಾಗರಿಕ ಸನ್ಮಾನ
ಮತ್ತಷ್ಟು ಬೆಂಗಳೂರು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 am, Fri, 20 January 23