ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ: ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ; ಅರವಿಂದ ಲಿಂಬಾವಳಿ
ರಾಹುಲ್ ಗಾಂಧಿಯವರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ ಗಳ್ಳತನ ಆಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಲಿಂಬಾವಳಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ ಅರವಿಂದ ಲಿಂಬಾವಳಿ ಹೇಳಿದರು. ಲಿಂಬಾವಳಿ ಅವರು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್ 08: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ (Mahadevpur Assembly Constituency) ಮತಗಳ್ಳತನವಾಗಿದೆ (Voting Feraud) ಎಂಬ ಸಂಸದ ರಾಹುಲ್ ಗಾಂಧಿಯವರ ಆರೋಪವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ (Arvind Limbavali) ತಳ್ಳಿಹಾಕಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರದಲ್ಲಿ ಒಟ್ಟು 6,80,514 ಮತದಾರರಿದ್ದಾರೆ. ನಮ್ಮ ಕ್ಷೇತ್ರಕ್ಕೆ ವಲಸಿಗರು ಬರುವುದರಿಂದ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತಗಳು ಬಂದಿವೆ ಎಂದರು.
ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಗ್ರಾಫ್ ಮೇಲೆ ಹೋಗುತ್ತೆ. ರಾಹುಲ್ ಗಾಂಧಿಗೆ ಏಕೆ ಅಸಮಾಧಾನ ಆಗಿದೆ ಗೊತ್ತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಲೀಡ್ ಸಿಕ್ಕಿತ್ತು. ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಮುಂದಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಹೆಚ್ಚು ಮತ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ತಪ್ಪು ಮಾಹಿತಿ ನೀಡಿದ್ದಾರೆ. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿತ್ತು ಎಂದು ತಿಳಿಸಿದರು.
ರಾಹುಲ್ ಗಾಂಧಿಯವರಿಗೆ ಎಸ್.ಎಂ. ಕೃಷ್ಣ ಮೈಂಡ್ ಫುಲ್ ಆಫ್ ಇಮೆಚ್ಯುರಿಟಿ ಎಂದಿದ್ದರು. ಮತಗಳ್ಳತನ ಆಗಿದೆ ಅಂತ ಮಹದೇವಪುರದಿಂದ ಶುರು ಮಾಡಿದ್ದಾರೆ. 2008 ರಿಂದ ನಾಲ್ಕು ಬಾರಿ ವಿಧಾನಸಭೆ ಮತ್ತು ನಾಲ್ಕು ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹದೇವಪುರದಲ್ಲಿ ಬಿಜೆಪಿ ಗೆದ್ದಿದೆ ಎಂದರು.
ನಾನು ನಾಳೆ ನಾಡಿದ್ದರಲ್ಲಿ ದೆಹಲಿಗೆ ಹೋಗಿ ಪ್ರಾತ್ಯಕ್ಷಿಕೆ ಕೊಡುತ್ತೇನೆ. ರಾಹುಲ್ ಗಾಂಧಿ ಆರೋಪದ ಕುರಿತು ರಿಯಾಲಿಟಿ ಚೆಕ್ ಮಾಡಿದ್ದೇವೆ. ಗುರುಪ್ರೀತ್ ಸಿಂಗ್ ಹೆಸರು ನಾಲ್ಕು ಸಲ ಮತದಾರರ ಪಟ್ಟಿಯಲ್ಲಿದೆ. ಅವರು ನಾಲ್ಕು ಸಲ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಿದ್ದರು ಆದರೆ, ಗುರುಪ್ರೀತ್ ಸಿಂಗ್ ಅವರ ಅರ್ಜಿ ರಿಜೆಕ್ಟ್ ಆಗಿತ್ತು. ಲಖನೌನ ಮೂಲದ ಆದಿತ್ಯ ಸಿಂಗ್ ಅವರು ಕೆಲಸಕ್ಕೆ ಬೆಂಗಳೂರಿಗೆ ಬಂದು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾತನಾಡಿದ್ದಾರೆ.
ವಿಶಾಲ್ ಸಿಂಗ್ ವಾರಾಣಸಿಯವರು, ಮಾರತ್ತಹಳ್ಳಿ ನೆಲೆಸಿದ್ದಾರೆ. ಇವರು ಮೂವರೂ ಕೂಡ ಫಾರ್ಮ್ ನಂಬರ್ 7 ಸಲ್ಲಿಸಿದ್ದಾರೆ. ವಿಳಾಸ ಇಲ್ಲದವರು 40,009 ಎಂದು ಆರೋಪ ಮಾಡಿದ್ದಾರೆ. ನಾವು ಚೆಕ್ ಮಾಡಿದಾಗ 13 ಜನ ಅಷ್ಟೇ ಇದ್ದರು. 1 BHK ಮನೆಯಲ್ಲಿ 80 ಜನ ಇದ್ದರೆಂದು ಆರೋಪಿಸಿದ್ದಾರೆ. ನಾವು ಪರಿಶೀಲಿಸಿದಾಗ 6 ಜನರು ಮತ ಹಾಕಿದ್ದಾರೆ. ಹೋಟೆಲ್ನಲ್ಲಿ ಕೆಲಸ ಮಾಡುವವರು ಕೆಲ ರೂಮ್ಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದರು.
ನಿಮ್ಮ ಬಳಿಯಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿ. ವಿಪಕ್ಷ ನಾಯಕರಾಗಿ ಇದು ಶೋಭೆಯಲ್ಲ. ನಿಮ್ಮ ಸರ್ಕಾರದಲ್ಲಿ ನಿಮ್ಮ ಅಧಿಕಾರಿಗಳೇ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಏಕೆ ಹೋದರು? ಮಹದೇವಪುರ ಕ್ಷೇತ್ರದ ಮಾಹಿತಿಯನ್ನ ವರಿಷ್ಠರು ಕೇಳಿದ್ದಾರೆ. ಕೇಂದ್ರದ ನಮ್ಮ ನಾಯಕರು ಕ್ಷೇತ್ರದ ಮಾಹಿತಿ ಕೇಳಿದ್ದಾರೆ. ಮಾಹಿತಿಯನ್ನ ನಮ್ಮ ಹೈಕಮಾಂಡ್ ನಾಯಕರಿಗೆ ಕೊಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಸತ್ಯ ಬಯಲು
ರಾಹುಲ್ ಗಾಂಧಿಯವರೇ ನಿಮ್ಮ ಪಕ್ಷದವರು ನಿದ್ದೆ ಮಾಡುತ್ತಿದ್ರಾ? 45 ದಿನಗಳಲ್ಲಿ ಹಾಕಬಹುದಾಗಿದ್ದ ಅರ್ಜಿಯನ್ನು ಇನ್ನೂ ಹಾಕಿಲ್ಲ. ಅವರು ನಿದ್ದೆ ಮಾಡುತ್ತಿದ್ದರೂ ಹೇಳುವಾಗ ಸತ್ಯ ಹೇಳಬೇಕಲ್ವಾ? ಯಾವುದೇ ದೂರು ಕೊಡದೇ ತಮ್ಮ ಆಡಳಿತ ಇರುವ ರಾಜ್ಯಜ್ಜೆ ಬಂದು ಅವಾಜ್ ಹಾಕುತ್ತಿರುವುದಕ್ಕೆ ನಾವು ಹೆದರಲ್ಲ. ಜಿ ಪರಮೇಶ್ವರ್ ಹೇಳಿದಂತೆ ನಾವು ಗುದ್ದುವವರಲ್ಲ. ನಿಮ್ಮ ಬಳಿ ಇರುವ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಚುನಾವಣಾ ಆಯೋಗ ಕೇಳುತ್ತಿದೆ, ಕೊಡಿ. ವಿಪಕ್ಷ ನಾಯಕರಾಗಿ ಇದು ಶೋಭೆಯಲ್ಲ. ನಿಮ್ಮ ಸರ್ಕಾರದಲ್ಲಿ ನಿಮ್ಮ ಅಧಿಕಾರಿಗಳೇ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ಕೊಡದೇ ಏಕೆ ವಾಪಸ್ ಹೋದರು ಅಂತ ಅವರನ್ನೇ ಕೇಳಬೇಕು ಎಂದರು.
ಮಹದೇವಪುರ ಕ್ಷೇತ್ರದ ಮಾಹಿತಿಯನ್ನು ನಮ್ಮ ಕೇಂದ್ರದ ನಾಯಕರನ್ನು ಕೇಳಿದ್ದಾರೆ. ಅವರಿಗೆ ನಾವು ಮಾಹಿತಿ ಒದಗಿಸುತ್ತೇವೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Fri, 8 August 25



