ರಾಜಭವನ-ಸರ್ಕಾರ ಸಂಘರ್ಷ: ರಾಜ್ಯಪಾಲರಿಂದ 11 ಮಸೂದೆ ವಾಪಸ್
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಘರ್ಷಣೆ ನಡೆಯುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೆ ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ಹೆಚ್ಚಿನ ಮಾಹಿತಿ ಕೋರಿ ವಾಪಸ್ ಕಳುಹಿಸಿದ್ದಾರೆ. ಯಾವ ಯಾವ ಮಸೂದೆಗಳನ್ನು ವಾಪಸ್ ಕಳುಹಿಸಿದ್ದಾರೆ? ರಾಜ್ಯಪಾಲರು ಕೇಳಿದ ಸ್ಪಷ್ಟನೆ ಇಲ್ಲಿದೆ.
ಬೆಂಗಳೂರು, ಆಗಸ್ಟ್ 27: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ನಂತರ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಜೋರಾಗಿದೆ. ಇದರ ಪರಿಣಾಮವೋ ಎಂಬಂತೆ ರಾಜ್ಯಪಾಲರು 11 ಮಸೂದೆಗಳಿಗೆ ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರ (Karnataka Government) ಹಿಂತಿರುಗಿಸಿದ್ದಾರೆ. ಇದರಿಂದ ಮಸೂದೆಗಳು ಪಾಸಾಗದೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯಪಾಲರು ವಾಪಸ್ ಕಳುಹಿಸಿದ ಮಸೂದೆಗಳಾವವು? ಇಲ್ಲಿದೆ ವರದಿ.
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ-2024: ಶಾಸಕರು ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಅವರು ಅನರ್ಹರಾಗದಂತೆ ತೆಡಯಲು. ಮತ್ತು ವಿಧಾಸಭೆ ಅಥವಾ ವಿಧಾನ ಪರಿಷತ್ನ ಸದಸ್ಯರಾಗಿರುವವರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ-1 ಮತ್ತು ಕಾರ್ಯದರ್ಶಿ-2, ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ, ಮುಖ್ಯಮಂತ್ರಿಯ ಸಲಹೆಗಾರ (ನೀತಿ ಮತ್ತು ಯೋಜನೆ) ಮತ್ತು ಕರ್ನಾಟಕ ರಾಜ್ಯ ನೀರಿ ಮತ್ತು ಯೋಜನೆ ಆಯೋಗದ ಉಪಾಧ್ಯಕ್ಷರ ಹುದ್ದೆಗೆ ನೇಮಕವಾಗಿರುವವರನ್ನು ಅನರ್ಹರಾಗುವುದರಿಂದ ತಡೆಯಲು ರಾಜ್ಯ ಸರ್ಕಾರ ಈ ಮಸೂದೆಯನ್ನು ಜಾರಿ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಮುಡಾ, ವಾಲ್ಮೀಕಿ ನಿಗಮ ಹಗರಣಗಳ ದಾಖಲೆ ನಮಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು: ಜೋಶಿ
ಆದರೆ, ರಾಜ್ಯಪಾಲರು ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. “ಕರ್ನಾಟಕ ವಿಧಾನಮಂಡಲ (ಅನರ್ಹತೆ ನಿವಾರಣಾ) (ತಿದ್ದುಪಡಿ) ಮಸೂದೆ-2024ರ ಸಂಬಂಧ ಜ.29ಕ್ಕೆ ಕೆಲ ಸ್ಪಷ್ಟನೆ ಕೇಳಿದ್ದೇನೆ. ಆದರೆ, ಈವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ” ಎಂದು ಇತರ ಸ್ಪಷ್ಟನೆಗಳೊಂದಿಗೆ ವಿವರಣೆ ಕೇಳಿ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.
ವಾಪಸ್ ಕಳುಹಿಸಲಾದ ಮಸೂದೆಗಳು
- ಕರ್ನಾಟಕ ಸಾರ್ವಜನಿಕ ಪರೀಕ್ಷಾ (ಭ್ರಷ್ಟಾಚಾರ ತಡೆ) ವಿಧೇಯಕ
- ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ)
- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ
- ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ
- ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ
- ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ
- ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ
- ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ
- ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ
- ಗದಗ ಬೆಟಗೇರಿ ವ್ಯಾಪರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ
ಜನವರಿಯಿಂದ ಇಲ್ಲಿಯವರೆಗೆ ರಾಜ್ಯಪಾಲರು ಒಟ್ಟು 11 ಮಸೂದೆಗಳನ್ನು ಹೆಚ್ಚಿನ ಮಾಹಿತಿ ಕೋರಿ ವಾಪಸ್ ಕಳುಹಿಸಿದ್ದಾರೆ. ಇದು ಸರ್ಕಾರ ತಲೆನೋವಾಗಿದ್ದರೂ, ರಾಜ್ಯಪಾಲರಿಗೆ ಸ್ಪಷ್ಟನೆ ನೀಡಲೇಬೇಕಾಗುತ್ತದೆ. ಸದ್ಯಕ್ಕಂತು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಘರ್ಷಣೆ ನಡೆಯುತ್ತಿದ್ದು, ಈ ಮಸೂದೆಗಳನ್ನ ಜಾರಿಗೆ ತರಲು ಸರ್ಕಾರ ಯಾವ ಹೆಜ್ಜೆ ಇಡುತ್ತೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Tue, 27 August 24