ಬೆಂಗಳೂರು: ಬರೋಬ್ಬರಿ 300 ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ, 3 ಲಕ್ಷ ರೂ. ದಂಡ
ಸಂಚಾರಿ ನಿಯಮಗಳನ್ನು ಪಾಲಿಸಬೇಕಾದದ್ದು ಸಾರ್ವಜನಿಕರ ಆದ್ಯ ಕರ್ತವ್ಯ. ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡಿ ಬೇಕಾ ಬಿಟ್ಟಿಯಾಗಿ ರಸ್ತೆ ಮೇಲೆ ಸಂಚರಿಸಿದರೆ ವಾಹನದ ಮೇಲೆ ಕೇಸ್ ಬೀಳುತ್ತದೆ, ದಂಡ ಬೀಳುವುದು ಪಕ್ಕಾ. ಹೀಗೆ ನಗರದಲ್ಲಿ ಬೇಕಾ ಬಿಟ್ಟಿಯಾಗಿ ಸಂಚರಿಸಿ ಸವಾರ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 11: ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ (Traffic Rules Break) ಮಾಡಿ ದಂಡ ಪಾವತಿ ಮಾಡದವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದು 50 ಸಾವಿರ ರೂಪಾಯಿ ಹೆಚ್ಚು ದಂಡ ಇದ್ದರೂ, ಕಟ್ಟದೆ ಇರುವವರ ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಲಿದ್ದಾರೆ.
ನಗರದ ಓರ್ವ ಸವಾರ ಸಂಚಾರಿ ಪೊಲೀಸರ ಭಯವಿಲ್ಲದೆ, ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿ, ಒನ್ ವೇಯಲ್ಲಿ ಮೊಬೈಲ್ನಲ್ಲಿ ಮಾತಾಡಾಡಿಕೊಂಡು ಡ್ರೈವಿಂಗ್ ಮಾಡಿದ್ದಾನೆ. ಈತ ಬರೊಬ್ಬರಿ ನಗರದಲ್ಲಿ 300ಕ್ಕೂ ಅಧಿಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, 3.20 ಲಕ್ಷ ರೂಪಾಯಿ ದಂಡ ಬಿದ್ದಿದೆ.
ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟ್ರಾಮನ್ ಎಂಬುವರ KA05KF7969 ನಂಬರಿನ ಆಕ್ಟಿವ್ ಹೊಂಡಾ ಸ್ಕೂಟರ್ ಮೇಲೆ 300ಕ್ಕೂ ಅಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಇದಕ್ಕೆ ಸಂಚಾರಿ ಪೊಲೀಸರು 3 ಲಕ್ಷ ರೂ. ದಂಡ ವಿಧಿಸಿದ್ದಾರೆ. ಇವರು ಎಸ್ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.
ಇದನ್ನೂ ಓದಿ: 255 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಸ್ಕೂಟರ್ ಮಾಲೀಕ ಕೊನೆಗೂ ಸಿಕ್ಕಿಬಿದ್ದಾಗ!
ವೆಂಕಟ್ರಾಮನ್ ಅವರು 3 ಲಕ್ಷ ರೂ. ದಂಡ ಕಟ್ಟಬೇಕಾಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದಕ್ಕೆ ವೆಂಕಟ್ರಾಮನ್ ಅವರು ಇಷ್ಟು ದಂಡ ಕಟ್ಟಲು ಆಗಲ್ಲ ಬೇಕಿದ್ದರೆ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ನಮಗೆ ಬೈಕ್ ಬೇಡ, ದಂಡ ಕಟ್ಟಿ ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಸಂಚಾರಿ ಪೊಲೀಸರು ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದರೆ ಕೇಸ್ ಹಾಕಲು ನಿರ್ಧರಿಸಿದ್ದಾರೆ.
ನಿಯಮ ಉಲ್ಲಂಘಿಸಿದ ಸ್ಕೂಟಿ ಪೆಪ್ ಮೇಲೆ 3.22 ಲಕ್ಷ ದಂಡ
ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್ ಮೇಲೆ 2023ರ ಡಿಸೆಂಬರ್ನಲ್ಲಿ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿತ್ತು. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿದ್ದವು. ಸ್ಕೂಟಿ ಬೆಲೆಯೇ 70 ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. KA 04 KF9072 ನಂಬರ್ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿ ನಿಯಮ ಉಲ್ಲಂಘಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ