ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರಿಗೇ ಬ್ಲಾಕ್ ಮೇಲ್ ಮಾಡ್ತಿದ್ದ ಖತರ್ನಾಕ್ ಆಸಾಮಿ ಅಂದರ್
ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಪೊಲೀಸರನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಕಿಲಾಡಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಹಣ ನೀಡುವುದಾಗಿ ಠಾಣೆಗೆ ಕರೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಖತರ್ನಾಕ್ ಐಡಿಯಾಗೆ ಪೊಲೀಸರೇ ಶಾಕ್ ಆಗಿದ್ದಾರೆ.
ಬೆಂಗಳೂರು, ಆಗಸ್ಟ್.06: ಕಳ್ಳರು, ಸುಳ್ಳರು, ಅಪರಾಧಿಗಳಿಗೆಲ್ಲ ಹೆಡೆಮುರಿ ಕಟ್ಟುವ ಪೊಲೀಸರಿಗೆಯೇ (Police) ಕಿಲಾಡಿ ಯುವಕನೋರ್ವ ಬ್ಲಾಕ್ ಮೇಲ್ ಮಾಡಲು ಹೋಗಿ ತಗ್ಲಾಕೊಂಡಿದ್ದಾನೆ. ಆರೋಪಿ ಸೈಯದ್ ಸರ್ಫರಾಜ್ ಅಹಮದ್ನನ್ನು ಶಿವಾಜಿನಗರ ಠಾಣೆ ಪೊಲೀಸರು (Shivajinagar Police) ಬಂಧಿಸಿದ್ದಾರೆ. ಆರೋಪಿ ಸೈಯದ್, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಬ್ಲಾಕ್ ಮೇಲ್ (Blackmail) ಮಾಡ್ತಿದ್ದ. ಪೊಲೀಸ್ ಠಾಣೆಯಲ್ಲಿದ್ದ ಆರೋಪಿಗಳ ವಿಚಾರವಾಗಿ ಆರೋಪಿಗಳ ಪರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡ್ತೀನಿ. ಹಾಕಿರೋ ಕೇಸ್ ವಾಪಾಸ್ ಪಡೆಯುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ. ಇದೇ ರೀತಿ ಬ್ಲಾಕ್ ಮೇಲ್ ಮಾಡಲು ಹೋಗಿ ಶಿವಾಜಿನಗರ ಪೊಲೀಸರ ಬಳಿ ಲಾಕ್ ಆಗಿದ್ದಾನೆ.
ಹೇಗಿತ್ತು ಚಾಲಾಕಿ ಆರೋಪಿ ಆಟ?
ಆರೋಪಿ ಸೈಯದ್ ಸರ್ಪರಾಜ್, ಮೊದಲಿಗೆ ಪೊಲೀಸ್ ಠಾಣೆಗೆ ಹೋಗಿ ಸಿಬ್ಬಂದಿ, ಅಧಿಕಾರಿಗಳ ಜೊತೆ ನಯವಾಗಿ ಮಾತಾಡಿ ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಠಾಣೆಯ ಸೆಲ್ ಒಳಗೆ ಇರುವ ಆರೋಪಿಗಳನ್ನೂ ಮಾತಾಡಿಸಿ ಆರೋಪಿಗಳ ಬಳಿ ತನ್ನ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ. ಬಳಿಕ ಆರೋಪಿಯ ವಿರುದ್ಧ ದಾಖಲಾದ ಕೇಸ್ನ ಪೂರ್ವಪರ ತಿಳಿದುಕೊಂಡು ನೇರವಾಗಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತಿದ್ದ. ಆರೋಪಿಯನ್ನು ಕಾನೂನು ಬಾಹಿರವಾಗಿ ಪೊಲೀಸರು ಅಭಿರಕ್ಷೆಯಲ್ಲಿ ಇಟ್ಟುಕೊಂಡಿದ್ದಾರೆಂದು ಸುಳ್ಳು ದೂರು ನೀಡುತ್ತಿದ್ದ. ಬಳಿಕ ಈ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದ. ಹೀಗೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕಿಲಾಡಿತನ ತೋರಿ ಆರೋಪಿ ಸೈಯದ್ ಹಣ ವಸೂಲಿ ಮಾಡಿದ್ದಾನೆ.
ಇದನ್ನೂ ಓದಿ: ತುಮಕೂರು ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ; 346.50 ಕೋಟಿ ರೂ. ಪಾವತಿಸಿದ ಕೇಂದ್ರ
ಸದ್ಯ ಇದೇ ರೀತಿ ಶಿವಾಜಿನಗರ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದ ಸರ್ಫರಾಜ್ ಠಾಣೆಗೆ ಬಂದು ಪೊಲೀಸ್ ಇನ್ಸ್ಪೆಕ್ಟರ್ ಬಳಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ. ಕೇಸ್ ವಾಪಸ್ ಪಡೆಯುವುದಕ್ಕೆ ಹಣ ನೀಡಿ ಎಂದು ಬ್ಲಾಕ್ ಮೇಲ್ ಮಾಡಿದ್ದ. ಅದರಂತೆ 25 ಸಾವಿರ ಹಣ ಕೊಡುವುದಾಗಿ ಕರೆಸಿ ಆರೋಪಿಯನ್ನು ಪೊಲೀಸರು ಲಾಕ್ ಮಾಡಲು ಪ್ರಯತ್ನಿಸಿದ್ದರು. ಆದರೆ ಈ ವೇಳೆ ಪೊಲೀಸರನ್ನ ಯಾಮಾರಿಸಿ ಆರೋಪಿ ಸೈಯದ್ ಸರ್ಫರಾಜ್ ಎಸ್ಕೇಪ್ ಆಗಿದ್ದು ಸದ್ಯ ಈಗ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯ ವಿಚಾರಣೆ ವೇಳೆ 30ಕ್ಕೂ ಹೆಚ್ಚು ಕಡೆ ಇದೇ ಕರಾಮತ್ತು ತೋರಿರೋದು ಬೆಳಕಿಗೆ ಬಂದಿದೆ. ಹಲವು ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿರುವುದು ಪತ್ತೆಯಾಗಿದೆ. ಸದ್ಯ ಶಿವಾಜಿನಗರ ಪೊಲೀಸರು ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:45 am, Tue, 6 August 24