ಕರ್ನಾಟಕದ ಪ್ರಥಮ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ

|

Updated on: Sep 24, 2024 | 10:17 PM

ಬೆಂಗಳೂರಿನ ಯಲಹಂಕ ಯೋಜನಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕರ್ನಾಟಕದ ಪ್ರಥಮ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಇಂದು ಲೋಕಾರ್ಪಣೆಗೊಂಡಿದೆ. ಈ ವಿದ್ಯುತ್ ಸ್ಥಾವರ ಬೆಂಗಳೂರಿನ ನಾಗರಿಕರಿಗೆ ಒಂದು ವಿಶೇಷ ಕೊಡುಗೆಯಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಿದೆ.

ಕರ್ನಾಟಕದ ಪ್ರಥಮ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಲೋಕಾರ್ಪಣೆ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ
Follow us on

ಬೆಂಗಳೂರು, (ಸೆಪ್ಟೆಂಬರ್ 24): ಯಲಹಂಕ ಯೋಜನಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕರ್ನಾಟಕದ ಪ್ರಥಮ ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಇಂದು(ಸೆ.24) ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಲೋಕಾರ್ಪಣೆಗೊಳಿಸಿದರು. 370.05 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಈ ಸ್ಥಾವರವನ್ನು ಸ್ಥಾಪಿಸಲಾಗಿದೆ. ಈ ವಿದ್ಯುತ್ ಸ್ಥಾವರ ಬೆಂಗಳೂರಿನ ನಾಗರಿಕರಿಗೆ ಒಂದು ವಿಶೇಷ ಕೊಡುಗೆಯಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಿದೆ.

ಈ ವಿದ್ಯುತ್ ಸ್ಥಾವರದ ವಿಶೇಷತೆ ಏನು?

ಒಟ್ಟು 370 ಮೆ.ವ್ಯಾ. ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್‌ ಸ್ಥಾವರ (ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್)ಅನ್ನು ಸುಮಾರು 2,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಗ್ಯಾಸ್ ಮತ್ತು ಸ್ಟೀಮ್ ಮೂಲಕ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ಇದರ ವಿಶೇಷತೆ. ಗ್ಯಾಸ್ ಟರ್ಬೈನ್ ಮೂಲಕ 237 ಮೆ.ವ್ಯಾ. ಮತ್ತು ಸ್ಟೀಮ್ ಟರ್ಬೈನ್ ಮೂಲಕ 133 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದು ಕರ್ನಾಟಕದಲ್ಲೇ ಮೊದಲ ವಿದ್ಯುತ್ ಉತ್ಪಾದನಾ ಸ್ಥಾವರವಾಗಿದೆ.

ನಾನೇ ಅಡಿಗಲ್ಲು ಹಾಕಿ ಈಗ ನಾನೇ ಲೋಕಾರ್ಪಣೆ ಮಾಡಿದೆ ಎಂದ ಸಿಎಂ

ವಿದ್ಯುತ್ ಸ್ಥಾವರ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಸ್ಥಾವರ ಉದ್ಘಾಟನೆ ಮೂಲಕ ಭವಿಷ್ಯದ ಬೇಡಿಕೆಗೆ ಅಗತ್ಯ ವಿದ್ಯುತ್ ಉತ್ಪಾದನೆಯತ್ತ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. 2016ರಲ್ಲಿ ಈ ಸ್ಥಾವರ ಸ್ಥಾಪನೆಗೆ ಮುಖ್ಯಮಂತ್ರಿಯಾಗಿ ನಾನೇ ಅಡಿಗಲ್ಲು ಹಾಕಿದ್ದೆ. ಆಗ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದರು. ಕೆ.ಜೆ.ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಇದೀಗ ಎಂಟು ವರ್ಷಗಳ ಬಳಿಕ ಮುಖ್ಯಮಂತ್ರಿಯಾಗಿ ಸ್ಥಾವರ ಲೋಕಾರ್ಪಣೆ ಮಾಡಿದ್ದೇನೆ ಎಂದು ಹೇಳಿದರು.

ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧ್ಯವಾಗದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ವಾಣಿಜ್ಯ, ಕೃಷಿ, ಗೃಹ ಬಳಕೆಗೆ ವಿದ್ಯುತ್ ಅನಿವಾರ್ಯವಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸದಿದ್ದಲ್ಲಿ ಜಿಡಿಪಿ ಬೆಳವಣಿಗೆಯೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗುಣಮಟ್ಟದ ವಿದ್ಯುತ್ ಪೂರೈಕೆ ಜೊತೆಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡುತ್ತದೆ ಎಂದರು.

ರಾಜ್ಯದಲ್ಲಿ ಬೇಸಿಗೆಯಲ್ಲಿ 16 ರಿಂದ 17 ಸಾವಿರ ಮೆಗಾವ್ಯಾಟ್ ಮತ್ತು ಮಳೆಗಾಲದಲ್ಲಿ 15 ರಿಂದ 16 ಸಾವಿರ ಮೆಗಾವ್ಯಾಟ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೂ ಭವಿಷ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡು 2030ರ ವೇಳೆಗೆ ಈಗಿರುವ 34,639 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನು 60 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸಲು ಬಜೆಟ್‌ನಲ್ಲಿ ಘೋಷಿಸಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಛತ್ತೀಸ್‌ಗಡದ ಗೋದ್ನಾದಲ್ಲಿ 1600 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ, ಶರಾವತಿಯಲ್ಲಿ 2,000 ಮೆಗಾವ್ಯಾಟ್, ವಾರಾಹಿಯಲ್ಲಿ 1500 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಡಿಕೆ ಶಿವಕುಮಾರ್ ಹೇಳಿದ್ದೇನು?

ಈ ವೇಳೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ರಾಜ್ಯದಲ್ಲಿ ವಿದ್ಯುತ್​​ ಕೊರತೆ ನೀಗಿಸಲು ನಮ್ಮ ಸರ್ಕಾರ ದಿಟ್ಟ ಕ್ರಮ ಕೈಗೊಂಡಿರುವುದರ ಫಲವಾಗಿ ಇಂದು ನೈಸರ್ಗಿಕ ಅನಿಲ ಆಧಾರಿತ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ನಿರ್ಮಾಣವಾಗಿದೆ. ಈ ವಿದ್ಯುತ್ ಸ್ಥಾವರ ಬೆಂಗಳೂರಿನ ನಾಗರಿಕರಿಗೆ ಒಂದು ವಿಶೇಷ ಕೊಡುಗೆಯಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಸಹಕಾರಿಯಾಗಿದೆ. 370.05 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಈ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಇದರ ಸಂಯೋಜಿತ ಪೈಲಟ್ ಉತ್ಪಾದನಾ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದರು.


ಮುಂದಿನ ಹಂತಗಳಲ್ಲಿ ಉತ್ಪಾದನಾ ಪ್ರಮಾಣವನ್ನು ಹಚ್ಚಿಸಲಾಗುತ್ತದೆ. ಕರ್ನಾಟಕದಲ್ಲಿ ಜಲ. ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕಗಳಿದ್ದು, ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಈ ಸ್ಥಾವರಕ್ಕಿದೆ. ಈ ಯೋಜನೆಯು ಸುಸ್ಥಿರ ತ್ಯಾಜ್ಯ ನಿರ್ವಹಣೆ ಮತ್ತು ಶಕ್ತಿ ಉತ್ಪಾದನೆಯ ಕಡೆಗೆ ನಮ್ಮ ಹಂಚಿಕೆಯ ಜವಾಬ್ದಾರಿಯನ್ನು ಒತ್ತಿಹೇಳುತ್ತದೆ. ನಮ್ಮ ಸರ್ಕಾರ ವಿದ್ಯುತ್ ಹಾಗೂ ನೀರು ಪೂರೈಕೆಯಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದು, ಜನರ ಕಲ್ಯಾಣವೇ ನಮ್ಮ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.

Published On - 10:10 pm, Tue, 24 September 24