ಹಫ್ತಾ ವಸೂಲಿ ಮಾಡುತ್ತ ಏರಿಯಾದಲ್ಲಿ ಹವಾ, ಮಸೀದಿ ಪಕ್ಕದ ಜಾಗಕ್ಕಾಗಿ ಬಿತ್ತು ಹೆಣ
ಆತ ನಟೋರಿಯಸ್ ರೌಡಿಶೀಟರ್. ಏರಿಯಾದಲ್ಲಿ ಹಫ್ತಾ ವಸೂಲಿ ಮಾಡುತ್ತಾ ಹವಾ ಇಟ್ಟಿದ್ದ.ಗುಜರಿ ಅಂಗಡಿಯವರನ್ನು ಬಿಡನೆ ಗುನ್ನ ಇಡುತ್ತಿದ್ದ. ಅಲ್ಲದೇ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾ ಜಾಗ ಕಬಳಿಸಲು ಹೊಂಚು ಹಾಕಿದ್ದ.ಇದರಿಂದ ಬೇಸತ್ತ ಏರಿಯಾ ಹುಡುಗ್ರು ಗ್ಯಾರೆಜ್ ನಲ್ಲಿ ಕೂತು ಸ್ಕೆಚ್ ಹಾಕಿ ನಟೋರಿಯಸ್ ರೌಡಿಶೀಟರ್ ನನ್ನೇ ಹತ್ಯೆಗೈದಿದ್ದಾರೆ.

ಬೆಂಗಳೂರು, (ಜನವರಿ 26): ಹಫ್ತಾ ವಸೂಲಿ ಮಾಡುತ್ತಿದ್ದ ಏರಿಯಾದಲ್ಲಿ ಹವಾ ಮಾಡಿದ್ದ ನಟೋರಿಯಸ್ ರೌಡಿಶೀಟರ್ ನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಬೆಂಗಳೂರಿನ (Bengaluru) ಮಂಗಮ್ಮನಪಾಳ್ಯದ ನಿವಾಸಿ ಮೊಹಮ್ಮದ್ ಶಬ್ಬೀರ್ ಕೊಲೆಯಾದ ರೌಡಿಶೀಟರ್. ಪ್ರತಿನಿತ್ಯ ಹಫ್ತಾ ವಸೂಲಿ ಮಾಡುತ್ತಿದ್ದ ಕಿರುಕುಳ ನೀಡುತ್ತಿದ್ದ. ಸಾಲದಕ್ಕೆ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾ ಮಸೀದಿ ಪಕ್ಕದ ಜಾಗದ ಮೇಲೆ ಕಣ್ಣು ಹಾಕಿದ್ದ. ಇದರಿಂದ ರೋಸಿ ಹೋಗಿದ್ದ ಏರಿಯಾದ ಯುವ ಪಡೆಯೊಂದು ರೌಡಿಶೀಟರ್ ಮೊಹಮ್ಮದ್ ಶಬ್ಬೀರ್ ನನ್ನು ಹತ್ಯೆ ಮಾಡಿದೆ. ಹೇಳಿ ಕೇಳಿ ರೌಡಿಶೀಟರ್ ಆಗಿದ್ದರಿಂದ ದಾಳಿ ಮಾಡಲಾಗದೇ ಮೊದಲು ಖಾರದ ಪುಡಿ ಎರಚಿ ಜೀವ ತೆಗೆದಿದ್ದಾರೆ.
ಜನವರಿ 12 ರಂದು ರಾತ್ರಿ ಮಂಗಮ್ಮನಪಾಳ್ಯ ನಿವಾಸಿಯಾಗಿರೊ ರೌಡಿಶೀಟರ್ ಮೊಹಮ್ಮದ್ ಶಬ್ಬೀರ್ ನನ್ನ 11 ಜನರ ತಂಡ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದರು. ಸ್ನೇಹಿತನನ್ನ ಮಾತಾಡಿಸಿ ಆಟೋದಲ್ಲಿ ವಾಪಸ್ ಆಗುತ್ತಿದ್ದಂತೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಖಾರದ ಪುಡಿ ಎರಚಿ ಮಚ್ಚು,ಲಾಂಗ್ ನಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿದ್ದರು. ಸದ್ಯ ಕೊಲೆ ಸಂಬಂಧ 11 ಜನ ಆರೋಪಿಗಳನ್ನು ಬಂಧಿಸಿರುವ ಬಂಡೆಪಾಳ್ಯ ಪೊಲೀಸರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಮದುವೆಯಾದ ಎರಡೇ ವರ್ಷಕ್ಕೆ ಉಸಿರು ನಿಲ್ಲಿಸಿದ ಕೀರ್ತಿ ಶ್ರೀ, ಆಗಿದ್ದೇನು?
ಕೋರಮಂಗಲ ರೌಡಿ ಶೀಟರ್ ಶಬ್ಬಿರ್ ಕೊಲೆಗೆ ಸಂಬಂಧಪಟ್ಟಂತೆ ನೂರುಲ್ಲಾ ಅಲಿಯಾಸ್ ಸನ್ನಿ,ಉಮ್ರೇಜ್,ನದೀಮ್,ಸೈಯದ್ ಖಲೀಂ,ಸಲ್ಮಾನ್ ಖಾನ್,ಸೈಯದ್ ಸಿದ್ದಿಕ್,ಮೊಹಮ್ಮದ್ ಆಲಿ,ಸೈಯದ್ ಇಸ್ಮಾಯಿಲ್,ಇಮ್ರಾನ್ ,ನವಾಜ್ ಷರೀಫ್ ಮತ್ತು ಸೈಯದ್ ಮುಬಾರಕ್ ಸೇರಿದಂತೆ 11 ಜನ ಆರೋಪಿಗಳನ್ನು ಮುಂಬೈ,ರಾಜಸ್ಥಾನ್ ಮತ್ತು ಹೈದರಾಬಾದ್ ಸೇರಿದಂತೆ ಹಲವು ಕಡೆಯಿಂದ ಬಂಧಿಸಿರುವ ಬಂಡೆಪಾಳ್ಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಮಸೀದಿ ಪಕ್ಕದ ಜಾಗಕ್ಕಾಗಿ ಬಿತ್ತು ಹೆಣ
ರೌಡಿ ಶೀಟರ್ ಆಗಿದ್ದ ಶಬ್ಬಿರ್ ಏರಿಯಾದಲ್ಲಿ ಹವಾ ಮೇಂಟೇನ್ ಮಾಡುತ್ತಿದ್ದ.ಗುಜರಿ ಅಂಗಡಿ ಸೇರಿದಂತೆ ಕಾರ್ಪೆಂಟರ್ ಬಳಿಯೂ ಹಫ್ತಾ ವಸೂಲಿ ಮಾಡುತ್ತಿದ್ದ.ಬೇರೆ ಹುಡುಗರನ್ನ ತಾನು ಹೇಳಿದಂತೆ ಕೇಳಬೇಕು ಎಂದು ಆವಾಜ್ ಹಾಕ್ತಿದ್ದ.ಇದರಿಂದಾಗಿ ಹುಡುಗ್ರು ರೋಸಿ ಹೋಗಿದ್ರು. ಅಲ್ಲದೆ ಮಸೀದಿ ಪಕ್ಕದಲ್ಲೇ ಸನ್ನಿ ಸಹೋದರಿಯ ಜಾಗ ಇದ್ದು, ಅದರ ಮೇಲೆ ಕಣ್ಣು ಹಾಕಿದ್ದ ಶಬ್ಬಿರ್, ಆ ಜಾಗ ನನಗೆ ಕೊಡುವಂತೆ ಪೀಡಿಸ ತೊಡಗಿದ್ದ. ಅಲ್ಲದೇ ಆದಷ್ಟು ಬೇಗ ಕಾಂಪೌಂಡ್ ಹಾಕುತ್ತೇನೆಂದು ಧಮ್ಕಿ ಹಾಕಿದ್ದ. ಇದರಿಂದ ರೋಸಿ ಹೋಗಿದ್ದ ಹುಡುಗರು, ಇದಕ್ಕೆ ಕಡಿವಾಣ ಹಾಕಬೇಕೆಂದು ತೀರ್ಮಾನ ಮಾಡಿದ್ದರು.
ನೂರುಲ್ಲ ಅಲಿಯಾಸ್ ಸನ್ನಿ ನೇತೃತ್ವದಲ್ಲಿ 11 ಜನರ ತಂಡ ಶಬ್ಬಿರ್ ಮುಗಿಸಲು ಹೊಂಚು ಹಾಕಿದ್ದು, ಆತನ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಗ್ಯಾರೆಜ್ ನಲ್ಲಿ ಮಾರಕಾಸ್ತ್ರದ ಜೊತೆಗೆ ಕೂತಿದ್ದ ಹಂತಕರು ಶಬ್ಬಿರ್ ಬರ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದರು. ಘಟನೆ ಬಳಿ ಆಟೋ ಹಿಡಿದಿದ್ದ ಆರೋಪಿಗಳು ಕೆ.ಆರ್.ಪುರಂ ರೈಲ್ವೇ ಸ್ಟೇಷನ್ ವರೆಗೂ ಹೋಗಿ ಎಸ್ಕೇಪ್ ಆಗಿದ್ದರು.
ಬಳಿಕ ಆರೋಪಿಗಳ ಪತ್ತೆಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ಬಲೆ ಬೀಸಿ, ಬಾಂಬೆ ,ರಾಜಸ್ಥಾನ ಮತ್ತು ಹೈದರಾಬಾದ್ ಕಡೆಯಿಂದ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಇದರಿಂದ ಒಂದು ವರ್ಷಗಳ ಕಾಲ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ.