ಸರಿಯಾದ ಸಾಕ್ಷಿ ನೀಡಿ, ಡಿಕ್ಲರೇಷನ್​ಗೆ ಸಹಿ ಮಾಡಿ; ಡಿಕೆ ಶಿವಕುಮಾರ್​​ಗೆ ಕರ್ನಾಟಕದ ಚುನಾವಣಾಧಿಕಾರಿ ಸೂಚನೆ

ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮತ ಕಳ್ಳತನ ಅಗುತ್ತಿರುವುದನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಅಕ್ರಮ ನಡೆದಿರುವುದನ್ನು ಕಾಂಗ್ರೆಸ್ ಪಕ್ಷದ ರೀಸರ್ಚ್​ ತಂಡ ವಿಸ್ತೃತವಾಗಿ ಪರಿಶೀಲನೆ ನಡೆಸಿದ ಬಳಿಕ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ಅಯೋಗಕ್ಕೆ ಸಲ್ಲಿಸಿದ್ದೇವೆ ಎಂದಿದ್ದರು. ಆದರೆ, ಸಾಕ್ಷಿಗಳನ್ನು ಸಲ್ಲಿಸಿಲ್ಲ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.

ಸರಿಯಾದ ಸಾಕ್ಷಿ ನೀಡಿ, ಡಿಕ್ಲರೇಷನ್​ಗೆ ಸಹಿ ಮಾಡಿ; ಡಿಕೆ ಶಿವಕುಮಾರ್​​ಗೆ ಕರ್ನಾಟಕದ ಚುನಾವಣಾಧಿಕಾರಿ ಸೂಚನೆ
Dk Shivakumar

Updated on: Aug 08, 2025 | 8:21 PM

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ (Mahadevapura Assembly Constituency) ಲೋಕಸಭಾ ಚುನಾವಣೆ ವೇಳೆ 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾನ ನಡೆದಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿಗೆ ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿ ಕರ್ನಾಟಕದ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ ದೂರನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಡಿಕ್ಲರೇಷನ್​ಗೆ ಸಹಿ ಮಾಡುವಂತೆಯೂ ಅವರು ಸೂಚಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿರುವುದನ್ನು ವಿರೋಧಿಸಿ ಜಾಥಾ ನಡೆಸಿದ್ದರು. ಇದಾದ ನಂತರ ರಾಹುಲ್ ಗಾಂಧಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡದೆ ದೆಹಲಿಗೆ ವಾಪಾಸ್ ತೆರಳಿದ್ದರು. ಅವರ ಬದಲಾಗಿ ಡಿಕೆ ಶಿವಕುಮಾರ್ ಕರ್ನಾಟಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ್ದರು. ಆದರೆ, ನಿಯಮಗಳ ಪ್ರಕಾರ ಆ ದೂರನ್ನು ಬೆಂಬಲಿಸುವ ದಾಖಲೆಗಳನ್ನು ಇನ್ನೂ ಸಲ್ಲಿಸಲಾಗಿಲ್ಲ ಎಂದು ಚುನಾವಣಾ ಆಯೋಗದ ಕಚೇರಿ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ: ಮತಗಳ್ಳತನ: ಅಷ್ಟೆಲ್ಲಾ ಆರೋಪ ಮಾಡಿ ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮತ ಕಳ್ಳತನ ಅಗುತ್ತಿರುವುದನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಅಕ್ರಮ ನಡೆದಿರುವುದನ್ನು ಕಾಂಗ್ರೆಸ್ ಪಕ್ಷದ ರೀಸರ್ಚ್​ ತಂಡ ವಿಸ್ತೃತವಾಗಿ ಪರಿಶೀಲನೆ ನಡೆಸಿದ ಬಳಿಕ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ಅಯೋಗಕ್ಕೆ ಸಲ್ಲಿಸಿದ್ದೇವೆ. ಆದರೆ ಸಮಗ್ರ ವಿವರಣೆಯನ್ನು ಸಲ್ಲಿಸಿಲ್ಲ, ನಮ್ಮ ರೀಸರ್ಚ್​ ಇನ್ನೂ ಮುಗಿದಿಲ್ಲ, ಇನ್ನೂ ಮಾಹಿತಿ ಸಂಗ್ರಹಿಸುವುದು ಬಾಕಿಯಿದೆ ಎಂದು ಹೇಳಿದ್ದರು.


ಆದರೆ, ಡಿಕೆ ಶಿವಕುಮಾರ್ ಅವರು ನೀಡಿದ ದೂರಿಗೆ ಮತ್ತು ಮಾಡಿದ ಆರೋಪಕ್ಕೆ ಸೂಕ್ತ ಸಾಕ್ಷಿ ನೀಡುವಂತೆ ಚುನಾವಣಾಧಿಕಾರಿ ಕೋರಿದ್ದಾರೆ. ಹಾಗೇ, ಡಿಕ್ಲರೇಷನ್​ ಗೆ ಸಹಿ ಹಾಕುವಂತೆ ಆದೇಶಿಸಿದ್ದಾರೆ. ಈ ಡಿಕ್ಲರೇಷನ್ ಅಥವಾ ಘೋಷಣಾ ಪತ್ರದಲ್ಲಿ ಕಾನೂನು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣಾ ಪಟ್ಟಿ ತಿದ್ದುಪಡಿ, ಸಿದ್ದತೆ ಅಥವಾ ಶುದ್ಧೀಕರಣ ಸಂಬಂಧ ನೀಡುವ ತಪ್ಪು ಘೋಷಣೆ ಶಿಕ್ಷಾರ್ಹವಾಗಿದೆ. 1950ರ ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ ಕಲಂ 31ರಂತೆ ಗರಿಷ್ಠ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ದಂಡ ಅಥವಾ ಎರಡೂ ವಿಧಿಸಬಹುದು ಎಂದು ಅರಿತಿದ್ದೇನೆ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು.

ಇದನ್ನೂ ಓದಿ: ಮತಗಟ್ಟೆಗಳ ದೃಶ್ಯಾವಳಿ ನೀಡಿದ್ರೆ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ಆಯೋಗಕ್ಕೆ ರಾಹುಲ್ ಸವಾಲ್

ನ್ಯಾಯಾಲಯ ಅಥವಾ ಅಧಿಕೃತ ದಾಖಲೆಗಳಲ್ಲಿ ಸುಳ್ಳು ಸಾಕ್ಷ್ಯ ಅಥವಾ ಪ್ರಮಾಣಪತ್ರ ನೀಡುವುದು 2023ರ ಕಲಂ 227ರಂತೆ ಶಿಕ್ಷಾರ್ಹವಾಗಿದೆ. ಇದಕ್ಕೆ ಹೆಚ್ಚು ಕಠಿಣ ಶಿಕ್ಷೆಗಳು ವಿಧಿಸಲಾಗುತ್ತವೆ. ವಿಶೇಷವಾಗಿ ನ್ಯಾಯಾಂಗ ಅಥವಾ ಅಧಿಕೃತ ಪ್ರಕರಣಗಳಲ್ಲಿ ಸುಳ್ಳು ಹೇಳಿಕೆ ಅಥವಾ ವಂಚನೆ ಮಾಡಿದರೆ ಎಂಬ ಮಾಹಿತಿ ಕೂಡ ಇದೆ. ಹೀಗೆಂದು ಡಿಕ್ಲೆರೇಷನ್​ ನಲ್ಲಿ ಸಹಿ ಮಾಡಲು ಆಯೋಗ ಸೂಚನೆ ನೀಡಿದೆ. ಇದೇ ರೀತಿ ರಾಹುಲ್ ಗಾಂಧಿಗೂ ಡಿಕ್ಲರೇಷನ್​ಗೆ ಸಹಿ ಮಾಡುವಂತೆ ಚುನಾವಣಾ ಆಯೋಗ ಸೂಚಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ