ಬೆಂಗಳೂರು: ‘ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಆತ ಜಗತ್ತನ್ನೇ ಎದುರು ಹಾಕಿಕೊಳ್ಳಲು ಸಿದ್ಧನಿರುತ್ತಾನೆ’ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ (Text Book Review Committee) ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ (Rohith Chakratirtha) ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿರುವುದಾಗಿ ರಾಜ್ಯ ಸರ್ಕಾರ ಘೋಷಿಸಿದ ನಂತರ ತಮ್ಮ ಅಭಿಪ್ರಾಯ ತಿಳಿಸಿರುವ ರೋಹಿತ್ ಚಕ್ರತೀರ್ಥ, ‘ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಆತ ಜಗತ್ತನ್ನೇ ಎದುರುಹಾಕಿಕೊಳ್ಳಲೂ ಸಿದ್ಧನಿರುತ್ತಾನೆ. ಆದರೆ ರಾಜಕೀಯ ಪಕ್ಷ, ಸರ್ಕಾರಗಳಿಗೆ ಮತಗಳೇ ಅಂತಿಮ. ಪಠ್ಯ ಸಮಿತಿಗೆ ಆರಿಸಿದ್ದೇವೆ ಎಂದು ಘೋಷಿಸಿದಾಗಲೂ ನಾನು ಉಬ್ಬಿರಲಿಲ್ಲ. ತೆಗೆದುಹಾಕಿದ್ದೇವೆ ಎಂದಾಗ ಕುಗ್ಗಲೂ ಇಲ್ಲ ಎಂದು ಹೇಳಿದ್ದಾರೆ.
‘ಓರ್ವ ಸಂಶೋಧಕನ ದಾರಿ, ಒಂದು ರಾಜಕೀಯ ಪಕ್ಷ ಅಥವಾ ಸರ್ಕಾರದ ದಾರಿಯೂ ಆಗಿರಬೇಕಿಲ್ಲ. ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಆತ ಜಗತ್ತನ್ನೇ ಎದುರುಹಾಕಿಕೊಳ್ಳುವುದಕ್ಕೂ ಸಿದ್ಧನಿರುತ್ತಾನೆ. ಆದರೆ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಗೆ ಅಂತಿಮವಾಗಿ ಮುಖ್ಯವಾಗುವುದು ಮತಗಳು. ಸತ್ಯ ಮತ್ತು ಮತ ಎಂಬೆರಡು ದಾರಿಗಳ ನಡುವೆ ಸಂಶೋಧಕ ಮೊದಲನೆಯದನ್ನು ಆಯ್ದುಕೊಂಡರೆ, ರಾಜಕೀಯ ಶಕ್ತಿ ಎರಡನೆಯದನ್ನು ಆರಿಸಿಕೊಳ್ಳುತ್ತದೆ’ ಎಂದು ತಮ್ಮ ಅಭಿಪ್ರಾಯವನ್ನು ವಿವರಿಸಿದ್ದಾರೆ.
‘ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ನನ್ನನ್ನು ಆರಿಸಿದ್ದೇವೆ ಎಂದಾಗ ನಾನು ಉಬ್ಬಿಲ್ಲ. ತೆಗೆದುಹಾಕಿದ್ದೇವೆ ಎಂದಾಗ ಕುಗ್ಗಿಯೂ ಇಲ್ಲ. ‘ಚಕ್ರತೀರ್ಥನಿಗೆ ಗೇಟ್ ಪಾಸ್’ ಎಂಬ ಮಾತನ್ನು ಮಾಧ್ಯಮದಲ್ಲಿ ಓದಿದಾಗ ನಗು ಬರುತ್ತದೆ. ಗೇಟ್ಪಾಸ್ ಕೊಡಲು ನಾನು ಯಾವ ಕಾಂಪೌಂಡ್ನೊಳಗೂ ನಿಂತಿರಲಿಲ್ಲ. ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟು ಅರ್ಥಹೀನವೋ, ಅಷ್ಟೇ ಅರ್ಥಹೀನವಾದದ್ದು ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎಂಬುದು ಕೂಡ. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನದು ಎರಡು ಕಡೆಗೂ ಒಪ್ಪಿಗೆಯಾಗದ ಪಂಥವಿರಬಹುದು’ ಎಂದು ಹೇಳಿದ್ದಾರೆ.
‘ವಿಸರ್ಜನೆ’ ಆದ ಮೇಲೂ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವಂಥಾದ್ದಲ್ಲ. ನನ್ನ ಕೆಲಸಗಳಿಗೆ ಮರಳಿದ್ದೇನೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.