AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ NEP ಗೆ ತಿಲಾಂಜಲಿ, ಎಸ್ಇಪಿ ಜಾರಿ ಫಿಕ್ಸ್

ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ವರ್ಷ ನಾವು NEP ಓದುತ್ತಿವಾ? SEP ಅಡಿಯಲ್ಲಿ ಶಿಕ್ಷಣ ಇರುತ್ತಾ ಎನ್ನುವುದೇ ದೊಡ್ಡ ತಲೆ ನೋವಾಗಿತ್ತು. ಅದರಲ್ಲಿಯೂ ಡಿಗ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದ ಬಗ್ಗೆ ಸಾವಿರಾರು ಗೊಂದಲ ಸೃಷ್ಟಿಯಾಗಿತ್ತು. ಆ ಬಗ್ಗೆ ಕೊನೆಗೂ ಸರ್ಕಾರ ಇತಿಶ್ರೀ ಹಾಡಲು ಮುಂದಾಗಿದ್ದು, ಈ ವರ್ಷದಿಂದಲೇ ಶಾಲಾ ಶಿಕ್ಷಣ ಇಲಾಖೆಯಲ್ಲಿಯೂ ಎಸ್ಇಪಿ ಜಾರಿಗೆಗೆ ಮುಂದಾಗಿದೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ  NEP ಗೆ ತಿಲಾಂಜಲಿ, ಎಸ್ಇಪಿ ಜಾರಿ ಫಿಕ್ಸ್
Sep And Nep
Vinay Kashappanavar
| Updated By: ರಮೇಶ್ ಬಿ. ಜವಳಗೇರಾ|

Updated on: Aug 09, 2025 | 6:39 PM

Share

ಬೆಂಗಳೂರು, (ಆಗಸ್ಟ್ 09): ಪ್ರೊ. ಸುಖ್‌ದೇವ್‌ ಥೋರಟ್‌ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಎನ್‌ಇಪಿ (Karnataka State Education Policy) ಅಡಿಯಲ್ಲಿನ 4 ವರ್ಷಗಳ ಪದವಿ ಕೋರ್ಸ್‌ ರದ್ದುಪಡಿಸಿ, ಮೊದಲಿನಂತೆ 3 ವರ್ಷಗಳ ಪದವಿ ಶಿಕ್ಷಣ ಮುಂದುವರಿಸಲು ಶಿಫಾರಸು ಮಾಡಿದೆ. ಅಲ್ಲದೆ, ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುವ ಮುನ್ನ ಸಾಧ್ಯತೆಗಳ ಅಧ್ಯಯನ ನಡೆಸಲು ಸೂಚಿಸಿದೆ. ಶಿಕ್ಷಕರಿಗೆ ತರಬೇತಿ ನೀಡಲು ಉನ್ನತ ಶಿಕ್ಷಣ ಶಿಕ್ಷಕರ ಅಕಾಡೆಮಿ ಸ್ಥಾಪನೆ ಮತ್ತು ಭಾಷಾ ಬೋಧನೆಗೆ ಮುಕ್ತ ಕೇಂದ್ರ ತೆರೆಯಲು ಆಯೋಗವು ಶಿಫಾರಸು ಮಾಡಿದೆ. ಬಿಜೆಪಿ ಸರಕಾರದ ಅಧಿವಯಲ್ಲಿ ರಾಜ್ಯದಲ್ಲಿಎನ್‌ಇಪಿ ಶಿಫಾರಸಿನಂತೆ 4 ವರ್ಷಗಳ ಪದವಿ ಕೋರ್ಸ್‌ ಆರಂಭಿಸಲಾಗಿತ್ತು. ಇದೀಗ ಎಸ್‌ಇಪಿ ಮೂರು ವರ್ಷಗಳ ಪದವಿಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲಿನಂತೆ ಪದವಿ ಶಿಕ್ಷಣ ಮುಂದುವರಿಯಲಿದೆ.

ಬಿಜೆಪಿ ಸರ್ಕಾರ 2021ರಲ್ಲಿ ರಾಜ್ಯದಲ್ಲಿ ಜಾರಿ ತಂದ NEP (ನ್ಯಾಷನಲ್ ಎಜುಕೇಶನ್ ಪಾಲಿಸಿ) ತೆಗೆದು ರಾಜ್ಯ ಶೈಕ್ಷಣಿಕ ಕ್ರಮ ಅನುಸರಿಸುವ ಬಗ್ಗೆ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಆಶ್ವಾಸನೆ ಕೊಟ್ಟಿತ್ತು. ಪ್ರಣಾಳಿಕೆಯಲ್ಲಿ ಹೇಳಿದ ಹಾಗೇ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ NEP ಬದಲು SEP ಜಾರಿ ತರಲು ಸಕಲ ತಯಾರಿ ಮಾಡಿ ಕೊಂಡು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗವು ರಚನೆ ಮಾಡಿತ್ತು. ಆದ್ರೆ ಆ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿ ಸೈಲೆಂಟ್ ಆಗಿತ್ತು. ಈಗ ಕೊನೆಗೂ ನಿನ್ನೆ ಸರ್ಕಾರಕ್ಕೆ ಸಿಎಂಗೆ ವರದಿ ಸಲ್ಲಿಕೆ ಮಾಡಿದ್ದು, ಸುದೀರ್ಘ ವರದಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಉನ್ನತ್ತ ಶಿಕ್ಷಣ ಇಲಾಖೆ ಮಹತ್ವದ ಸಲಹೆಗಳನ್ನ ಶಿಫಾರಸು ಮಾಡಿದೆ

ದ್ವಿಭಾಷಾ ನೀತಿಗೆ ಸಲಹೆ

ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಮಾದರಿಯ ಶಾಲೆಗಳು 5ನೆ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ಹೆಚ್ಚು ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೆ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ಹೇಳಿದೆ. ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃಭಾಷೆ ಜತೆಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದ್ದು, ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷ ನೀತಿ ಅವಶ್ಯಕತೆ ಇಲ್ಲವೆಂದು ಹೇಳಿದ್ದು, RTE ವಿಸ್ತರಣೆ ಮಾಡಿರುವುದಕ್ಕೆ ಪೋಷಕರು ಸ್ವಾಗತ ಮಾಡುತ್ತಿದ್ದಾರೆ.

ಹಿಂದಿ ಭಾಷೆ ಕೈಬಿಟ್ಟ ಆಯೋಗ

ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದ್ದು ಪ್ರಥಮ ಭಾಷೆ ಕನ್ನಡ ದ್ವಿತೀಯ ಆಂಗ್ಲ ಭಾಷೆ ಮತ್ತು ತೃತೀಯ ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ. ತೃತೀಯ ಭಾಷೆ ಇರುವುದಿಲ್ಲ. ಇನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಂಗ್ಲಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ ಅಂತಾ ಶಿಫಾರಸು ಮಾಡಿದ್ದು ಹಿಂದಿ ಭಾಷೆಗೆ ಕೊಕ್ ನೀಡಲಾಗಿದೆ… ಅಷ್ಟೇ ಅಲ್ಲದೆ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಶುಲ್ಕ ನಿಯಂತ್ರಣ ಸಂಸ್ಥೆ ರಚಿಸುವಂತೆ ಸಲಹೆ ನೀಡಿದೆ. ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಕೃಪಾ ಸ್ವಾಗತ ಮಾಡಿದೆ

NCERT ಪಠ್ಯ ಅನುಸರಣೆಗೆ ಬ್ರೇಕ್, ಸ್ವದೇಶಿ ಪಠ್ಯಕ್ಕೆ ಪ್ರಾಮುಖ್ಯತೆ

ರಾಜ್ಯ ಪ್ರಠ್ಯಕ್ರಮ ನೀತಿಯಲ್ಲಿ ರಾಷ್ಟ್ರೀಯ ಪಠ್ಯಕ್ರಮ ಮೇಲಿನ ಅವಲಂಭನೆ ಕಡಿಮೆ ಮಾಡುವಂತೆ ಸ್ಥಳೀಯ ಪಠ್ಯಕ್ಕೆ ಹೆಚ್ಚು ಒತ್ತುನೀಡುವಂತೆ ತಿಳಸಿದೆ.. ಅಲ್ಲದೆ ಶಾಲಾ ಹಂತದಲ್ಲಿ 2+8+4 ರಚನೆಯನ್ನು ಅಳವಡಿಸಿಕೊಳ್ಳಲು ಆಯೋಗ ಶಿಫಾರಸು ಮಾಡಿದೆ. ಆದ್ರೆ ಆಯೋಗದ ವರದಿಗೆ ಕೆಲವು ಖಾಸಗಿ ಶಾಲಾ ಸಂಘಟನೆಗಳಿಂದ ವಿರೋಧವು ಕೇಳಿ ಬಂದಿದೆ

ಎಸ್‌ಇಪಿ ಪ್ರಮುಖ ಶಿಫಾರಸುಗಳು

  1. 2+8+4 ರಚನೆಯನ್ನು ಅಳವಡಿಸಿಕೊಳ್ಳಿ.
  2.  2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ, ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣ.
  3. ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಸ್ಥಾಪಿಸಿ
  4. ರಾಜ್ಯದಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿ
  5. ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಿ.
  6. ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಿ: ಕನ್ನಡ/ಮಾತೃಭಾಷೆ ಇಂಗ್ಲಿಷ್.
  7. 2 ವರ್ಷಗಳ ಪೂರ್ವ-ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಿಗೆ ಲಗತ್ತಿಸಿ
  8. ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ-ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಿ
  9. ಹಂತ ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸಿ
  10. ಸರ್ಕಾರಿ ಶಾಲಾ ಗುಣಮಟ್ಟವನ್ನು ಕೇಂದ್ರೀಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸಿ
  11. ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು (CCSE) ಅಭಿವೃದ್ಧಿಪಡಿಸಿ
  12. NCERT ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ ವಿಷಯಗಳನ್ನು ಸ್ಥಳೀಯಗೊಳಿಸಿ.
  13. ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿಗಳನ್ನು ನಿಲ್ಲಿಸಿ
  14. ಹೆಚ್ಚಿನ ಖಾಸಗೀಕರಣವನ್ನು ತಡೆಗಟ್ಟಿ
  15. ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆಯನ್ನು ರಚಿಸಿ
  16. ಶೈಕ್ಷಣಿಕ ಪರಿಣಾಮಕ್ಕಾಗಿ ಬ್ಲಾಕ್ ಶಿಕ್ಷಣ ಕಚೇರಿಗಳಿಗೆ ಅಧಿಕಾರ ನೀಡಿ
  17. DSERT ಅನ್ನು R&D ಗಾಗಿ ಸ್ವಾಯತ್ತ SCERT ಆಗಿ ಪರಿವರ್ತಿಸಿ.
  18. ಜೀವಮಾನ ಕಲಿಕೆ ನಿರ್ದೇಶನಾಲಯವನ್ನು ಪುನರುಜ್ಜಿವನಗೊಳಿಸಿ
  19. ಸಂವಿಧಾನ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಿಕೊಳ್ಳುವ ಕುರಿತು ಪರಿಶೀಲಿಸಿ.
  20. ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಪಾಲನ್ನು 30% ಕ್ಕೆ ಹೆಚ್ಚಿಸಿ
  21. ಪ್ರತಿ ವಿದ್ಯಾರ್ಥಿಗೆ ವಾರ್ಷಿಕವಾಗಿ 5-10% ರಷ್ಟು ವೆಚ್ಚ ಹೆಚ್ಚಳವನ್ನು ಖಚಿತಪಡಿಸಿ
  22. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಮೀಸಲು ಬಜೆಟ್ ಹಂಚಿಕೆ ಮಾಡಿ
  23. ಕರ್ನಾಟಕ ರಾಜ್ಯ ಮುಕ್ತ ಶಾಲಾ ವ್ಯವಸ್ಥೆಯನ್ನು ಸ್ಥಾಪಿಸಿ

ಉನ್ನತ್ತ ಶಿಕ್ಷಣ ಇಲಾಖೆ

  • ಸಮಯೋಚಿತ ಮತ್ತು ಸಮರ್ಪಕ ನಿಧಿಗಾಗಿ ಸಮಗ್ರ ಹಣಕಾಸು ಚೌಕಟ್ಟನ್ನು ರಚಿಸಿ
  • ಶಿಕ್ಷಣಕ್ಕಾಗಿ GSDP ಯ 4% ಮತ್ತು 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕಾಗಿ 1% ರಷ್ಟು ವೆಚ್ಚವನ್ನು ಹಂತ ಹಂತವಾಗಿ ಹೆಚ್ಚಿಸಿ
  • ಶಿಕ್ಷಣ ಬಜೆಟ್‌ನ 14% ರಿಂದ 25-30% ಕ್ಕೆ ಉನ್ನತ ಶಿಕ್ಷಣಕ್ಕಾಗಿ ಬಜೆಟ್ ಪಾಲನ್ನು ಮರುಹಂಚಿಕೆ ಮಾಡಿ
  • ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಅನ್ನು ಪರಿಗಣಿಸಿ
  • ಹೆಚ್ಚಿದ ನಿಧಿಯ ಕನಿಷ್ಠ 25% ರಷ್ಟು ಮೂಲಸೌಕರ್ಯಕ್ಕಾಗಿ ಮೀಸಲಿಡಿ
  • ಸಾಮಾನ್ಯ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರಕ್ಕಾಗಿ 3+2 ಮಾದರಿ ಮತ್ತು ವೃತ್ತಿಪರ ಕಾರ್ಯಕ್ರಮಗಳಿಗೆ 4+2 ಮಾದರಿ
  • NEP 2020 ಪೂರ್ವದ ಪುನಃ-ಪ್ರವೇಶ ನೀತಿಯನ್ನು ಮುಂದುವರಿಸಿ.
  • ಯಾವುದೇ ರಾಜ್ಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪ್ರವೇಶಕ್ಕೆ ಅವಕಾಶ ನೀಡಿ (50% ಸೀಟುಗಳು ರೋಸ್ಟರ್ ನಿಯಮಗಳ ಪ್ರಕಾರ).
  • BoS ಬೇಡಿಕೆಯಿದ್ದಲ್ಲಿ ಪದವಿ ಕ್ರೆಡಿಟ್ ಮಿತಿಯನ್ನು 160ಕ್ಕೆ ವಿಸ್ತರಿಸಿ ಮತ್ತು ಅಂತರ್-ಶಿಸ್ತಿನ ಮತ್ತು ಬಹು-ಶಿಸ್ತಿನ ಕೋರ್ಸ್‌ಗಳನ್ನು ಸೇರಿಸಿ
  • ಕನ್ನಡ/ಮಾತೃಭಾಷೆ/ಭಾರತೀಯ/ವಿದೇಶಿ ಭಾಷೆ ಸೇರಿದಂತೆ ಎರಡನೇ ಭಾಷಾ ಕೋರ್ಸ್ ಅನ್ನು ಕಡ್ಡಾಯಗೊಳಿಸಿ
  • ಸಾಂವಿಧಾನಿಕ ಮೌಲ್ಯ ಶಿಕ್ಷಣ ಮತ್ತು ಪರಿಸರ ಅಧ್ಯಯನಗಳ ಕುರಿತು ಕಡ್ಡಾಯ ಕೋರ್ಸ್‌ಗಳನ್ನು ಸೇರಿಸಿ
  • 3 ವರ್ಷದ ಪದವಿ ರಾಜ್ಯಗಳಲ್ಲಿ: 2ನೇ ವರ್ಷದಲ್ಲಿ ಸಂಶೋಧನೆಗೆ ಒತ್ತು ನೀಡುವ 2 ವರ್ಷದ ಸ್ನಾತಕೋತ್ತರ ಪದವಿಯನ್ನು ನೀಡಿ
  • 5 ವರ್ಷಗಳ ಸಮಗ್ರ ಪದವಿ-ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡಿ
  • ಆರೋಗ್ಯ, ಕೃಷಿ, ಕಾನೂನಿನಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪರಿಚಯಿಸಿ
  • ರಾಜ್ಯ ಪ್ರವೇಶ ಪರೀಕ್ಷೆಗಳ ಮೂಲಕ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಸೀಟುಗಳನ್ನು ಭರ್ತಿ ಮಾಡಿ
  • ಪಿಎಚ್‌ಡಿ ಕೋರ್ಸ್‌ವರ್ಕ್: 1 ವರ್ಷ; ಕನಿಷ್ಠ ಅವಧಿ: 4 ವರ್ಷಗಳು (ಪೂರ್ಣ ಅವಧಿ)
  • ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ SC/ST/OBC ಮೀಸಲಾತಿ ನಿಯಮಗಳನ್ನು ಅನ್ವಯಿಸಿ
  • ಉನ್ನತ ವಿಶ್ವವಿದ್ಯಾಲಯಗಳು/ಕಾಲೇಜುಗಳನ್ನು “ರಾಜ್ಯ ಉತ್ಕೃಷ್ಟತಾ ಸಂಸ್ಥೆಗಳು” ಎಂದು ಗುರುತಿಸಿ
  • ಸಾಧ್ಯತೆಗಳ ಅಧ್ಯಯನದ ನಂತರವೇ ಹೊಸ ವಿಶ್ವವಿದ್ಯಾಲಯ/ಕಾಲೇಜುಗಳನ್ನು ತೆರೆಯಿರಿ
  • ಹೊಸ ಶಿಕ್ಷಕರು ಬೋಧನೆ ಮಾಡುವ ಮೊದಲು 1-3 ತಿಂಗಳ ತರಬೇತಿಯನ್ನು ಪೂರ್ಣಗೊಳಿಸಬೇಕು
  • ಎಲ್ಲಾ ವಿಭಾಗಗಳಲ್ಲಿ “ಉನ್ನತ ಶಿಕ್ಷಣ ಶಿಕ್ಷಕರ ಅಕಾಡೆಮಿ ಕೇಂದ್ರ” ವನ್ನು ಸ್ಥಾಪಿಸಿ
  • ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ನೀಡುವುದು ಅತ್ಯಗತ್ಯ ಮತ್ತು ಉನ್ನತ ಶಿಕ್ಷಣ ಅಕಾಡೆಮಿ ಅಡಿಯಲ್ಲಿ ಭಾಷಾ ಬೋಧನೆ ಮತ್ತು ತರಬೇತಿಗಾಗಿ ಮುಕ್ತ ಕೇಂದ್ರವನ್ನು ತೆರೆಯಿರಿ
  • ದ್ವಿಭಾಷಾ ಬೋಧನೆಯನ್ನು ಉತ್ತೇಜಿಸಿ ಮತ್ತು ಪ್ರಮುಖ ಪಠ್ಯಪುಸ್ತಕಗಳ ದ್ವಿಭಾಷಾ ಆವೃತ್ತಿಗಳನ್ನು ಒದಗಿಸಿ
  • ಕನ್ನಡ ಹಾಗು ಜಾಗತಿಕ ಭಾಷೆಗಳ ನಡುವಿನ ಜ್ಞಾನ ಅನುವಾದಕ್ಕಾಗಿ ಪ್ರತ್ಯೇಕ ಕೇಂದ್ರವನ್ನು ರಚಿಸಿ
  • ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಿ.

.ಇಷ್ಟೂ ದಿನ ನಾವು ಯಾವ ಪಠ್ಯಕ್ರಮ ಓದುತ್ತೇವೆ? ನಮ್ಮ ಪದವಿ ಶೈಕ್ಷಣಿಕ ಅವಧಿ ಎಷ್ಟಿರುತ್ತೆ ? ಅಂತೆಲ್ಲಾ ಗೊಂದಲದ ಗೂಡಾಗಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಉತ್ತರ ಸಿಕ್ಕಿದ್ದು ಸರ್ಕಾರಕ್ಕೆ ಎಸ್ಇಪಿ ವರದಿ ಸಲ್ಲಿಕೆಯಾಗಿದೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೆ ಮುಂದಿನ ವರ್ಷದಿಂದಲೇ ಎಸ್ಇಪಿ ಎಲ್ಲಡೆ ಜಾರಿಯಾಗಲಿದೆ