ಸಿಎಂ ಬೊಮ್ಮಾಯಿ ಲಿಂಗಾಯತ ಸಮಾಜಕ್ಕೆ ಸೇರಿದವರು, ಆದ್ರೂ ಎಸ್ಸಿ,ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ: ಸಚಿವ ಆರ್.ಅಶೋಕ್
ನಾನೀಗ ಒಂದು ಜಾತಿ, ಸಮುದಾಯ ನಾಯಕ ಅಲ್ಲ. ಎಲ್ಲಾ ಸಮುದಾಯಗಳನ್ನು ನಾನು ಒಂದೇ ರೀತಿ ನೋಡಬೇಕು ಎಂದು ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಯವರು ಲಿಂಗಾಯತ ಸಮಾಜಕ್ಕೆ ಸೇರಿದವರು. ಆದರೂ ಎಸ್ಸಿ, ಎಸ್ಟಿ (SC, ST) ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಕಂದಾಯ ಖಾತೆ ಸಚಿವ ಆರ್.ಅಶೋಕ್ ಹೇಳಿದರು. ಎಲ್ಲಾ ಜಾತಿಯವರು ಕೂಡ ಮೀಸಲಾತಿ ಹೆಚ್ಚಳ ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಮನವಿಯನ್ನು ಗೌರವಯುತವಾಗಿ ತೆಗೆದುಕೊಂಡಿದ್ದೇವೆ. ಮೀಸಲಾತಿ ಹೆಚ್ಚಳ ಸಂಬಂಧ ಕಾನೂನಾತ್ಮಕ ಕ್ರಮ ಕೈಗೊಳುತ್ತೇವೆ. ಸಮಿತಿ ವರದಿ ಪ್ರಕಾರ SC, ST ಮೀಸಲಾತಿ ಹೆಚ್ಚಳ ಮಾಡಲಾಗಿದೆ. ನಾನೀಗ ಒಂದು ಜಾತಿ, ಸಮುದಾಯ ನಾಯಕ ಅಲ್ಲ. ಎಲ್ಲಾ ಸಮುದಾಯಗಳನ್ನು ನಾನು ಒಂದೇ ರೀತಿ ನೋಡಬೇಕು ಎಂದು ಸಚಿವ ಆರ್.ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಡವ, ಮಧ್ಯಮ, ಸಾಹುಕಾರ ಎಂಬ ಪ್ರಶ್ನೆಯೇ ಇಲ್ಲ. ಎಲ್ಲವನ್ನೂ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಇಬ್ಬರ ಮೃತದೇಹಗಳನ್ನು ವಿಮಾನದಲ್ಲಿ ತರಲು ವ್ಯವಸ್ಥೆ:
ಉತ್ತರಾಖಂಡ್ ಹಿಮಪಾತದಲ್ಲಿ ಇಬ್ಬರು ಕನ್ನಡಿಗರು ಸಾವು ವಿಚಾರವಾಗಿ ಮಾತನಾಡಿದ ಅವರು ಕರ್ನಾಟಕದ ವಿಕ್ರಮ್, ರಕ್ಷಿತ್ ಎಂಬುವರು ಮೃತಪಟ್ಟಿದ್ದಾರೆ. ನೆಹರು ಇನ್ಸ್‌ಟಿಟ್ಯೂಟ್ ಟ್ರೈನಿಂಗ್ ಮೂಲಕ ಹೋಗಿದ್ದರು. ಇಬ್ಬರ ಮೃತದೇಹಗಳನ್ನು ವಿಮಾನದಲ್ಲಿ ತರಲು ವ್ಯವಸ್ಥೆ ಮಾಡಿದ್ದು, ಸಂಜೆ 4.40ಕ್ಕೆ ರಕ್ಷಿತ್ ಮೃತದೇಹ ಬೆಂಗಳೂರಿಗೆ ಬರಲಿದೆ. ವಿಕ್ರಮ್ ಮೃತದೇಹ ರಾತ್ರಿ 9.15ಕ್ಕೆ ಏರ್ಪೋರ್ಟ್ಗೆ ಬರಲಿದೆ. ಸರ್ಕಾರದ ವೆಚ್ಚದಲ್ಲೇ ಇಬ್ಬರ ಮೃತದೇಹ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನಾನೂ ಕೂಡ ಕೆಲವು ಕಡೆ ಪ್ರವಾಸ ಮಾಡಲಿದ್ದೇನೆ
ಬಿಜೆಪಿ ರಾಜ್ಯ ಪ್ರವಾಸ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕರೆ ಮಾಡಿದ್ದಾರೆ. ಎಲ್ಲೆಲ್ಲಿ ಹೋಗಬೇಕು ಅಂತ ಲಿಸ್ಟ್ ಮಾಡಿದ್ದೇವೆ. ಸಾಧ್ಯವಾಗುವ ಕಡೆ ಲಿಸ್ಟ್ ಮಾಡಿದ್ದೇವೆ. ನಾನೂ ಕೂಡ ಕೆಲವು ಕಡೆ ಪ್ರವಾಸ ಮಾಡಲಿದ್ದೇನೆ ಎಂದು ಹೇಳಿದರು.
ಬಿಜೆಪಿ ಎಸ್ಟಿ ಶಾಸಕರಿಗೆ ಬಲ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ನಾಯಕ ಸಮುದಾಯದ ಅಧಿಕಾಯಕ ಎಂದೇ ಬಿಂಬಿತರಾಗಿರುವ ಶ್ರೀರಾಮುಲು ಘೋಷಣೆ ಮಾಡಿದ್ದರು. ಮೀಸಲಾತಿ ಹೆಚ್ಚಳ ಮಾಡುವುದು ಶತಸಿದ್ಧ, ಇದನ್ನು ರಕ್ತದಲ್ಲಿ ಬರೆದುಕೊಡುವೆ ಅಂತೆಲ್ಲಾ ಹೇಳಿಕೆ ನೀಡಿದ್ದರು. ಆದರೆ, ಹಲವು ವರ್ಷಗಳಾದರೂ ಮೀಸಲಾತಿ ಹೆಚ್ಚಳ ಸಾಧ್ಯವಾಗಿರಲಿಲ್ಲ. ಇದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಸರ್ಕಾರ ಎಸ್ಟಿ ಮೀಸಲಾತಿಯನ್ನು ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದು, ಎಸ್ಟಿ ಮೀಸಲಾತಿ ಕ್ಷೇತ್ರದಿಂದ ಗೆದ್ದು ಬಂದಿರುವ ಶಾಸಕರಿಗೆ ಬಲ ಬಂದಂತಾಗಿದೆ. ಅಲ್ಲದೇ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದೆ. ಈ ಮೀಸಲಾತಿ ಹೆಚ್ಚಳ ಅಸ್ತ್ರವನ್ನು ಈ ಬಾರಿ ಚುನಾವಣೆಗೆ ಬಲವಾಗಿ ಬಳಸಿಕೊಳ್ಳಲು ಬಿಜೆಪಿ ಹೈಕಾಂಡ್, ಎಸ್ಟಿ ಮೀಸಲು ಕ್ಷೇತ್ರದಿಂದ ಗೆದ್ದು ಬಂದಿರುವ ಶಾಸಕರಿಗೆ ಸಲಹೆ ನೀಡಿದೆ. ಅಲ್ಲದೇ ಎಸ್ಟಿ ಸಮುದಾಯ ಮತಗಳನ್ನ ಕ್ರೂಢೀಕರಿಸಬೇಕೆಂದು ಟಾಸ್ಕ್ ನೀಡಿದೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.