ತಮಿಳುನಾಡು ಗಡಿಯವರೆಗೆ ನಮ್ಮ ಮೆಟ್ರೋ ಯೋಜನೆಗೆ ತೀವ್ರ ವಿರೋಧ: ಕನ್ನಡಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ
ಬೊಮ್ಮಸಂದ್ರದಿಂದ ತಮಿಳುನಾಡು ಗಡಿಯ ಅತ್ತಿಬೆಲೆವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡುವ ಪ್ರಸ್ತಾವನೆಗೆ ಕನ್ನಡಪರ ಸಂಘಟನೆಗಳ ಮುಖಂಡರಾದ ವಾಟಾಳ್ ನಾಗರಾಜ್ ಹಾಗೂ ಪ್ರವೀಣ್ ಶೆಟ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಯಾವುದೇ ಜನಾಂಗೀಯ ದ್ವೇಷದ ಪ್ರಶ್ನೆಯೇ ಬರುವುದಿಲ್ಲ. ಒಂದೊಮ್ಮೆ ಮೆಟ್ರೋಗೆ ಅನುಮತಿ ಕೊಟ್ಟಿದ್ದೇ ಆದಲ್ಲಿ ಕರ್ನಾಟಕ ಅತ್ಯಂತ ಗಂಭೀರ ಪರಿಸ್ಥಿತಿ ಎದರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ತಮಿಳುನಾಡು ಗಡಿವರೆಗೆ ನಮ್ಮ ಮೆಟ್ರೋ ಯೋಜನೆಗೆ ಕನ್ನಡಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ನೆರೆ ರಾಜ್ಯದವರೆಗೆ ಮೆಟ್ರೋ ಸಂಚಾರ ಮಾಡಬಾರದು. ಈಗಾಗಲೇ ನಮ್ಮ ಬೆಂಗಳೂರಿನಲ್ಲಿ ತಮಿಳಿಗರ ಹಾವಳಿ ಹೆಚ್ಚಾಗಿದ್ದು ಬಾರ್ಡರ್ವರೆಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡಿದ್ರೆ ಬೆಂಗಳೂರು ಮಹಾನಗರ ಮಿನಿ ತಮಿಳುನಾಡು ಆಗುತ್ತದೆ ಎಂದು ವಾಟಾಳ್ ನಾಗರಾಜ್ ಮತ್ತು ಕರವೇ ಪ್ರವೀಣ್ ಶೆಟ್ಟಿ ಆರೋಪಿಸಿದ್ದಾರೆ.
‘ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು’
ಸರ್ಕಾರ ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧಪಡಿಸುವಂತೆ ಬಿಎಂಆರ್ಸಿಎಲ್ಗೆ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ಕನ್ನಡಪರ ಹೋರಾಟಗಾರರು ಕಿಡಿ ಕಾರಿದ್ದಾರೆ. ಅತ್ತಿಬೆಲೆ ಮೆಟ್ರೋ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು, ಇಲ್ಲದಿದ್ರೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಒಂದೊಮ್ಮೆ ಮೆಟ್ರೋಗೆ ಅನುಮತಿ ನೀಡಿದರೆ ಜಯಲಲಿತಾ, ಕರುಣಾನಿಧಿ ಮತ್ತು ಎಂಜಿಆರ್ ಹೆಸರುಗಳು ನಿಲ್ದಾಣಗಳಿಗೆ ಬರುವುದರಲ್ಲಿ ಸಂಶಯವಿಲ್ಲ. ಮೆಟ್ರೋ ವಿಸ್ತರಣೆಗೆ ಬಗ್ಗೆ ರಾಜ್ಯ ಸರ್ಕಾರ ಡಿಪಿಆರ್ ಮಾಡಬೇಕಿಲ್ಲ. ಮೇಕೆದಾಟುವಿಗೆ ಅನುಮತಿ ಕೊಡದ, ಕಾವೇರಿ ನೀರನ್ನು ಕಿತ್ತುಕೊಳ್ಳುತ್ತಿರುವ ತಮಿಳುನಾಡಿನವರಿಗೆ ನಾವು ಮೆಟ್ರೋ ಕೊಡಬೇಕಿಲ್ಲ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಮೆಟ್ರೋ ಸಂಪರ್ಕ ಪ್ರಸ್ತಾವನೆ ತೀವ್ರ ಅನಾಗರಿಕವಾದದ್ದು, ಇಲ್ಲಿ ಯಾವುದೇ ಜನಾಂಗೀಯ ದ್ವೇಷದ ಪ್ರಶ್ನೆಯೇ ಬರುವುದಿಲ್ಲ. ಒಂದೊಮ್ಮೆ ಮೆಟ್ರೋಗೆ ಅನುಮತಿ ಕೊಟ್ಟಿದ್ದೇ ಆದಲ್ಲಿ ಕರ್ನಾಟಕ ಅತ್ಯಂತ ಗಂಭೀರ ಪರಿಸ್ಥಿತಿ ಎದರಿಸಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಕೂಡ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅತಿ ಉದ್ದದ ಎಲಿವೇಟೆಡ್ ಮೆಟ್ರೊ ಮಾರ್ಗ ರೆಡಿ: ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ
ತಮಿಳುನಾಡು ಗಡಿಯವರೆಗೆ ಮೆಟ್ರೋಗೆ ವಿರೋಧ ಯಾಕೆ?
ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಮೆಟ್ರೋ ಆರಂಭವಾದರೆ ಬೆಂಗಳೂರಿನ ಉದ್ಯೋಗಗಳನ್ನು ತಮಿಳಿಗರು ಕಿತ್ತುಕೊಳ್ಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ತಮಿಳುನಾಡು ಗಡಿವರೆಗೆ ಮೆಟ್ರೋ ಬೇಡ ಎಂಬುದು ಕನ್ನಡಪರ ಹೋರಾಟಗಾರರ ಆಗ್ರಹವಾಗಿದೆ. ತಮಿಳುನಾಡು ಸಿಎಂ ವಿಜಯ್ ಚೆನ್ನೈ ಮೆಟ್ರೋ ಉದ್ಘಾಟನೆ ವೇಳೆ ಹೊಸೂರು-ಅತ್ತಿಬೆಲೆ ಮೆಟ್ರೋಗೆ ಪ್ರಧಾನಿ ಮೋದಿ ಬಳಿ ಅನುಮತಿ ಕೇಳಿದ್ದರು. ತಮಿಳುನಾಡು ಸರ್ಕಾರ ಬಜೆಟ್ನಲ್ಲಿ ಹೊಸೂರು ಟು ಬೊಮ್ಮಸಂದ್ರ 23 ಕಿ.ಮೀ. ಮಾರ್ಗದಲ್ಲಿ 12 ಸ್ಟೇಷನ್ ನಿರ್ಮಿಸುವುದಾಗಿ ಘೋಷಿಸಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಬೊಮ್ಮಸಂದ್ರ ಟು ಅತ್ತಿಬೆಲೆವರೆಗೆ 10.5 ಕಿಮೀ ಮಾರ್ಗದಲ್ಲಿ 9 ಸ್ಟೇಷನ್ ನಿರ್ಮಿಸಲು ಯೋಜನೆ ರೂಪಿಸಿದೆ.
NH-44 ಹೊಸೂರು ರಸ್ತೆಯ ಬಲಭಾಗದಲ್ಲಿ ಯೋಜನೆ ವಿಸ್ತರಣೆ ಆಗಲಿದ್ದು, ಬೊಮ್ಮಸಂದ್ರದಿಂದ ನಾರಾಯಣ ಹೃದಯಾಲಯದ ಬಳಿ ವಿಸ್ತರಿತ ಮಾರ್ಗದ ಮೊದಲ ನಿಲ್ದಾಣ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಳಿಕ ಮುಂದೆ ಚೀನಾಪುರ ಸರ್ಕಲ್, ಹಳೇ ಚಂದಾಪುರ, ತಿರುಮಗೊಂಡನಹಳ್ಳಿ, ಬಾಳಗಾನಹಳ್ಳಿ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಯಾದವನಹಳ್ಳಿ, ಅತ್ತಿಬೆಲೆ, ಅತ್ತಿಬೆಲೆ ಟರ್ಮಿನಲ್ ನಿಲ್ದಾಣಗಳು ಬರಲಿವೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
