ಜನತಾ ದರ್ಶನ: ನಾಡಿನ ಪ್ರಜೆಗಳ ಕಷ್ಟ ಆಲಿಸಲು ಇಂದು ಇಡೀ ದಿನ ಮೀಸಲಿಟ್ಟ ಸಿದ್ದರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Nov 27, 2023 | 8:39 AM

Siddaramaiah Janata Darshan: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ನವೆಂಬರ್ 27) ಇಡೀ ದಿನ ಜನತಾ ದರ್ಶನ ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ ಬಳಿಕ ಎರಡನೇ ಬಾರಿ ನಡೆಸುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಇದಾಗಿದೆ. ಸದಾ ಆ ಕಾರ್ಯಕ್ರಮ ಈ ಕಾರ್ಯಕ್ರಮ, ಆ ಸಭೆ, ಈ ಸಭೆ ಅಂತ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ನಾಡಿನ ಪ್ರಜೆಗಳ ಕಷ್ಟಗಳಿಗೆ ಕಿವಿಗೊಡಲಿದ್ದಾರೆ.

ಜನತಾ ದರ್ಶನ: ನಾಡಿನ ಪ್ರಜೆಗಳ ಕಷ್ಟ ಆಲಿಸಲು ಇಂದು ಇಡೀ ದಿನ ಮೀಸಲಿಟ್ಟ ಸಿದ್ದರಾಮಯ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ನವೆಂಬರ್ 27): ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ(Siddaramaiah Janata Darshan) ನಡೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಜನತಾ ದರ್ಶನ ಶುರುವಾಗಲಿದ್ದು, ಇಡೀ ದಿನ ಸಿಎಂ ಜನರ ಸಮಸ್ಯೆ, ಸಂಕಷ್ಟಗಳಿಗೆ ಕಿವಿಗೊಟ್ಟು, ನಾಡಿನ ಪ್ರಜೆಗಳ ಅಹವಾಲು ಸ್ವೀಕರಿಸಲಿದ್ದಾರೆ. ಇನ್ನು ಸಹಸ್ರಾರು ಸಂಖ್ಯೆಯಲ್ಲಿ ಜನರ ತಮ್ಮ ಸಮಸ್ಯೆಗಳನ್ನ ಹೊತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ಜನರ ಅನುಕೂಲಕ್ಕಾಗಿ 20 ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಎರಡು ಪ್ರತ್ಯೇಕ ಕೌಂಟರ್​ಗಳು ಇರಲಿವೆ. ಎಲ್ಲಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಖುದ್ದು ಹಾಜರಿರುವಂತೆ ಸೂಚಿಸಲಾಗಿದೆ. 300ಕ್ಕೂ ಹೆಚ್ಚು ಅಧಿಕಾರಿಗಳು ಸ್ಥಳದಲ್ಲಿ ಇರಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಯತ್ನ ಮಾಡಲಿದ್ದಾರೆ. ಡಿಸಿಪಿ, ಮೂವರು ಎಸಿಪಿ, 19 ಇನ್ಸ್​ಪೆಕ್ಟರ್ ಸೇರಿ 550ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಬೆಂಗಳೂರಿನಲ್ಲಿಂದು ಸಾಲು-ಸಾಲು ಪ್ರತಿಭಟನೆ, ಹಲವು ಮಾರ್ಗ ಬದಲಾವಣೆ

ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದು, ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿನ ಪತ್ರಗಳಾದ ಆಧಾರ್‌ ಕಾರ್ಡ್‌ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ.ಜನತಾ ದರ್ಶನದ ಬಗ್ಗೆ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿಗಳು ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದಿದ್ದಾರೆ. ಜನತಾ ದರ್ಶನದ ವೇಳೆಯೇ ಸಿಎಂ ಜಿಲ್ಲಾ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಮಸ್ಯೆ ನಿವಾರಣೆಗೆ ಸೂಚನೆ ನೀಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಸದಾ ಆ ಕಾರ್ಯಕ್ರಮ ಈ ಕಾರ್ಯಕ್ರಮ, ಆ ಸಭೆ, ಈ ಸಭೆ ಅಂತ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ನಾಡಿನ ಪ್ರಜೆಗಳ ಕಷ್ಟಗಳಿಗೆ ಕಿವಿಗೊಡಲಿದ್ದು, ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಿರುವುದು ವಿಶೇಷ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ