ಸಿಎಂ ಬೊಮ್ಮಾಯಿ ಸಾಧನೆಗಳ ಕುರಿತ ಧ್ವನಿಸುರುಳಿ ಬಿಡುಗಡೆ: ಜನಸಂಕಲ್ಪ ಸಮಾವೇಶದಲ್ಲಿ ಹಾಡುಗಳ ಪ್ರಸಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2022 | 3:03 PM

ಸಿಎಂ ಬೊಮ್ಮಾಯಿ ಅಭಿಮಾನಿ ಬಳಗದಿಂದ ಹಾಡುಗಳ ರಚನೆ ಮಾಡಿದ್ದು, ಬೊಮ್ಮಾಯಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಹಾಡಿನ ಮೂಲಕ ಪ್ರಸ್ತಾಪ ಮಾಡಲಾಗಿದೆ.

ಸಿಎಂ ಬೊಮ್ಮಾಯಿ ಸಾಧನೆಗಳ ಕುರಿತ ಧ್ವನಿಸುರುಳಿ ಬಿಡುಗಡೆ: ಜನಸಂಕಲ್ಪ ಸಮಾವೇಶದಲ್ಲಿ ಹಾಡುಗಳ ಪ್ರಸಾರ
ಸಿಎಂ ಬೊಮ್ಮಾಯಿ
Follow us on

ಬೆಂಗಳೂರು: ಸಿಎಂ ಬೊಮ್ಮಾಯಿ (Basavaraj Bommai) ಸಾಧನೆಗಳ ಕುರಿತ ಧ್ವನಿಸುರುಳಿಯನ್ನು KFDC ಅಧ್ಯಕ್ಷೆ ತಾರಾ ಅನುರಾಧ ಬಿಡುಗಡೆ ಮಾಡಿದರು. ಸಿಎಂ ಬೊಮ್ಮಾಯಿ ಅಭಿಮಾನಿ ಬಳಗದಿಂದ ಹಾಡುಗಳ (Songs) ರಚನೆ ಮಾಡಿದ್ದು, ಬೊಮ್ಮಾಯಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಹಾಡಿನ ಮೂಲಕ ಪ್ರಸ್ತಾಪ ಮಾಡಲಾಗಿದೆ. ವಿದ್ಯಾನಿಧಿ, ಪಿಂಚಣಿ ಹೆಚ್ಚಳ, ಪೌರಕಾರ್ಮಿಕರ ಖಾಯಂ, ಅಮೃತ ಯೋಜನೆಗಳು, ಜನಸೇವಕ, ರೈತಶಕ್ತಿ ಸರ್ಕಾರದ ಹಲವು ಯೋಜನೆಗಳ ಕುರಿತು ಹಾಡುಗಳನ್ನು ರಚಿಸಲಾಗಿದೆ. ನಾಳೆಯಿಂದ ಜನಸಂಕಲ್ಪ ಸಮಾವೇಶದಲ್ಲಿ ಹಾಡುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇಂದು ಮಹಾರಾಷ್ಟ್ರಕ್ಕೆ ತೆರಳಲಿರುವ ಸಿಎಂ ಬೊಮ್ಮಾಯಿ‌, ಕೊಲ್ಹಾಪುರದ ಕನ್ನೇರಿಯ ಸಿದ್ಧಗಿರಿ ಮಠದಲ್ಲಿ ನಡೆಯುತ್ತಿರುವ ಸಂತ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 3ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ರಾಜ್ಯ ಪ್ರವಾಸದ ಸಿದ್ಧತೆ ಬಗ್ಗೆ ಮಾಹಿತಿ‌ ಪಡೆಯಲಿರುವ ಸಿಎಂ, ನಾಳೆಯಿಂದ 3 ದಿನ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಜನಸಂಕಲ್ಪ ಯಾತ್ರೆಗೆ ಬಿಜೆಪಿ ಸಕಲ ಸಿದ್ಧತೆ: ನಾಳೆ ಚಾಲನೆ   

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಲರ್ಟ್ ಆಗಿದೆ. ಜನಸಂಕಲ್ಪ ಯಾತ್ರೆ ನಡೆಸಲು ಬಿಜೆಪಿ ಭರ್ಜರಿ ಸಿದ್ದತೆ ನಡೆಸಿದೆ. ಅಕ್ಟೋಬರ್ 11 ರಿಂದ ಕ್ಷೇತ್ರ ಸಂಚಾರ ನಡೆಸಲು ಬಿಜೆಪಿಸನ್ನದ್ಧವವಾಗಿದೆ. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಬಿಜೆಪಿ ನಾಯಕರು ಜನಸಂಕಲ್ಪ ಯಾತ್ರೆ ನಡೆಸಲು ಸಿದ್ದರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ನಾಯಕ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಿಂದ ಅ. 11 ರಂದು ಬಿಜೆಪಿ ಸಂಕಲ್ಪ ಯಾತ್ರೆ ಹೊರಡಲಿದೆ. ಈ ಹಿನ್ನೆಲೆ ಅ. 11 ರಂದು ಗ್ರಾಮದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ರಾಯಚೂರಿನಿಂದ ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಬಿ.ಎಸ್​​ ಯಡಿಯೂರಪ್ಪಅವರೊಂದಿಗೆ ಸಿಎಂ ಬೊಮ್ಮಾಯಿ ಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ 100 ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ ಸಮಾವೇಶ ನಡೆಸಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನೇತೃತ್ವದ ಮತ್ತೊಂದು ತಂಡ 100 ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅ. 30 ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ, ಮೈಸೂರಿನಲ್ಲಿ ಎಸ್ಸಿ ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ಬಳ್ಳಾರಿಯಲ್ಲಿ ಎಸ್ಟಿ ಮೋರ್ಚಾ ಸಮಾವೇಶ ಆಯೋಜಿಸಲಾಗಿದ್ದು, ಬರೋಬ್ಬರಿ 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.