AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ; ‘ಅಟಂ ಬಾಂಬ್’ ಸಿಡಿಸಿದ ರಾಹುಲ್ ಗಾಂಧಿ

ಪ್ರಮುಖ ರಾಜ್ಯಗಳ ಲೋಕಸಭಾ ಚುನಾವಣೆಯಲ್ಲಿ ನಕಲಿ ಮತದಾನ ಅಥವಾ ವೋಟ್ ಚೋರಿ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಅದನ್ನು ಚುನಾವಣಾ ಆಯೋಗ ನಿರಾಕರಿಸಿತ್ತು. ಆದರೆ, ಕಾಂಗ್ರೆಸ್​ನಿಂದ ಈ ಬಗ್ಗೆ ಸಂಪೂರ್ಣವಾಗಿ ಸಂಶೋಧನೆ ಮಾಡಿಸಲಾಗಿದ್ದು, ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 6.5 ಲಕ್ಷ ಒಟ್ಟು ಮತಗಳ ಪೈಕಿ 1,00,250 ನಕಲಿ ಮತ ಚಲಾವಣೆಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾನ; ‘ಅಟಂ ಬಾಂಬ್’ ಸಿಡಿಸಿದ ರಾಹುಲ್ ಗಾಂಧಿ
Rahul Gandhi Press Conference
ಸುಷ್ಮಾ ಚಕ್ರೆ
|

Updated on:Aug 07, 2025 | 3:27 PM

Share

ನವದೆಹಲಿ, ಆಗಸ್ಟ್ 7: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಲೋಕಸಭಾ (Karnataka Lok Sabha Election) ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದರು. ಅದನ್ನು ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ (ECI) ತಳ್ಳಿಹಾಕಿತ್ತು. ಇದೀಗ ಸಾಕ್ಷಿ ಸಮೇತ ತಮ್ಮ ಆರೋಪವನ್ನು ಪುನರುಚ್ಛರಿಸಿರುವ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ರೀತಿಯಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ನಕಲಿ ಮತದಾನ ನಡೆದಿದೆ ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಚುನಾವಣಾ (Mahadevapura Assembly Constituency) ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ‘ಅಟಂ ಬಾಂಬ್’ ಸಿಡಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಅದರಂತೆ ರಾಹುಲ್ ಗಾಂಧಿ ಇಂದು ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ.

ಕರ್ನಾಟಕದ ಮತದಾರರ ಪಟ್ಟಿಗಳಲ್ಲಿ ವಂಚನೆ ನಡೆದಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು, ಕರ್ನಾಟಕದಲ್ಲಿ 40,009 ನಕಲಿ ಮತದಾರರ ವಿಳಾಸಗಳಿವೆ ಎಂದಿದ್ದಾರೆ. ಕಾಂಗ್ರೆಸ್ ನಡೆಸಿದ’ವೋಟ್ ಚೋರಿ’ ತನಿಖೆಯಲ್ಲಿ ‘ಮನೆ ಸಂಖ್ಯೆ 0’ಎಂದು ಉಲ್ಲೇಖಿಸಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗವು ಮತಗಳನ್ನು ಕದಿಯಲು ಬಿಜೆಪಿಯೊಂದಿಗೆ ಕೈಜೋಡಿಸಿದೆ. ಮತದಾರರ ಪಟ್ಟಿಗಳಿಗೆ ನಕಲಿ ಜನರನ್ನು ಸೇರಿಸಲಾಗುತ್ತಿದೆ ಎಂದಿದ್ದಾರೆ. ಕರ್ನಾಟಕ ಮತದಾರರ ಪಟ್ಟಿಯನ್ನು ತೋರಿಸುವ ಮೂಲಕ ಅವರು ತಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ.

ಮಹದೇವಪುರದಲ್ಲಿ ನಕಲಿ ವಿಳಾಸಗಳನ್ನು ಹೊಂದಿರುವ ‘40,009’ ಮತದಾರರಿದ್ದಾರೆ. ‘ಮನೆ ಸಂಖ್ಯೆ 0’ ಎಂಬ ಅಡ್ರೆಸ್ ಇರುವ ಹಲವರು ನೋಂದಾಯಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, 46 ಮತದಾರರು ಒಂದೇ ರೂಮಿನ ವಿಳಾಸದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಆ ಸ್ಥಳಕ್ಕೆ ಭೇಟಿ ನೀಡಿದಾಗ, ಯಾರೂ ಅಲ್ಲಿ ವಾಸಿಸುತ್ತಿಲ್ಲ ಎಂದು ಗೊತ್ತಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಕಲಿ ವಿಳಾಸಗಳೊಂದಿಗೆ 40,000 ನಮೂದುಗಳು ಮತ್ತು ಯಾವುದೇ ಫೋಟೋಗಳಿಲ್ಲದ ಸುಮಾರು 4,000 ನೋಂದಾಯಿತ ಮತದಾರರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್ ಪ್ರಾಚೀನ ಗೋಡೆ ನೆಲಸಮ: ಪೊಲೀಸರಿಗೆ ದೂರು ನೀಡಿದ ಬಿಜೆಪಿ

ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ಮತದಾನ:

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಮತದಾನ ನಡೆದಿದೆ. ಲೋಕಸಭಾ ಚುನಾವಣೆ ವೇಳೆ ಅಕ್ರಮ ನಡೆದಿರುವುದು ಪತ್ತೆಯಾಗಿದೆ. 11 ಸಾವಿರ ಜನರಿಂದ ಅಕ್ರಮ ಮತದಾನ ನಡೆದಿದೆ. ಕೆಲವರು ಹಲವು ಬಾರಿ ಮತದಾನ ಮಾಡಿರುವ ಬಗ್ಗೆ ದಾಖಲೆ ನಮ್ಮ ಬಳಿ ಇದೆ ಎಂದಿರುವ ರಾಹುಲ್ ಗಾಂಧಿ ಬೆಂಗಳೂರಿನ 40,009 ನಕಲಿ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ನಕಲಿ ಮತದಾರರಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ. ನಕಲಿ ಮತದಾರರ ಮನೆ ಸಂಖ್ಯೆ 0 ಎಂದು ನಮೂದಿಸಿದ್ದಾರೆ. ಮತಪಟ್ಟಿಯಲ್ಲಿ ನಕಲಿ ವಿಳಾಸ, ಮತದಾರನ ತಂದೆಯ ಹೆಸರೇ ಇಲ್ಲ. 33 ಸಾವಿರ ಮತದಾರರಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಇಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ ದಾಖಲೆ ಸಮೇತ ಮತಗಳ್ಳತನ ಬಯಲಿಗೆಳೆದಿದ್ದಾರೆ.

ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆಗಿದೆ ಎಂದು ಉಲ್ಲೇಖಿಸಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6.5 ಲಕ್ಷ ಮತಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ‘ಮತ ಚೋರಿ’ ನಡೆದಿದೆ ಎಂದು ಆರೋಪಿಸಿದ್ದಾರೆ. “ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು, ಅಮಾನ್ಯ ವಿಳಾಸಗಳು, ಬೃಹತ್ ಮತದಾರರು ಇದ್ದಾರೆ ಎಂದು ಕಾಂಗ್ರೆಸ್ ಸಂಶೋಧನೆಯಲ್ಲಿ ಕಂಡುಬಂದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ನಾಳೆ ಆಟಂ ಬಾಬ್ ಸಿಡಿಸಲಿದ್ದಾರೆ: ಶಿವರಾಜ್ ತಂಗಡಿಗಿ

ಕಾಂಗ್ರೆಸ್ ಪಕ್ಷದಿಂದಲೇ ಕರ್ನಾಟಕದ ಮಹದೇವಪುರದಲ್ಲಿ ತನಿಖೆ ಮಾಡಲಾಯಿತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆದ್ದಿತು, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿತು. ನಾವು ಅಚ್ಚರಿಯಾಗಿ ಸೋತ 7 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತನಿಖೆ ನಡೆಸಿದೆವು. ಅದರಲ್ಲೂ ಮುಖ್ಯವಾಗಿ ಮಹಾದೇವಪುರ ಕ್ಷೇತ್ರದ ಮೇಲೆ ತನಿಖೆ ಮಾಡಿದೆವು. 2024ರಲ್ಲಿ ಅಲ್ಲಿ 6,26,208 ಲಕ್ಷ ಮತಗಳನ್ನು ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಪಡೆಯಿತು. ಬಿಜೆಪಿ 6,58,915 ಮತಗಳನ್ನು ಬಿಜೆಪಿ ಪಡೆಯಿತು. ಬಿಜೆಪಿ 32,707 ಮತಗಳ ಬಹುಮತ ಪಡೆಯಿತು. 2024ರ ಲೋಕಸಭಾ ಚುನಾವಣೆ ವೇಳೆ 5 ರೀತಿಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಮತದಾರರ ಪಟ್ಟಿಗೆ 1,00,250 ಹೆಸರು ಅಕ್ರಮವಾಗಿ ಸೇರಿಸಲಾಗಿದೆ. ಈ ಪೈಕಿ 11,965 ನಕಲಿ ಮತದಾರರನ್ನು ಸೇರಿಸಲಾಗಿದೆ. ನಕಲಿ ವಿಳಾಸ ಹೊಂದಿರುವ ಮತದಾರರ ಸಂಖ್ಯೆ 40,009. ಅಕ್ರಮವಾಗಿ ಹೆಸರು ಸೇರಿಸಿರುವ ಮತದಾರರ ಸಂಖ್ಯೆ 10,452 ಎನ್ನುವ ಮೂಲಕ ದಾಖಲೆ ಸಮೇತ ರಾಹುಲ್ ಗಾಂಧಿ ಮತಗಳ್ಳತನವನ್ನು ಬಯಲಿಗೆಳೆದಿದ್ದಾರೆ.

ಗುರುಕಿರತ್ ಸಿಂಗ್ ಡ್ಯಾಂಗ್ ಎನ್ನುವ ವ್ಯಕ್ತಿಯ ಹೆಸರು ಮಹದೇವಪುರದ 4 ಬೂತ್​ಗಳಲ್ಲಿ ಪಟ್ಟಿಯಾಗಿದೆ. ಇಂತಹ ಸಾವಿರಾರು ಉದಾಹರಣೆ ಒಂದು ವಿಧಾನಸಭೆ ಕ್ಷೇತ್ರದಲ್ಲಿದೆ. ಆದಿತ್ಯ ಶ್ರೀ ವಾಸ್ತವ್ಯ ಕರ್ನಾಟಕ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಹೊಂದಿದ್ದಾನೆ. ಲಕ್ಷಾಂತರ ಜನರು ಹೀಗೆ ಬೇರೆ ಬೇರೆ ನಕಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಮತದಾನದ ದಾಖಲೆಯನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.

ಮತಗಳ್ಳತನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಹರಿಯಾಣ, ಕರ್ನಾಟಕ ಚುನಾವಣೆ ಸೇರಿ ಹಲವು ವಿಚಾರಗಳ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರ ಐದು ತಿಂಗಳಲ್ಲಿ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ಸಂಜೆ ಐದು ಗಂಟೆಯ ಬಳಿಕ ಅತಿ ಹೆಚ್ಚು ಮತದಾನವಾಗಿದೆ. ನಾವು ಚುನಾವಣಾ ಆಯೋಗ ಸಂಪರ್ಕಿಸಿದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಆಯೋಗ ನಮಗೆ ಮತದಾರರ ಪಟ್ಟಿ ನೀಡಲು ನಿರಾಕರಿಸಿತು. ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ನೀಡಲಿಲ್ಲ. ಸಂಜೆ ಐದೂವರೆ ಬಳಿಕ ಹೆಚ್ಚು ಮತದಾನವಾಗಿದೆ. ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಯಿತು ಎಂದು ರಾಹುಲ್ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Thu, 7 August 25