ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅತಿವೇಗದ ಚಾಲನೆ ಮಾಡ್ತೀರಾ ಹುಷಾರ್: 76 ಮಂದಿಯ ವಿರುದ್ಧ ದಾಖಲಾಯ್ತು ಕೇಸ್
ಕರ್ನಾಟಕದ ಹೆದ್ದಾರಿಗಳಲ್ಲಿ ಅತಿ ವೇಗದ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಸಂಚಾರ ಪೊಲೀಸರು ಇದೀಗ ಕಾರ್ಯಾಚರಣೆ ಶುರು ಮಾಡಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಗಂಟೆಗೆ 130 ಕಿಮೀಗೂ ಹೆಚ್ಚು ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ಆರಂಭವಾಗಿದೆ.
ಬೆಂಗಳೂರು, ಆಗಸ್ಟ್ 6: ಹೆದ್ದಾರಿಗಳಲ್ಲಿ ಗಂಟೆಗೆ 130 ಕಿಮೀ ವೇಗದ ಮಿತಿಯನ್ನು ಮೀರಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ನಂತರದ ಕೆಲವೇ ದಿನಗಳಲ್ಲಿ ಕರ್ನಾಟಕ ಪೊಲೀಸರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ 76 ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆಗಸ್ಟ್ 1 ಮತ್ತು 2ರಂದು ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗಸ್ಟ್ 1ರಿಂದ ಹೊಸ ನಿಯಮ ಜಾರಿಗೆ ಬಂದಿತ್ತು.
ದಾಖಲಾಗಿರುವ ಪ್ರಕರಣಗಳ ಪೈಕಿ ಹೆಚ್ಚಿನವು ಎಸ್‌ಯುವಿಗಳು ಮತ್ತು ಎಂಯುವಿಗಳ ಚಾಲಕರ ಮೇಲಿನದ್ದಾಗಿವೆ. ಹೆದ್ದಾರಿಗಳಲ್ಲಿ 130 ಕಿಮೀ ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿದರೆ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಕಳೆದ ವಾರ ಕರ್ನಾಟಕ ಪೊಲೀಸರು ಘೋಷಿಸಿದ್ದರು.
ರಸ್ತೆ ಅಪಘಾತದ ಸಾವುನೋವುಗಳನ್ನು ಗಮನಿಸಿದಾಗ, ಸುಮಾರು ಶೇ 90 ರಷ್ಟು ಮಾರಣಾಂತಿಕ ಅಪಘಾತಗಳು ವೇಗ ಮತ್ತು ಅತಿವೇಗದ / ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸುತ್ತಿರುವುದು ಕಂಡುಬಂದಿದೆ ಎಂದು ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಹೊಸ ನಿಯಮ ಜಾರಿಗೆ ಬಂದ ಮೊದಲ ದಿನ ನಾವು 33 ಚಾಲಕರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ ಮತ್ತು ಶುಕ್ರವಾರ 43 ವಾಹನಗಳ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುದೆ. ನಾವು ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. 130 ಕಿಮೀ ಮಿತಿಯನ್ನು ಮೀರಿ ಅದಕ್ಕಿಂತ ಹೆಚ್ಚಿನ 5 – 10 ಕಿಮೀ ವೇಗದ ಚಾಲನೆಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆ ಏನು?
ಎರಡೂ ದಿನ ರಾಮನಗರ ಮತ್ತು ಮಂಡ್ಯ ನಡುವೆ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ತಪ್ಪಿತಸ್ಥ ಚಾಲಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1,000 ರೂ. ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ವೇಗದ ಮಿತಿ ಅಳವಡಿಕೆ, ಈ ಸಮಯದಲ್ಲಿ ಬೈಕ್ ಸಂಚಾರ ನಿಷೇಧ
ಈ ಮಧ್ಯೆ, ಹೈಬೀಮ್ ಹೆಡ್ಲೈಟ್ಗಳ ವಿರುದ್ಧದ ಕಾರ್ಯಾಚರಣೆಯನ್ನೂ ಪೊಲೀಸರು ಚುರುಕುಗೊಳಿಸಿದ್ದಾರೆ. ಅಂಥ ವಾಹನಗಳ ವಿರುದ್ಧ ಪೊಲೀಸರು ಜುಲೈನಲ್ಲಿ 28,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. 9,046 ಪ್ರಕರಣಗಳೊಂದಿಗೆ ಬೆಂಗಳೂರು ಅಗ್ರಸ್ಥಾನದಲ್ಲಿದ್ದರೆ, ಮಂಗಳೂರು (1,365), ವಿಜಯನಗರ (1,342), ರಾಯಚೂರು (1,178), ಹುಬ್ಬಳ್ಳಿ-ಧಾರವಾಡ (1,096), ಮತ್ತು ಶಿವಮೊಗ್ಗ (1,085) ನಂತರದ ಸ್ಥಾನದಲ್ಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ