ಬೆಂಗಳೂರು: ಕರ್ನಾಟಕದಲ್ಲಿ ಮತದಾರರಿಗೆ ಬಿಜೆಪಿ ಹಣ ಹಂಚಿಕೆ ಮಾಡಿಲ್ಲ. ತೆಲಂಗಾಣ ರಾಜ್ಯದಲ್ಲಿ ಹಣ ಹಂಚಿದ ವಿಡಿಯೋ ತೋರಿಸಿ ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ನಿನ್ನೆ (ಅಕ್ಟೋಬರ್ 29) ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಆರೋಪ ಸುಳ್ಳು ಎಂದು ಟಿವಿ9 ಡಿಜಿಟಲ್ಗೆ ರಾಜ್ಯ ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ತೆಲಂಗಾಣದಲ್ಲಿ ಈಟಲ ರಾಜೇಂದ್ರ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಹುಜುರಾಬಾದ್ ಕ್ಷೇತ್ರ ಉಪಚುನಾಣೆಯಲ್ಲಿ ಹಣ ಹಂಚಿಕೆ ಮಾಡಿರುವ ವಿಡಿಯೋವನ್ನು ತೋರಿಸಿ ಕರ್ನಾಟಕದಲ್ಲಿ ಹಣ ಹಂಚಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತದಾರರಿಗೆ ಯಾವುದೇ ಹಣ ಹಂಚುತ್ತಿಲ್ಲ ಎಂದು ತೆಲಂಗಾಣ ವಿಡಿಯೋ ತೋರಿಸಿದಕ್ಕೆ ರಾಜ್ಯ ಬಿಜೆಪಿ ಮೂಲಗಳು ಆಕ್ರೋಶ ವ್ಯಕ್ತಪಡಿಸಿವೆ.
ಡಿ.ಕೆ.ಶಿವಕುಮಾರ್ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಕೊಳ್ಳುತ್ತಿದ್ದಾರೆ: ಸಂಸದ ಸಂಗಣ್ಣ ಕರಡಿ
ತೆಲಂಗಾಣ ವಿಡಿಯೋ ಬಿಡುಗಡೆ ಮಾಡಿದ್ದಕ್ಕೆ ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಪ್ರತಿಕ್ರೀಯೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ವ್ಯಕ್ತಿತ್ವ ಹೆಚ್ಚಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುವ ಕೆಲಸ ಮಾಡಬಾರದು. ನಕಲಿ ವಿಡಿಯೋ ತೋರಸಿ ಅವರ ವ್ಯಕ್ತಿತ್ವ ಹಾಳು ಮಾಡಿಕೊಳ್ಳಬಾರದು. ಶಿವಕುಮಾರ್ ನಾಯಕತ್ವ ಉಳಸಿಕೊಳ್ಳಬೇಕಾದರೆ ಇಂತಹದ್ದು ಕೈ ಬಿಡಬೇಕು. ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ತಾವೇ ಹಾಳಮಾಡಿಕೊಂಡರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಅಸಹಾಯಕತೆ ಅಲ್ಲಿನ ಸ್ಥಿತಿ ನೋಡಿ ಅಪಪ್ರಚಾರ ಮಾಡುತ್ತಿದ್ದಾರೆ: ಸಚಿವ ಹಾಲಪ್ಪ
ಡಿಕೆಶಿ ಅವರಿಂದ ತೆಲಂಗಾಣದ ಹಣ ಹಂಚಿಕೆ ವಿಡಿಯೋ ಬಿಡುಗಡೆ ವಿಚಾರವಾಗಿ ಕೊಪ್ಪಳದಲ್ಲಿ ಗಣಿ, ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಧಗಿ, ಹಾನಗಲ್ ಚುನಾವಣೆ ಫಲಿತಾಂಶದ ರಿಯಾಲಿಟಿ ಅವರಿಗೆ ಗೊತ್ತಾಗಿದೆ. ಇದರಿಂದ ಹತಾಶೆ ಮನೋಭಾವದಿಂದ ಜನರ ದಿಕ್ಕು ತಪ್ಪಿಸುವ ಕೆಲಸ ಡಿಕೆಶಿ ಮಾತನಾಡುತ್ತಿದ್ದಾರೆ. ಜವಾಬ್ದಾರಿಯುತ ನಾಯಕರಾಗಿ ಯಾವುದೋ ವಿಡಿಯೋ, ಎಲ್ಲಿಂದಲೋ ತಂದು ಬಿಡುಗಡೆ ಮಾಡುವುದು ತಪ್ಪು. ಎರಡೂ ಕಡೆ ಬಿಜೆಪಿ ಗೆಲವು ನಿಶ್ಚಿತ ಎಂದು ತಿಳಿಸಿದ್ದಾರೆ.
ಚುನಾವಣೆಗಾಗಿ ಬಿಜೆಪಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹಂಚುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅಕ್ಟೋಬರ್ 21 ರಂದು ಗಂಭೀರ ಆರೋಪ ಮಾಡಿದ್ದರು.
ಬಿಜೆಪಿಯವರು ಗೋಣಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹೋಗಿ ಕೊಡುತ್ತಿದ್ದಾರೆ. ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಗೋಣಿ ಚೀಲ ತೆಗೆದುಕೊಂಡು ಹೋಗಿದ್ದರಲ್ಲ, ಅದರಲ್ಲಿ ಹಣ ತುಂಬಿಕೊಂಡು ಕೆಲ ಸಚಿವರು ಬಂದಿದ್ದಾರೆ. ಬಿಜೆಪಿಯವರು ಒಂದು ವೋಟ್ಗೆ 2ರಿಂದ 3 ಸಾವಿರ ರೂ. ಕೊಡ್ತಿದ್ದಾರಂತೆ ಎಂದು ಹಾವೇರಿ ಜಿಲ್ಲೆಯ ಹುಲ್ಲತ್ತಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯವರು ಹಣ ಹಂಚಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದ್ದಾರೆ. ಕೆಲ ಸಚಿವರು ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಬಂದಿದ್ದಾರೆ. ಹೆದ್ದಾರಿಯಲ್ಲಿ ನಿಂತು ಹಣ ಹಂಚಲಾಗುತ್ತಿದೆ. 2 ಸಾವಿರ ರೂ ನೋಟನ್ನು ಇಲ್ಲೆಲ್ಲೋ ನಿನ್ನೆ ಹಂಚಿದರಂತೆ. ಈ ಮೂಲಕ ಬಿಜೆಪಿಯವರು ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮಗೇನಾದರೂ ಬಿಜೆಪಿಯವರು ಹಣ ಕೊಟ್ಟರೆ ಬಿಡಬೇಡಿ, ತೆಗೆದುಕೊಳ್ಳಿ. ಅವರಿಂದ ಹಣ ಪಡೆದು ನಮಗೆ ವೋಟ್ ಹಾಕಿ. ಅವರೆಲ್ಲಾ ಶಾಸಕರನ್ನ ದುಡ್ಡು ಕೊಟ್ಟು ಖರೀದಿಸಿದವರು. ಅವಱರೋ ಮಂಚದ ರಮೇಶ್ ಜಾರಕಿಹೊಳಿ ಮನೆ ಮಾರಿ ಸರ್ಕಾರ ತಂದಿದ್ದೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ತರುತ್ತೇನೆ ಎಂದು ಹೇಳಿದರು. ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀನಿ ಅಂದರು. ಹಣ ಬಂತಾ? ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ ಯುವಕರಿಗೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದರು. ಆದರೆ, ಈಗ ಜನ ಕೆಲಸ ಕಳೆದುಕೊಂಡು ಊರಿಗೆ ವಾಪಸ್ ಬಂದಿದ್ದಾರೆ. ಯಾವ ಮುಖ ಇಟ್ಕೊಂಡು ಮತ ಕೇಳುತ್ತಿದ್ದಾರೆ. ಎಲ್ಲ ಗೋವಿಂದಾ.. ಗೋವಿಂದಾ ಅನ್ನೋ ಹಾಗಾಗಿದೆ ಎಂದು ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:
ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ; ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಸ್ಫೋಟಕ ಮಾತು!
ಚುನಾವಣೆಗಾಗಿ ಬಿಜೆಪಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹಂಚುತ್ತಿದೆ; ಡಿಕೆ ಶಿವಕುಮಾರ್ ಗಂಭೀರ ಆರೋಪ
Published On - 12:34 pm, Fri, 29 October 21