AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಕಡೆ ಒಂದೇ ಮತದಾರರ ಹೆಸರಿನ ಅಸಲಿ ಸತ್ಯ ಬಯಲು; ರಾಹುಲ್ ಗಾಂಧಿ ಮಾಡಿದ ಆರೋಪ ಸುಳ್ಳಾ?

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಮತದಾನ ನಡೆದಿದೆ, ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ದಾಖಲೆಗಳನ್ನು ಒದಗಿಸುವಾಗ ಆದಿತ್ಯ ಶ್ರೀವಾಸ್ತವ ಎಂಬ ವ್ಯಕ್ತಿಯನ್ನು ನಕಲಿ ಮತದಾರರೆಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಅದೇ ಆದಿತ್ಯ ಶ್ರೀವಾಸ್ತವ ಇದೀಗ ಅಸಲಿ ವಿಷಯವನ್ನು ತಿಳಿಸಿದ್ದಾರೆ.

4 ಕಡೆ ಒಂದೇ ಮತದಾರರ ಹೆಸರಿನ ಅಸಲಿ ಸತ್ಯ ಬಯಲು; ರಾಹುಲ್ ಗಾಂಧಿ ಮಾಡಿದ ಆರೋಪ ಸುಳ್ಳಾ?
Rahul Gandhi
ಸುಷ್ಮಾ ಚಕ್ರೆ
|

Updated on: Aug 08, 2025 | 3:25 PM

Share

ಬೆಂಗಳೂರು, ಆಗಸ್ಟ್ 8: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ (Mahadevapura Assembly Constituency)  ವ್ಯಾಪ್ತಿಯಲ್ಲಿ ಕಳೆದ ಲೋಕಸಭಾ ಚುನಾವಣೆ ವೇಳೆ ಭಾರೀ ಪ್ರಮಾಣದ ಅಕ್ರಮ ಮತದಾನ ನಡೆದಿದೆ, 1 ಲಕ್ಷಕ್ಕೂ ಅಧಿಕ ನಕಲಿ ಮತಚಲಾವಣೆಯಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನಿನ್ನೆ ಆರೋಪಿಸಿದ್ದರು. ಗುರುಕಿರತ್ ಸಿಂಗ್ ಎನ್ನುವ ವ್ಯಕ್ತಿಯ ಹೆಸರು 4 ಬೂತ್​ಗಳಲ್ಲಿ ಪಟ್ಟಿಯಾಗಿದೆ. ಆದಿತ್ಯ ಶ್ರೀವಾಸ್ತವ ಎಂಬ ವ್ಯಕ್ತಿ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಹೊಂದಿದ್ದಾನೆ. ಇಂತಹ ಸಾವಿರಾರು ಉದಾಹರಣೆ ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿದೆ. ಲಕ್ಷಾಂತರ ಜನರು ಹೀಗೆ ಬೇರೆ ಬೇರೆ ನಕಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಆದರೆ ಈಗ, ಆದಿತ್ಯ ಶ್ರೀವಾಸ್ತವ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದಿತ್ಯ ಲಕ್ನೋದಲ್ಲಿ ಮತದಾರರಾಗಿದ್ದರು. 2016ರಲ್ಲಿ ಉದ್ಯೋಗಕ್ಕಾಗಿ ಮುಂಬೈಗೆ ಸ್ಥಳಾಂತರಗೊಂಡಾಗ ಅವರು ತಮ್ಮ ಹೆಸರನ್ನು ಮುಂಬೈನ ಮತದಾರರ ಪಟ್ಟಿಗೆ ವರ್ಗಾಯಿಸಿಕೊಂಡರು. ನಂತರ, ಅವರನ್ನು ಬೆಂಗಳೂರಿಗೆ ವರ್ಗಾಯಿಸಿದಾಗ ಅವರು ಮತ್ತೆ ಬೆಂಗಳೂರಿನ ಮತದಾರರ ಪಟ್ಟಿಗೆ ತಮ್ಮ ಹೆಸರು ಬದಲಾಯಿಸಿಕೊಂಡರು. 2021ರಲ್ಲಿ ಬೆಂಗಳೂರಿನ ಮತದಾರರಾದರು. ಅವರು ಪ್ರತಿ ಬಾರಿಯೂ ತಮ್ಮ ಹೆಸರು ಮತ್ತು ವಿಳಾಸವನ್ನು ಆನ್‌ಲೈನ್‌ನಲ್ಲಿ ವೈಯಕ್ತಿಕವಾಗಿ ಅಪ್​ಡೇಟ್ ಮಾಡಿದ್ದರು. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮತಕಳ್ಳತನ ಆರೋಪ ಮಾಡಿದ ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನ ಕೇಳಿದ ಬಿಜೆಪಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ತಮ್ಮ ಆರೋಪಗಳಲ್ಲಿ ರಾಹುಲ್ ಗಾಂಧಿ ಆದಿತ್ಯ ಶ್ರೀವಾಸ್ತವ ಎಂಬ ವ್ಯಕ್ತಿಯ ಬಗ್ಗೆ ಪ್ರಸ್ತಾಪಿಸಿ ಆತ ಹಲವು ಸ್ಥಳಗಳಲ್ಲಿ ಮತದಾರನಾಗಿದ್ದಾನೆ ಎಂದು ಹೇಳಿಕೊಂಡಿದ್ದರು. ಆದಿತ್ಯ ಶ್ರೀವಾಸ್ತವ ಅವರ ಹೆಸರು 4 ವಿಭಿನ್ನ ಸ್ಥಳಗಳಲ್ಲಿದೆ ಎಂದು ರಾಹುಲ್ ಹೇಳಿದ್ದರು. ಈಗ ಆದಿತ್ಯ ಶ್ರೀವಾಸ್ತವ ಅವರು ರಾಹುಲ್ ಅವರ ಈ ಹೇಳಿಕೆಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

2019ರಲ್ಲಿ ಆದಿತ್ಯ ಮುಂಬೈನಲ್ಲಿ ಮತ ಚಲಾಯಿಸಿದ್ದರು ಎಂದು ಹೇಳಲಾಗಿತ್ತು. ಲಕ್ನೋದ ಮತದಾರರ ಕಾರ್ಡ್ ಅನ್ನು ಆದಿತ್ಯ ಮುಂಬೈಗೆ ವರ್ಗಾಯಿಸಿಕೊಂಡಿದ್ದರು. ಆದಿತ್ಯ ಪ್ರಕಾರ, ಮತದಾರರ ಕಾರ್ಡ್ ಅನ್ನು 2017 ಅಥವಾ 2018ರಲ್ಲಿ ವರ್ಗಾಯಿಸಲಾಗಿದೆ. ಆಗ ನನ್ನ ಮತದಾರರ ಗುರುತಿನ ಚೀಟಿ ಸಂಖ್ಯೆ ಒಂದೇ ಆಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ; ‘ಅಟಂ ಬಾಂಬ್’ ಸಿಡಿಸಿದ ರಾಹುಲ್ ಗಾಂಧಿ

ಆದಿತ್ಯ ಅವರು 2021ರಲ್ಲಿ ಬೆಂಗಳೂರಿಗೆ ಬಂದು ಮತ್ತೆ ಆಯೋಗದ ವೆಬ್‌ಸೈಟ್‌ನಲ್ಲಿ ಮತದಾರರ ಕಾರ್ಡ್ ಅನ್ನು ವರ್ಗಾಯಿಸಿಕೊಂಡಿದ್ದಾಗಿ ಹೇಳಿದ್ದಾರೆ. ಮುಂಬೈ ತೊರೆದ ನಂತರ ನಾನು ಎಂದಿಗೂ ಮತ ಚಲಾಯಿಸಲು ಅಲ್ಲಿಗೆ ಹೋಗಿಲ್ಲ. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ನನ್ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ನನ್ನ ಹೆಸರು ಬಳಸಿಕೊಳ್ಳಬಾರದಿತ್ತು. ನನ್ನ ಕುಟುಂಬ ಮತ್ತು ತಂದೆಯ ಹೆಸರು ಅದರಲ್ಲಿ ಗೋಚರಿಸುತ್ತದೆ ಎಂದಿದ್ದಾರೆ.

ವೋಟರ್ ಐಡಿಯನ್ನು ವರ್ಗಾಯಿಸಿದ ನಂತರವೂ 4 ಸ್ಥಳಗಳಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತಿರುವುದ ಹೇಗೆ ಎಂದು ಕೇಳಿದಾಗ ಆದಿತ್ಯ, ನಾನು ಫಾರ್ಮ್ ಅನ್ನು ಭರ್ತಿ ಮಾಡಿದ್ದೇನೆ. ನನಗೆ ಹೊಸ ಮತದಾರರ ಗುರುತಿನ ಚೀಟಿ ಸಿಕ್ಕಿದೆ. ನನ್ನ ಕಾರ್ಡ್ ಅನ್ನು ಅದೇ ಮತದಾರರ ಸಂಖ್ಯೆಯಲ್ಲಿ ವರ್ಗಾಯಿಸಲಾಗಿದೆ. ಬೆಂಗಳೂರಿನ ಡೇಟಾ ಮಾತ್ರ ನನ್ನ ವೆಬ್‌ಸೈಟ್‌ನಲ್ಲಿ ಬರುತ್ತದೆ. ನಾನು ನನ್ನ ಮತದಾರರ ಗುರುತಿನ ಚೀಟಿಯನ್ನು ವರ್ಗಾಯಿಸಿದರೆ ಹಳೆಯದು ಡಿಲೀಟ್ ಆಗುತ್ತದೆ ಎಂದುಕೊಂಡಿದ್ದೆ. ಈಗಲೂ ನನ್ನ ಹೆಸರು ವೆಬ್​ಸೈಟಿನಲ್ಲಿ ಬೆಂಗಳೂರಿನಲ್ಲಿ ಮಾತ್ರ ಗೋಚರಿಸುತ್ತಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ