ನಿಮ್ಮನ್ನು ನಂಬಿ ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯ್ತಿರುತ್ತೆ: ಬೆಂಬಲಿಗರಿಗೆ ರಾಜಣ್ಣ ಭಾವನಾತ್ಮಕ ಪತ್ರ
ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣರನ್ನು ವಜಾಗೊಳಿಸಲಾಗಿದೆ. ಆದರೆ, ತೆರೆಯ ಹಿಂದಿನ ಘಟನೆಗಳು ಕುತೂಹಲಕಾರಿಯಾಗಿವೆ. ರಾಜಣ್ಣ ಅವರನ್ನ ಸಂಪುಟದಿಂದ ವಜಾ ಮಾಡಿಸುವಲ್ಲಿ ಯಾರ ಪಾತ್ರವಿದೆ ಎನ್ನುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ತಮ್ಮ ನಾಯಕನನ್ನು ಸಂಪುಟದಿಂದ ವಜಾ ಮಾಡಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ರಾಜಣ್ಣ ಭಾವನಾತ್ಮಕ ಪತ್ರವೊಂದು ಬರೆದಿದ್ದಾರೆ.

ಬೆಂಗಳೂರು, (ಆಗಸ್ಟ್ 12): ಸಿದ್ದರಾಮಯ್ಯ (Siddaramaiah) ಸಂಪುಟದಿಂದ ಕೆಎನ್ ರಾಜಣ್ಣ (KN Rajanna) ಅವರನ್ನ ವಜಾ ಮಾಡಲಾಗಿದೆ. ಇದರಿಂದ ಕೆರಳಿದ ಅವರ ಅಭಿಮಾನಿಗಳು (Fans) ಎಲ್ಲೆಡೆ ಪ್ರತಿಭಟನೆ ನಡೆಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ರಾಜಣ್ಣ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನು ಕೆಲವರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ರಾಜಣ್ಣನವರ ತವರು ಕ್ಷೇತ್ರ ತುಮಕೂರು ಜಿಲ್ಲೆಯ ಮಧುಗಿರಿ (Madhugiri) ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟಿಸಿದರು. ಈ ವೇಳೆ ಅವರ ಅಭಿಮಾನಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಅಲ್ಲದೇ ನಾಳೆಯೂ ಸಹ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಕೆಎನ್ ರಾಜಣ್ಣ, ಯಾವುದೇ ಅಹಿತಕರ ಘಟನೆಗಳು ಆಗದಂತೆ ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ಬಳಿಕ ಕೆ.ಎನ್.ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ಬೆಂಬಲಿಗರನ್ನ ಉದ್ದೇಶಿಸಿ ತಮ್ಮ ಮನದಾಳವನ್ನು ಬರೆದುಕೊಂಡಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಕೆಎನ್ ರಾಜಣ್ಣ ರಾಜೀನಾಮೆ ನೀಡಿದ್ದಲ್ಲ ಸಂಪುಟದಿಂದ ತೆಗೆದಿದ್ದು!
ರಾಜಣ್ಣ ಪತ್ರದಲ್ಲಿ ಏನಿದೆ?
ಆತ್ಮೀಯ ಹಾಗೂ ಅಭಿಮಾನಿ ಬಂಧುಗಳಲ್ಲಿ ನನ್ನದೊಂದು ಕೋರಿಕೆ. ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ರಾಜಕೀಯ ಬದಲಾವಣೆಗೂ ಎಂದೂ ಧೃತಿಗೆಟ್ಟಿಲ್ಲ. ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಾನು ಸಹ ನಿಮ್ಮನ್ನು ನನ್ನ ಕುಟುಂಬವೆಂದೇ ಭಾವಿಸಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಯಾವುದೇ ತಪ್ಪು ನಿರ್ಧಾರ ಮಾಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ.
ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ರವರ ಹಾದಿಯಲ್ಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ಬರೆದಿದ್ದಾರೆ.








