ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇವೆ ಆರು ರೈಲುಗಳು: ಕೇವಲ 10 ರೂ. ಟಿಕೆಟ್, ಆದರೂ ಕೇಳೋರಿಲ್ಲ!
ಪ್ರಯಾಣಿಕರಿಗೆ ನೆರವಾಗಲೆಂದು ನೈಋತ್ಯ ರೈಲ್ವೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರು ರೈಲುಗಳ ವ್ಯವಸ್ಥೆ ಮಾಡಿದೆ. ವಿಮಾನ ನಿಲ್ದಾಣದ ಬಳಿಯ ರೈಲು ನಿಲ್ದಾಣದಿಂದ ಉಚಿತ ಬಸ್ ಕೂಡ ಇದೆ. ಟಿಕೆಟ್ ದರವೋ ಅತಿ ಕಡಿಮೆ. ಆದರೂ ಅದನ್ನು ಕೇಳುವವರೇ ಇಲ್ಲವಾಗಿದೆ. ಇದಕ್ಕೆ ಕಾರಣವೇನು? ಪ್ರಯಾಣಿಕರು ಹೇಳುವುದೇನು? ಇಲ್ಲಿದೆ.
ಬೆಂಗಳೂರು, ಆಗಸ್ಟ್ 28: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸುಗಮ ಸಂಪರ್ಕ ಕಲ್ಪಿಸುವುದಕ್ಕಾಗಿ ನೈಋತ್ಯ ರೈಲ್ವೆ ಆರು ರೈಲುಗಳ ವ್ಯವಸ್ಥೆ ಮಾಡಿದೆ. ಆದರೆ, ಕೇವಲ 10ರಿಂದ 30 ರೂ.ನಷ್ಟು ಕಡಿಮೆ ಟಿಕೆಟ್ ದರ ಇದ್ದಾಗ್ಯೂ ದಿನಕ್ಕೆ ಸರಾಸರಿ ಕೇವಲ 30 ಪ್ರಯಾಣಿಕರಷ್ಟೇ ಇವುಗಳ ಸೌಲಭ್ಯ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ಅನುಕೂಲವಾಗುವಂತೆ ಕೆಐಎ ರೈಲು ನಿಲ್ದಾಣವನ್ನು ನಿರ್ಮಿಸಿದೆ ಮತ್ತು 2021 ರಲ್ಲಿ ಅದನ್ನು ಉದ್ಘಾಟಿಸಲಾಗಿತ್ತು. ಇದು ವಿಮಾನ ನಿಲ್ದಾಣದಿಂದ ಕೇವಲ 3.5 ಕಿಮೀ ದೂರದಲ್ಲಿದೆ.
ಅನೇಕ ಬೆಂಗಳೂರಿಗರಿಗೆ ವಿಮಾನ ನಿಲ್ದಾಣಕ್ಕೆ ತೆರಳಲು ರೈಲು ಆಯ್ಕೆಯ ಬಗ್ಗೆ ತಿಳಿದಿಲ್ಲ. ಕೆಲವರಿಗೆ ಇದರ ಬಗ್ಗೆ ತಿಳಿದಿದ್ದರೂ ಅವರ ವಿಮಾನ ಪ್ರಯಾಣದ ಸಮಯ ಮತ್ತು ರೈಲಿನ ವೇಳಾಪಟ್ಟಿ ಹೊಂದಿಕೆಯಾಗದ ಕಾರಣ ರೈಲಿನಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಲು ಪ್ರಯಾಣಿಕರು ಸಾಮಾನ್ಯವಾಗಿ ಖಾಸಗಿ ವಾಹನಗಳು, ಕ್ಯಾಬ್‌ಗಳು ಅಥವಾ ಬಿಎಂಟಿಸಿಯ ವಾಯು ವಜ್ರ ಬಸ್‌ಗಳನ್ನು ಬಳಸುತ್ತಾರೆ. ಕೇಂದ್ರ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಪ್ರಯಾಣಿಸಲು ಸಾಮಾನ್ಯವಾಗಿ 900 ರೂ. ವೆಚ್ಚವಾಗುತ್ತದೆ.
ಸದ್ಯ ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳನ್ನು ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಆರು ರೈಲುಗಳನ್ನು ನಿರ್ವಹಿಸುತ್ತದೆ. ಇವುಗಳು ಎಂಟರಿಂದ 12 ಕೋಚ್ಗಳನ್ನು ಹೊಂದಿವೆ.
ಪ್ರಯಾಣಿಕರಿಗೆ ಇರುವ ಸಮಸ್ಯೆಗಳೇನು?
ಹೆಚ್ಚಿನ ಬೆಂಗಳೂರಿಗರಿಗೆ ವಾಸದ ಸ್ಥಳದ ಕಾರಣಕ್ಕೆ ವಿಮಾನ ನಿಲ್ದಾಣವನ್ನು ತಲುಪಲು ರೈಲು ಪ್ರಯಾಣ ಅಷ್ಟೊಂದು ಅನುಕೂಲಕರವಾಗಿ ಇಲ್ಲ. ರೈಲು ನಿಲ್ದಾಣವನ್ನು ತಲುಪಲು ಸಾಕಷ್ಟು ಸಮಯ ಹಿಡಿಯುತ್ತದೆ. ಎರಡೆರಡು ಬಾರಿ ಲಗೇಜ್ಗಳನ್ನು ಲೋಡ್ ಮಾಡಬೇಕಾಗುತ್ತದೆ. ಈ ಎಲ್ಲ ಅಂಶಗಳು ರೈಲು ಪ್ರಯಾಣ ಆಯ್ಕೆ ಮಾಡದಿರಲು ಕಾರಣವಾಗುತ್ತಿವೆ ಎಂದು ಪ್ರಯಾಣಿಕರೊಬ್ಬರ ಹೇಳಿಕೆ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಪ್ರತಿಯೊಂದು ಆಯ್ಕೆಯೂ ಎಲ್ಲರಿಗೂ ಸೇವೆ ಒದಗಿಸುವುದಿಲ್ಲ. ಆದರೆ ಆಯ್ಕೆಗಳನ್ನು ಹೊಂದಿರುವುದು ಮತ್ತು ಅವೆಲ್ಲವೂ ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಆದರೆ ,ರೈಲು ಸೇವೆಯು ಅನೇಕ ರೀತಿಯಲ್ಲಿ ನೋಡಿದರೆ ವಿಫಲವಾಗಿದೆ. ಇದು ಕೆಲವೇ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ತುಂಬಾ ವಿರಳವಾಗಿದೆ ಮತ್ತು ಸಮಯಕ್ಕೆ ತಲುಪುವುದಿಲ್ಲ ಎಂದು ನಾಗರಿಕ ಕಾರ್ಯಕರ್ತ ರಾಜ್‌ಕುಮಾರ್ ದುಗರ್ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.
ಏಪ್ರಿಲ್ನಲ್ಲಿ ಮೂರು ಬಾರಿ ರೈಲನ್ನು ಬಳಸಿದ್ದೆ. ಈ ರೈಲುಗಳು ಸಮಯಕ್ಕೆ ಸರಿಯಾಗಿ ಹೊರಡುತ್ತವೆ, ಆದರೆ ದಾರಿಯಲ್ಲಿ ಸ್ಥಗಿತಗೊಳ್ಳುತ್ತವೆ. ಒಮ್ಮೆ, ಚನ್ನಸಂದ್ರದ ಬಳಿ ಕ್ರಾಸಿಂಗ್‌ಗೆ ಮುಂಚಿತವಾಗಿ ಸುಮಾರು ಅರ್ಧ ಘಂಟೆಯವರೆಗೆ ರೈಲು ನಿಂತಿತು. ವಿಮಾನವನ್ನು ತಲುಪಬೇಕಾದ ವ್ಯಕ್ತಿಯು ಅಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಲು ಎಂದಿಗೂ ಬಯಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಮಾನ ನಿಲ್ದಾಣಕ್ಕೆ ರೈಲುಗಳ ವೇಳಾಪಟ್ಟಿ
ಸೈಋತ್ಯ ರೈಲ್ವೆಯು ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಆರು ರೈಲುಗಳನ್ನು ನಿರ್ವಹಿಸುತ್ತದೆ. ಕೆಎಸ್ಆರ್ ಬೆಂಗಳೂರು (SBC), ಯಶವಂತಪುರ (YPR), ಮತ್ತು ಬೆಂಗಳೂರು ಕಂಟೋನ್ಮೆಂಟ್ (BNC) ನಿಲ್ದಾಣಗಳಿಂದ ತೆರಳುವ ರೈಲುಗಳು ಕೆಐಎ ಹಾಲ್ಟ್ ನಿಲ್ದಾಣದಲ್ಲಿ ನಿಲ್ಲುತ್ತವೆ. ಈ ರೈಲುಗಳು ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು, ದೊಡ್ಡಜಾಲ, ಮಲ್ಲೇಶ್ವರಂ, ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಡಿಗೇಹಳ್ಳಿಯಲ್ಲಿ ನಿಲುಗಡೆ ಹೊಂದಿವೆ.
ಬೆಂಗಳೂರು ವಿಮಾನ ನಿಲ್ದಾಣ ಆಡಳಿತವು ರೈಲು ನಿಲ್ದಾಣ ಮತ್ತು ಎರಡು ಟರ್ಮಿನಲ್ಗಳ ನಡುವೆ ಉಚಿತ ಬಸ್ ಸೇವೆ ಒದಗಿಸುತ್ತಿದೆ. ರೈಲು ಪ್ರಯಾಣ ದರ 10 ರಿಂದ 30 ರೂ. ಇದೆ. ಭಾನುವಾರ ಯಾವುದೇ ರೈಲುಗಳು ಇರುವುದಿಲ್ಲ.
ಇದನ್ನೂ ಓದಿ: ಬಿಎಂಟಿಸಿಗೆ ತಲೆನೋವಾದ ಬೆಂಗಳೂರು ಪಂಕ್ಚರ್ ಮಾಫಿಯ; 6 ತಿಂಗಳಲ್ಲಿ 482 ಬಿಎಂಟಿಸಿ ಬಸ್ಗಳ ಟೈರ್ ಪಂಕ್ಚರ್
ವಿಮಾನ ನಿಲ್ದಾಣಕ್ಕೆ ಹೋಗುವ ರೈಲುಗಳಲ್ಲಿ, ಬೆಂಗಳೂರು ಕಂಟೋನ್ಮೆಂಟ್‌ನಿಂದ ಬೆಳಿಗ್ಗೆ 5.10 ಕ್ಕೆ ಮತ್ತು ಕೊನೆಯದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಸಂಜೆ 6.20 ಕ್ಕೆ ಹೊರಡುತ್ತವೆ. ಕೆಐಎ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಮೊದಲ ರೈಲು ಬೆಳಿಗ್ಗೆ 8.18 ಕ್ಕೆ ಮತ್ತು ಕೊನೆಯದು ಸಂಜೆ 7.23 ಕ್ಕೆ ಹೊರಡುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ