AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಐವರು ಮಹಿಳೆಯರಿಗೆ ಇಂಗ್ಲೆಂಡ್​​ನಲ್ಲಿ ಓದಲು 40 ಲಕ್ಷ ರೂ. ವಿದ್ಯಾರ್ಥಿವೇತನ

ಕರ್ನಾಟಕದ ಐವರು ವಿದ್ಯಾರ್ಥಿನಿಯರು ಚೆವನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದಿಂದ ಮಹಿಳೆಯರನ್ನು ಈ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಿಂದ ಮಹಿಳಾ ಪದವೀಧರರನ್ನು ಪರಿಗಣಿಸುವ ಈ ವಿದ್ಯಾರ್ಥಿವೇತನವು ಮುಂದಿನ ಮೂರು ವರ್ಷಗಳವರೆಗೆ ಪ್ರತಿ ವರ್ಷ ಮುಂದುವರಿಯಲಿದ್ದು, ಒಟ್ಟು 15 ಮಹಿಳಾ ಪದವೀಧರರಿಗೆ ಪ್ರಯೋಜನವಾಗಲಿದೆ.

ಕರ್ನಾಟಕದ ಐವರು ಮಹಿಳೆಯರಿಗೆ ಇಂಗ್ಲೆಂಡ್​​ನಲ್ಲಿ ಓದಲು 40 ಲಕ್ಷ ರೂ. ವಿದ್ಯಾರ್ಥಿವೇತನ
5 Girls Selected For Chevening Karnataka Scholarships
ಸುಷ್ಮಾ ಚಕ್ರೆ
| Updated By: ಡಾ. ಭಾಸ್ಕರ ಹೆಗಡೆ|

Updated on:Aug 09, 2025 | 10:49 AM

Share

ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಐವರು ಮಹಿಳೆಯರು ಶೆವ್​ನಿಂಗ್​ ವಿದ್ಯಾರ್ಥಿವೇತನದ (Chevening-Karnataka scholarships) ಅಡಿಯಲ್ಲಿ ಇಂಗ್ಲೆಂಡ್​ಗೆ (UK) ಪ್ರಯಾಣಿಸಲಿದ್ದಾರೆ. ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ 5 ಮಹಿಳಾ ವಿದ್ಯಾರ್ಥಿನಿಯರ ಮೊದಲ ಬ್ಯಾಚ್ ಸೆಪ್ಟೆಂಬರ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆಯಲು ಯುಕೆಗೆ ತೆರಳಲಿದ್ದಾರೆ. ಕರ್ನಾಟಕದ ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲು ಜಂಟಿ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರವು 2024ರಲ್ಲಿ ಯುಕೆಯ ಚೆವೆನಿಂಗ್ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಶೆವ್​ನಿಂಗ್​ -ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಐದು ಮಹಿಳಾ ವಿದ್ವಾಂಸರ ಮೊದಲ ಗುಂಪನ್ನು ಕರ್ನಾಟಕದ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಕನ್ನಡಿಗರಾದ ನಿಹಾರಿಕಾ ನರೇಶ್, ಸುಷ್ಮಾ ಶ್ಯಾಮಸುಂದರ್, ಚಂದನಾ ಅಂಜಿನಪ್ಪ, ಅಥೇನಾ ರೋಸ್ ಜೋಸೆಫ್ ಮತ್ತು ಶ್ವೇತಾ ಎನ್. ಹೆಗ್ಡೆ ಈ ಸ್ಕಾಲರ್​​ಶಿಪ್​ಗೆ ಆಯ್ಕೆಯಾಗಿದ್ದು, ಸೆಪ್ಟೆಂಬರ್‌ನಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾರ್ಥಿವೇತನಕ್ಕಾಗಿ ಯುಕೆಗೆ ತೆರಳಲಿದ್ದಾರೆ.

ಕರ್ನಾಟಕ ಸರ್ಕಾರವು 2024ರಲ್ಲಿ ಯುಕೆಯ ಶೆವ್​ನಿಂಗ್​ ವಿದ್ಯಾರ್ಥಿವೇತನ ಕಾರ್ಯಕ್ರಮದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು, ಇದು ಕರ್ನಾಟಕದ ಐದು ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡಲು ಸಂಪೂರ್ಣವಾಗಿ ಹಣಕಾಸು ಒದಗಿಸುತ್ತದೆ. ಕರ್ನಾಟಕ ಸರ್ಕಾರ ಮತ್ತು ಚೆವನಿಂಗ್ ಎರಡೂ ಸಮಾನವಾಗಿ ಈ ವೆಚ್ಚವನ್ನು ಭರಿಸಲಿದೆ. ಒಬ್ಬೊಬ್ಬ ವಿದ್ಯಾರ್ಥಿನಿಗೆ 40 ಲಕ್ಷ ರೂ. ಸ್ಕಾಲರ್​​ಶಿಪ್ ನೀಡಲಾಗುವುದು.

ಇದನ್ನೂ ಓದಿ: ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನ: ರಾಹುಲ್ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ; ಅರವಿಂದ ಲಿಂಬಾವಳಿ

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಚಂದ್ರು ಅಯ್ಯರ್, “ಯುಕೆ ಮತ್ತು ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹುಡುಗಿಯರನ್ನು ಸಬಲೀಕರಣಗೊಳಿಸುವುದು ನಮಗೆ ಆದ್ಯತೆಯಾಗಿದೆ. ಇದು ಭಾರತದೊಂದಿಗಿನ ನಮ್ಮ ಪಾಲುದಾರಿಕೆಯ ಅವಿಭಾಜ್ಯ ಅಂಗವಾಗಿದೆ. ಚೆವೆನಿಂಗ್ ಕೊಡುಗೆಯನ್ನು ಸ್ವೀಕರಿಸಿದ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕ ಎಂಬುದು ಸಂತೋಷದ ಸಂಗತಿ” ಎಂದು ಹೇಳಿದ್ದಾರೆ.

ಸರ್ಕಾರಿ ಕಾಲೇಜುಗಳಿಂದ ಬಂದ ಮಹಿಳಾ ಪದವೀಧರರಿಗೆ ನೀಡುವ ವಿದ್ಯಾರ್ಥಿವೇತನವು ಮುಂದಿನ 3 ವರ್ಷಗಳವರೆಗೆ ಪ್ರತಿ ವರ್ಷ ಮುಂದುವರಿಯುತ್ತದೆ. ಇದು ಒಟ್ಟು 15 ಮಹಿಳಾ ಪದವೀಧರರಿಗೆ ಪ್ರಯೋಜನವನ್ನು ನೀಡುತ್ತದೆ.

ಈ ಬಾರಿಯ ಸ್ಕಾಲರ್​​ಶಿಪ್​ಗೆ ಆಯ್ಕೆಯಾದವರಲ್ಲಿ ಒಬ್ಬರಾದ ಕೊಡಗು ಮೂಲದ ಅಥೇನಾ ರೋಸ್ ಜೋಸೆಫ್, ತಮಿಳುನಾಡಿನಲ್ಲಿ ನೈರ್ಮಲ್ಯ ಕಾರ್ಮಿಕರ ಕಾರ್ಯಕ್ರಮಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಅಭಿವೃದ್ಧಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ನಿಹಾರಿಕಾ ನರೇಶ್ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನ ಶ್ವೇತಾ ಹೆಗ್ಡೆ ಲಂಡನ್‌ನ ಇಂಪೀರಿಯಲ್ ಕಾಲೇಜಿನಿಂದ ವಿಜ್ಞಾನ ಸಂವಹನದಲ್ಲಿ ಎಂಎಸ್ಸಿ ಮಾಡಲು ಯೋಜಿಸುತ್ತಿದ್ದಾರೆ. ಪ್ರಲೇ, ಕ್ಲೈಮೇಟ್ ಗೇಮ್‌ನ ಸಹ-ಸಂಸ್ಥಾಪಕಿ ಮತ್ತು ವಿಜ್ಞಾನ ಗೇಮ್ ಡೆವಲಪರ್ ಕೂಡ ಆಗಿರುವ ಶ್ವೇತಾ ಹೆಗ್ಡೆ ಯುಕೆಗೆ ತೆರಳಲಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ ಗುರುತಿಸಲ್ಪಟ್ಟ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಈಗ ವಿದ್ಯಾರ್ಥಿವೇತನದೊಂದಿಗೆ ಭಾರತದಲ್ಲಿ ಲಭ್ಯ

ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿರುವ ಸುಷ್ಮಾ ಶ್ಯಾಮ್‌ಸುಂದರ್ ಸ್ಕಾಟ್ಲೆಂಡ್‌ನ ಅಬರ್ಡೀನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನವನ್ನು ಮುಂದುವರಿಸಲು ಯೋಜಿಸುತ್ತಿದ್ದಾರೆ. ಮೈಸೂರಿನ ರೈಲು ವ್ಯವಸ್ಥೆಗಳ ಎಂಜಿನಿಯರ್ ಚಂದನಾ ಅಂಜಿನಪ್ಪ ಅವರು ಪುಟ್ಟ ಮಗುವಿನ ತಾಯಿ. ಇವರು ರೈಲ್ವೆ ಸಿಸ್ಟಮ್ಸ್ ಎಂಜಿನಿಯರಿಂಗ್ ಮತ್ತು ಏಕೀಕರಣದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯೋಜಿಸುತ್ತಿದ್ದಾರೆ.

ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನವು ಯುಕೆ ಮತ್ತು ಕರ್ನಾಟಕ ಸರ್ಕಾರಗಳು ನೀಡುವ ಜಂಟಿ ವಿದ್ಯಾರ್ಥಿವೇತನವಾಗಿದ್ದು, ಮುಂದಿನ 3 ವರ್ಷಗಳ ಕಾಲ ಯಾವುದೇ ಯುಕೆ ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ನಾತಕೋತ್ತರ ಕಾರ್ಯಕ್ರಮವನ್ನು ಮುಂದುವರಿಸಲು ಐದು ಮಹಿಳಾ ಪದವೀಧರರಿಗೆ, ಅದರಲ್ಲೂ ಸರ್ಕಾರಿ ಕಾಲೇಜುಗಳಿಂದ ಬಂದವರಿಗೆ ಪ್ರತಿ ವರ್ಷ ಸಂಪೂರ್ಣವಾಗಿ ಹಣಕಾಸು ಒದಗಿಸುತ್ತದೆ. ಕರ್ನಾಟಕದಿಂದ 1,827 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 155 ಅರ್ಜಿಗಳನ್ನು ಅಂತಿಮಗೊಳಿಸಲಾಗಿತ್ತು. ಅದರಲ್ಲಿ 20 ಮಂದಿಯನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Fri, 8 August 25