
ದೆಹಲಿ/ಬೆಂಗಳೂರು, ಅಕ್ಟೋಬರ್ 05: ನೈಸ್ ಸಂಸ್ಥೆಗೆ ಹಿನ್ನೆಡೆಯಾಗಿದ್ದು, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.ವಿಚಾರಣೆ ನಡೆಸದೆ ಮಧ್ಯಂತರ ತಡೆ ಸಾಧ್ಯವಿಲ್ಲ ಎಂದ ನ್ಯಾಯಾಲಯ, ನವೆಂಬರ್ 2ಕ್ಕೆ ವಿಚಾರಣೆ ಮುಂದೂಡಿದೆ. ಭೂಮಿ ಕಳೆದುಕೊಂಡವರ ಪೈಕಿ ಹಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಯೋಜನೆಗೆ ಈಗಾಗಲೇ 11,000 ಎಕರೆ ಭೂಮಿ ಬಳಕೆ ಆಗಿದೆ ಎಂದು ನೈಸ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಗಣಿಸುವಂತೆ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು. ಎಲ್ಲ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇನ್ನು ಸುಪ್ರೀಂ ಕೋರ್ಟ್ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಎಚ್. ಎನ್. ಶಶಿಧರ್ ಅವರು, ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ NICE ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ತಡೆಯನ್ನ ನೀಡಲು ನಿರಾಕರಿಸಿದೆ. 25% ಕೆಲಸ ಮಾಡಿದ್ದವೇವೆ, 1100 ಎಕರೆ ಭೂಮಿ ಬಳಕೆಯಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿರುವುದಾಗಿ ನೈಸ್ ಸಂಸ್ಥೆ ಹೇಳಿದೆ. ಆದರೆ ವಾಸ್ತವದಲ್ಲಿ ಪರಿಹಾರ ನೀಡಿಲ್ಲ. ಹೀಗಾಗಿ ಈ ಹಂತದಲ್ಲಿ ನೈಸ್ ವಾದವನ್ನ ಸುಪ್ರೀಂಕೋರ್ಟ್ ಪರಿಗಣಿಸಿಲ್ಲ. ರಾಜ್ಯ ಸರ್ಕಾರವೂ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಎಲ್ಲ ಅರ್ಜಿಗಳನ್ನ ಒಟ್ಟುಗುಡಿಸಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೈಸ್ ರಸ್ತೆ ಭೂಸ್ವಾಧೀನ ಪ್ರಕರಣ: ನೂರಾರು ರೈತರಿಗೆ ಹೈಕೋರ್ಟ್ ಬಿಗ್ ರಿಲೀಫ್, ನೈಸ್ ಮೇಲ್ಮನವಿ ವಜಾ
ಭೂಸ್ವಾಧೀನ ರದ್ದುಗೊಳಿಸಿ ಏಕಸದಸ್ಯ ಪೀಠ 2025ರ ಜು.4ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಆದೇಶ ನೀಡಿದ್ದ ಹೈಕೋರ್ಟ್, ನೈಸ್ ಯೋಜನೆಯಲ್ಲಿ ರೈತರ ಜಮೀನುಗಳನ್ನು ಸರಿಯಾದ ಪರಿಹಾರವಿಲ್ಲದೆ ಕಿತ್ತುಕೊಳ್ಳಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ, ಇದು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿರಬಹುದು ಎಂದು ಕಳವಳ ವ್ಯಕ್ತಪಡಿಸಿತ್ತು. ನೈಸ್ ಯೋಜನೆಯ ಭೂಸ್ವಾಧೀನ ಮತ್ತು ಅಕ್ರಮಗಳ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು.
ವರದಿ: ನಟರಾಜ್, ಟಿವಿ9 ದೆಹಲಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:05 pm, Mon, 5 October 26