ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಈಗಾಗಲೇ ಅನ್ಲಾಕ್ 4.0 (ಜುಲೈ 19) ಆರಂಭವಾಗಿದ್ದು, ನಾಳೆಯಿಂದ (ಜುಲೈ 25) ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆ ಪ್ರಕಾರ ನಾಳೆಯಿಂದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಎಂದಿನಂತೆ ಚಟುವಟಿಕೆ ನಡೆಯಲಿದ್ದು, ದೇಗುಲ, ಮಸೀದಿ, ಗುರುದ್ವಾರ, ಚರ್ಚ್ಗಳಲ್ಲಿ ಧಾರ್ಮಿಕ ಚಟುವಟಿಕೆ ಆರಂಭವಾಗಲಿದೆ. ಆದರೆ ಯಾವುದೇ ಜಾತ್ರೆ, ಹಬ್ಬ, ಮೆರವಣಿಗೆಗಳಿಗೆ ಅವಕಾಶವಿಲ್ಲ ಎನ್ನುವುದು ಇಲ್ಲಿ ಮುಖ್ಯ.
ನಾಳೆಯಿಂದ ಅಮ್ಯೂಸ್ಮೆಂಟ್ ಪಾರ್ಕ್ ಓಪನ್ಗೆ ಅನುಮತಿ ನೀಡಿದ್ದು, ಜಲ ಸಂಬಂಧಿತ ಯಾವುದೇ ಸಾಹಸ ಕ್ರೀಡೆಗಳಿಗೆ ಮಾತ್ರ ಅವಕಾಶ ಇಲ್ಲ. ಮೊದಲ ಅನ್ಲಾಕ್ ನಲ್ಲಿ ಬಸ್, ಮೆಟ್ರೋ ಸಂಚಾರ ಸೇರಿದಂತೆ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿತ್ತು, ಬಳಿಕ ಮಾಲ್ಗಳನ್ನು ನಿಯಮಾನುಸಾರ ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಅನ್ ಲಾಕ್ 4.0 ನಲ್ಲಿ ಸಿನಿಮಾ ಥಿಯೇಟರ್ಗಳನ್ನು ಶೇ.50ರಷ್ಟು ಆಸನ ಭರ್ತಿಯೊಂದಿಗೆ ಆಗಸ್ಟ್ 2 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಆ ಮೂಲಕ ನೈಟ್ ಕರ್ಫ್ಯೂ ಅನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ಕಡಿತಗೊಳಿಸಲಾಗಿದೆ. ಜತೆಗೆ ಪದವಿ ಕಾಲೇಜುಗಳನ್ನು ಜುಲೈ 26ರಿಂದ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಆದರೆ ಕೊರೊನಾ ಮೊದಲ ಡೋಸ್ ಪಡೆದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಎಂಬ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ. ಈಗ ಮತ್ತಷ್ಟು ಸಡಿಲಿಕೆಗೊಂಡಿದ್ದು, ಧಾರ್ಮಿಕ ಕೇಂದ್ರಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:
ಕರ್ನಾಟಕದಲ್ಲಿ ಜುಲೈ 5 ರಿಂದ ಅನ್ಲಾಕ್ 3.0 ಜಾರಿ; ಸೋಮವಾರದಿಂದಲೇ ಪಬ್ ತೆರೆಯಲು ಅವಕಾಶ ಸಾಧ್ಯತೆ