ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸಲು ಅನುಮತಿ ನೀಡಿದ್ದಕ್ಕೆ ಪೋಷಕರಿಗೆ 1.5 ಲಕ್ಷ ರೂ. ದಂಡ
ಇತ್ತೀಚಿಗೆ ಅಪ್ರಾಪ್ತ ವಯಸ್ಕರರು ವಾಹನ ಚಲಾಯಿಸುವುದು ಹೆಚ್ಚಾಗಿದೆ. ಬೈಕ್ ಅನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಲು ಬರದಿದ್ದರೂ, ಸಂಚಾರಿ ನಿಯಮಗಳ ಬಗ್ಗೆ ಅರಿವು ಇರದಿದ್ದರೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಾರೆ. ಇದರಿಂದ ಅಪಘಾತ ಸಂಭವಿಸಿ ಜೀವಕ್ಕೆ ಕುಂದು ತಂದುಕೊಳ್ಳುತ್ತಾರೆ. ಹೀಗೆ ವಾಹನ ಚಲಾಯಿಸುವ ಅಪ್ರಾಪ್ತ ವಯಸ್ಕರ ಪೋಷಕರಿಗೆ ಸಂಚಾರಿ ಪೊಲೀಸ್ ಇಲಾಖೆ ದಂಡ ವಿಧಿಸುತ್ತದೆ.
ಬೆಂಗಳೂರು, ಫೆಬ್ರವರಿ 13: ಇತ್ತೀಚಿಗೆ ಅಪ್ರಾಪ್ತ ವಯಸ್ಕರರು (Children) ವಾಹನ ಚಲಾಯಿಸುವುದು (Vehicle Driving) ಹೆಚ್ಚಾಗಿದೆ. ಬೈಕ್ ಅನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಲು ಬರದಿದ್ದರೂ, ಸಂಚಾರಿ ನಿಯಮಗಳ ಬಗ್ಗೆ ಅರಿವು ಇರದಿದ್ದರೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಾರೆ. ಇದರಿಂದ ಅಪಘಾತ ಸಂಭವಿಸಿ ಜೀವಕ್ಕೆ ಕುಂದು ತಂದುಕೊಳ್ಳುತ್ತಾರೆ. ನಿಯಮ ಮೀರಿ ವಾಹನ ಚಲಾಯಿಸಿ ಅಪಘಾತ ಮಾಡಿದ ಆರು ಅಪ್ರಾಪ್ತ ವಯಸ್ಕರ ಪೋಷಕರಿಗೆ (Parents) ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಎಲ್ಲ ಅಪಘಾತಗಳು 2022-23 ರಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೂ ಮಾರಣಾಂತಿಕವಾಗಿಲ್ಲ.
ಈ ಆರು ಅಪ್ರಾಪ್ತ ವಯಸ್ಕರ ಪೋಷಕರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಅಪ್ರಾಪ್ತರಿಗೆ ತಮ್ಮ ವಾಹನಗಳನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕೋರ್ಟ್ ತಲಾ 25,000 ರೂ. ದಂಡವನ್ನು ವಿಧಿಸಿದೆ. ಪೋಷಕರು ಈಗ ಒಟ್ಟು 1.5 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ.
“ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಇಂತಹ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರ ವಿರುದ್ಧ ಕೇಸ್ ಬುಕ್ ಮಾಡಿದ್ದೇವೆ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಓಡಿಸಲು ನೀಡಬೇಡಿ” ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ವಾಹನ ಮಾಲೀಕರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಬೆಂಗಳೂರು: ಬರೋಬ್ಬರಿ 300 ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ, 3 ಲಕ್ಷ ರೂ. ದಂಡ
ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ
ಶಾಲೆಗಳ ಬಳಿ ಸ್ಪೇಷಲ್ ಡ್ರೈವ್ ನಡೆಸುತ್ತಿದ್ದ ವೇಳೆ ಪುಟ್ಟ ಮಕ್ಕಳು ಹೆಲ್ಮೆಟ್ ಇಲ್ಲದೆ ಬಂದ ಹಿನ್ನೆಲೆಯಲ್ಲಿ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಹಾಕಬೇಕು ಎಂದು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಸಂಚರಿಸುವ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶಾಲಾ ಆಟೋ, ಖಾಸಗಿ ಕಾರು, TT ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 am, Tue, 13 February 24