ಲೋಕಾರ್ಪಣೆ ಬೆನ್ನಲ್ಲೇ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್: ಪ್ರಯಾಣಿಕರೇ ಎಚ್ಚರ

ಹಳದಿ ಮೆಟ್ರೋ ಮಾರ್ಗಕ್ಕೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಸೋಮವಾರದಿಂದ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಗ್ರೀನ್ ಲೈನ್​ನಿಂದ ಯೆಲ್ಲೋಗೆ ಪ್ರಯಾಣ ಮಾಡಲು ಆರ್.ವಿ.ರೋಡ್​ಗೆ ವಿಪರೀತ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದು, ಫ್ಲಾಟ್ ಫಾರಂ ಸಾಲುತ್ತಿಲ್ಲವಂತೆ! ಇದರಿಂದ ಪ್ರಯಾಣಿಕರು ಟ್ರ್ಯಾಕ್​​ಗೆ ಬಿದ್ದು ಅನಾಹುತವಾಗುವ ಸಾಧ್ಯತೆಯಿದ್ದು, ಪಿಎಸ್​ಡಿ ಅಳವಡಿಸಿ ಎಂದು ಸಂಸದರು, ಪ್ರಯಾಣಿಕರು ಮನವಿ ಮಾಡಿದ್ದಾರೆ.

ಲೋಕಾರ್ಪಣೆ ಬೆನ್ನಲ್ಲೇ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್: ಪ್ರಯಾಣಿಕರೇ ಎಚ್ಚರ
ಆರ್.ವಿ ರೋಡ್ ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್
Updated By: Ganapathi Sharma

Updated on: Aug 13, 2025 | 8:05 AM

ಬೆಂಗಳೂರು, ಆಗಸ್ಟ್ 13: ಆರ್​ವಿ ರೋಡ್​ನಿಂದ ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್​ಗೆ (Namma Metro Yellow Line) ಪ್ರಧಾನಿಮಂತ್ರಿ ನರೇಂದ್ರ ಮೋದಿ (Narendra Modi) ಭಾನುವಾರ ಚಾಲನೆ ನೀಡಿದ್ದಾರೆ. ಸೋಮವಾರ ಮೊದಲ ದಿನವೇ 83 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ (ಗ್ರೀನ್ ಲೈನ್) ಮತ್ತು ವೈಟ್ ಫೀಲ್ಡ್​​​ನಿಂದ ಚೆಲ್ಲಘಟ್ಟ (ನೇರಳೆ ಮಾರ್ಗ) ದಿಂದ ಹಾಗೂ ನಾಡಪ್ರಭು ಕೆಂಪೇಗೌಡ (ಮೆಜಸ್ಟಿಕ್ ) ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್​​ನಿಂದಲೂ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಮಾರ್ಗಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಆರ್.ವಿ ರೋಡ್ ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್ (RV Road Metro Station) ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಆರ್.ವಿ ರೋಡ್ ಫ್ಲಾಟ್ ಫಾರಂ ತುಂಬಾ ಸಣ್ಣದಾಗಿದ್ದು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇಲ್ಲ ಎನ್ನಲಾಗುತ್ತಿದೆ.

ಆರ್​​ವಿ ರೋಡ್ ಫ್ಲಾಟ್ ಫಾರಂ ಸಣ್ಣದಾಗಿದ್ದು, ಪೀಕ್ ಅವರ್​ನಲ್ಲಿ ನೂಕುನುಗ್ಗಲಿನಲ್ಲಿ ಪ್ರಯಾಣಿಕರು ಟ್ರ್ಯಾಕ್​ಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಮೆಟ್ರೋ ಟ್ರ್ಯಾಕ್​​ನಲ್ಲಿ 750 ವೋಲ್ಟ್ ಡೈರೆಕ್ಟ್ ಕರೆಂಟ್ ಹಾದು ಹೋಗುತ್ತಿದ್ದು ಟ್ರ್ಯಾಕ್​ಗೆ ಬಿದ್ದರೆ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ.

ಪಿಎಸ್​ಡಿ ಅಳವಡಿಸಲು ಸಂಸದ ತೇಜಸ್ವಿ ಸೂರ್ಯ ಆಗ್ರಹ

ಸಂಸದ ತೇಜಸ್ವಿ ಸೂರ್ಯ ಸೋಮವಾರ ಯೆಲ್ಲೋ ಲೈನ್ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ಅಪಾಯ ಅರಿತು ಆರ್.ವಿ.ರೋಡ್ ಮೆಟ್ರೋ ಸ್ಟೇಷನ್​​ನಲ್ಲಿ ಪಿಎಸ್​ಡಿ (ಫ್ಲಾಟ್ ಫಾರಂ ಸ್ಕ್ರೀನಿಂಗ್ ಡೋರ್ ) ಅಳವಡಿಸಿ ಎಂದು ಬಿಎಂಆರ್​ಸಿಎಲ್ ಎಂಡಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಯಾಣಿಕರು ಕೂಡ ಪಿಎಸ್​ಡಿ ಅಳವಡಿಕೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ
ರೈಲು ಬರುತ್ತಿದ್ದಂತೆ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
ಬೆಂಗಳೂರಿನಲ್ಲಿ ಮೋದಿ ಹವಾ ಹೇಗಿತ್ತು? ಇಲ್ಲಿವೆ ಫೋಟೋಸ್​
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ

ಯೆಲ್ಲೋ ಲೈನ್: ಮೆಟ್ರೋ ಸ್ಟೇಷನ್ ನಾಮಕರಣ ಗೊಂದಲ!

ಇತ್ತ ಆರ್.ವಿ. ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಅಧಿಕಾರಿಗಳು ದೊಡ್ಡದಾದ ಯಡವಟ್ಟು ಮಾಡಿದ್ದಾರೆ ಎಂಬ ಆರೋಪ ಮತ್ತು ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ತುಂಬಾ ಗೊಂದಲಕ್ಕೊಳಗಾಗುತ್ತಿದ್ದಾರಂತೆ. ಇದಕ್ಕೆ ಕಾರಣ ಅಂದರೆ, ಸದ್ಯ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ಇರುವ ಜಾಗದಲ್ಲಿ (ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಹೆಸರು ಇರಬೇಕಿತ್ತು) ಇನ್ಫೋಸಿಸ್ ಫೌಂಡೇಶನ್- ಕೋನಪ್ಪನ ಅಗ್ರಹಾರ ಎಂದು ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಎಂದು ಇರಬೇಕಾದ ಜಾಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಂದು ಹೆಸರಿಡಲಾಗಿದೆ ಎಂಬುದು ಪ್ರಯಾಣಿಕರ ಅಸಮಾಧಾನ. ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡುವ ವೇಳೆ ಸಮಸ್ಯೆ ಆಗುತ್ತಿದೆ. ಇಲ್ಲಿ ಇಳಿಯಬೇಕಾದವರು ಅಲ್ಲಿ ಇಳಿಯುತ್ತಿದ್ದಾರೆ, ಅಲ್ಲಿ ಇಳಿಯಬೇಕಾದವರು ಇಲ್ಲಿ ಇಳಿದು ಸಮಸ್ಯೆ ಎದುರಿಸುತ್ತಿದ್ದಾರೆ.

ಬಿಎಂಆರ್​​ಸಿಎಲ್ ಅಧಿಕಾರಿಗಳು ಹೇಳಿದ್ದೇನು?

ಸಮಸ್ಯೆಗಳ ಬಗ್ಗೆ ಬಿಎಂಆರ್​​ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಪಿಎಎಸ್​​ಡಿ ಡೋರ್ ಅಳವಡಿಸಲು ಚಿಂತನೆ ನಡೆಯುತ್ತಿದೆ. ಮುಂಬರುವ ಪಿಂಕ್‌ ಲೈನ್ ನ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳಲ್ಲಿ ಪಿಎಎಸ್​​ಡಿ ಡೋರ್ ಅಳವಡಿಸಲು ಟೆಂಡರ್ ನೀಡಿದ್ದೇವೆ. ಆರ್‌.ವಿ. ಮೆಟ್ರೋ ಸ್ಟೇಷನ್ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಒಟ್ಟಿನಲ್ಲಿ, ಏನಾದರೂ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡರೆ ಒಳ್ಳೆಯದು. ಇಲ್ಲವಾದರೆ, ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಖಂಡಿತ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ