ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ತೆಗೆದು ರಾಷ್ಟ್ರ ಧ್ವಜ ಹಾರಿಸಿದ ಪೊಲೀಸರು
Flag Row: ಮಂಡ್ಯದ ಕೆರಗೋಡು ಧ್ವಜ ವಿವಾದ ಮಧ್ಯೆ ಬೆಂಗಳೂರಿನ ಚಾಂದಿನಿ ಚೌಕ್ನಲ್ಲಿ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಹಸಿರು ಧ್ವಜವನ್ನು ತೆರವು ಮಾಡಿ ರಾಷ್ಟ್ರ ಬಾವುಟ ಹಾರಿಸಿದ್ದಾರೆ.
ಬೆಂಗಳೂರು, (ಜನವರಿ 30): ಮಂಡ್ಯ (Mandya) ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಬೆಂಗಳೂರಿನ (Bengaluru) ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಾರಿಸಲಾದ ಹಸಿರು ಬಾವುಟ ವೈರಲ್ ಆಗಿದ್ದು, ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಚಾಂದಿನಿ ಚೌಕ್ನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ವಿಕಾಸ್ ವಿಕ್ಕಿ ಎನ್ನುವರು ಟ್ವೀಟ್ ಮಾಡಿದ್ದರು. ಈ ಬಾವುಟ ಯಾವ ಧರ್ಮದ್ದು ಎಂದು ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ. ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೇ ಎಂದು ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಟ್ವೀಟ್ ಮಾಡಿ, ಪೂರ್ವ ವಿಭಾಗ ಡಿಸಿಪಿಯವರೇ ಶತ್ರು ದೇಶದ ಬಣ್ಣ ಹೋಲುವ ಧ್ವಜ ಹಾರಾಟ. ಸಾರ್ವಜನಿಕ ಪ್ರದೇಶದಲ್ಲಿ ಧ್ವಜ ನಿಯಮಕ್ಕೆ ವಿರುದ್ಧವಾದದ್ದು ಅಲ್ಲವೇ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಿ ಅಲ್ಲ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ರಾಷ್ಟ್ರ ಧ್ವಜಕ್ಕೆ ಅಪಮಾನ: ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಎಸ್ಪಿಗೆ ದೂರು
ಮಂಡ್ಯದ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹನುಮ ಧ್ವಜವನ್ನು ತೆರವುಗೊಳಿಸಿ ರಾಷ್ಟ್ರ ಧ್ವಜ ಹಾರಿಸಿ ಶಾಂತಿ ಕಾಪಾಡಲು ಪೊಲೀಸರು ಮುಂದಾಗಿದ್ದರು. ಆದರೂ ಸಹ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದಾದ ಬೆನ್ನಲ್ಲೇ ಕೇಸರಿ ಧ್ವಜ, ಹಸಿರು ಧ್ವಜ ವಿವಾದ ಬೆಂಗಳೂರಿಗೂ ಹಬ್ಬಿತ್ತು. ಶಿವಾಜಿನಗರದ ಚಾಂದಿನಿ ಚೌಕ್ನ ಬಿಬಿಎಂಪಿ ಧ್ವಜಸ್ತಂಭದಲ್ಲಿ ಹಸಿರು ಧ್ವಜ ಹಾರಾಡುವುದನ್ನು ಹಿಂದೂ ಕಾರ್ಯಕರ್ತರು ಟ್ವೀಟ್ ಮಾಡಿ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಾಜಿ ನಗರ ಪೊಲೀಸರು ಹಸಿರುವ ಬಾವುಟವನ್ನು ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.