ಮತಗಟ್ಟೆಗಳ ದೃಶ್ಯಾವಳಿ ನೀಡಿದ್ರೆ ಮತಗಳ್ಳತನ ಸಾಬೀತು ಮಾಡುವೆ: ಚುನಾವಣೆ ಆಯೋಗಕ್ಕೆ ರಾಹುಲ್ ಸವಾಲ್
ದೊಡ್ಡ ಮಟ್ಟದಲ್ಲಿ ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ ಅಂತಾ ಚುನಾವಣಾ ಅಧಿಕಾರಿ ವಿರುದ್ಧ ಸಮರ ಸಾರಿರುವ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಎಂಟ್ರಿ ಕೊಟ್ಟು ಮತ್ತೆ ಗುಡುಗಿದ್ದಾರೆ. ಮತಗಟ್ಟೆಗಳ ದೃಶ್ಯಾವಳಿ ನೀಡಿದರೆ ಮತಗಳ್ಳತನ ಸಾಬೀತು ಮಾಡುವೆ ಎಂದು ಚುನಾವಣೆ ಆಯೋಗಕ್ಕೆ ಸವಾಲ್ ಹಾಕಿದ್ದಾರೆ.

ಬೆಂಗಳೂರು, ಆಗಸ್ಟ್ 08: ಮತಗಳ್ಳತನದ ಬಗ್ಗೆ ಬಾಂಬ್ ಸಿಡಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಬೆಂಗಳೂರನಲ್ಲಿ (bangaluru) ಅಬ್ಬರಿಸಿದರು. ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ದ ವೇದಿಕೆಗೆ ಬಂದ ರಾಹುಲ್ ಗಾಂಧಿ, ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ. ಮತಗಟ್ಟೆಗಳ ದೃಶ್ಯಾವಳಿ ನೀಡಿದರೆ ಮತಗಳ್ಳತನ ಸಾಬೀತು ಮಾಡುವೆ ಎಂದು ಚುನಾವಣೆ ಆಯೋಗಕ್ಕೆ ಸವಾಲ್ ಹಾಕಿದ್ದಾರೆ.
ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ: ರಾಹುಲ್
ಫ್ರೀಡಂ ಪಾರ್ಕ್ನಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿ, ವಿಳಾಸವಿಲ್ಲದ 40,000ಕ್ಕೂ ಹೆಚ್ಚು ಮತದಾರರನ್ನು ಪತ್ತೆಹಚ್ಚಿದ್ದೇವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ನನಗೆ ಪ್ರಮಾಣಪತ್ರ ನೀಡಲು ಹೇಳುತ್ತಿದೆ. ಸಂವಿಧಾನದ ಮೇಲೆ ಲೋಕಸಭೆಯೊಳಗೆ ಪ್ರಮಾಣ ಮಾಡಿದ್ದೇನೆ. ಈ ಡೇಟಾ ಇಟ್ಕೊಂಡು ದೇಶದ ಪ್ರಜೆಗಳು ಪ್ರಶ್ನಿಸುತ್ತಾರೆಂದು ಆಯೋಗದ ವೆಬ್ಸೈಟ್ ಬಂದ್ ಮಾಡಿದೆ. ದೇಶದ ಚುನಾವಣಾ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಬೇಕು. ಮತಗಟ್ಟೆಗಳ ದೃಶ್ಯಾವಳಿ ನೀಡಿದರೆ ಮತಗಳ್ಳತನ ಸಾಬೀತು ಮಾಡುವೆ ಎಂದು ಅವರು ಹೇಳಿದ್ದಾರೆ.
ಸಂವಿಧಾನದಲ್ಲಿ ಭಾರತದ ನೂರಾರು ವರ್ಷಗಳ ಇತಿಹಾಸ ಇದೆ. ಕಳೆದ ಚುನಾವಣೆಯಲ್ಲಿ ಸಂವಿಧಾನವನ್ನು ನಾವು ರಕ್ಷಣೆ ಮಾಡಿದ್ದೇವೆ. ಅಂಬೇಡ್ಕರ್, ನೆಹರು, ಗಾಂಧೀಜಿ, ಪಟೇಲ್ ಅವರ ಧ್ವನಿ ಮೊಳಗುತ್ತೆ. ಒನ್ ಮ್ಯಾನ್ ಒನ್ ವೋಟ್ ಎಂಬುದೇ ಸಂವಿಧಾನದ ಅಡಿಪಾಯ. ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕು ನೀಡಲಾಗಿದೆ ಎಂದರು.
ಹಿಂದಿನ ಚುನಾವಣೆಯಲ್ಲಿ ನಮ್ಮ ಮುಂದೆ ದೊಡ್ಡ ಪ್ರಶ್ನೆ ಎದುರಾಯಿತು. ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆ ಚುನಾವಣೆಯಲ್ಲಿ INDIA ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ ಪಡೆಯಿತು. ಅದಾದ 4 ತಿಂಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಇದರ ಹಿಂದಿನ ವಿಷಯವನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ವಾಗ್ದಾಳಿ ಮಾಡಿದರು.
ಲೋಕಸಭೆಯಲ್ಲಿ ಸಿಕ್ಕಷ್ಟೇ ಮತ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕಿತ್ತು. ಎಂಪಿ ಚುನಾವಣೆಯಲ್ಲಿ ಹೊಸದಾಗಿ 1 ಕೋಟಿ ಜನ ಮತ ಹಾಕಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ 1 ಕೋಟಿ ಜನರಿಂದ ಮತದಾನ ಮಾಡಲಾಗಿದೆ. ಹೊಸದಾಗಿ ಸೇರ್ಪಡೆಯಾದ ಎಲ್ಲಾ ಮತಗಳು ಬಿಜೆಪಿಗೆ ಹೋಗಿದ್ದವು. ಇದರಿಂದ ನಮಗೆ ಮೋಸವಾಗಿದೆ ಎಂಬ ಅನುಮಾನ ಶುರುವಾಯಿತು ಎಂದಿದ್ದಾರೆ.
5 ವಿಧಗಳಲ್ಲಿ ಮತಗಳ್ಳತನವಾಗಿದೆ
ಕರ್ನಾಟಕದಲ್ಲಿ ಆಂತರಿಕ ಸಮೀಕ್ಷೆ ಪ್ರಕಾರ ನಮಗೆ 15 ರಿಂದ 16 ಸ್ಥಾನ ಬರುವ ವಿಶ್ವಾಸ ಇತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಕೇವಲ 9 ಸ್ಥಾನ ಬಂದಿದೆ. ಹೀಗಾಗಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಾಹಿತಿ ಕಲೆಹಾಕಿದ್ದೆವು. 5 ವಿಧಗಳಲ್ಲಿ ಮತಗಳ್ಳತನವಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಪರಿಶೀಲಿಸಿದ್ದು, ಆ ಕ್ಷೇತ್ರ ಒಂದರಲ್ಲೇ 6.5 ಲಕ್ಷ ಮತಗಳಿತ್ತು ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮತಕಳ್ಳತನ ಆರೋಪ ಮಾಡಿದ ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನ ಕೇಳಿದ ಬಿಜೆಪಿ
ಒನ್ ಮ್ಯಾನ್, ಒನ್ ವೋಟ್ ಎಂಬುದರ ಮೇಲೆ ಆಯೋಗ ದಾಳಿ ಮಾಡುತ್ತಿದೆ. ಸಂವಿಧಾನದ ಮೇಲೆ ದಾಳಿ ಮಾಡಿ ನೀವು ಬಚಾವ್ ಆಗುತ್ತೀರಾ ಅಂತ ಮತ್ತೊಮ್ಮೆ ಯೋಚನೆ ಮಾಡಿ. ಸಮಯ ಬಂದೇ ಬರುತ್ತದೆ ನಿಮ್ಮನ್ನು ಹಿಡಿದು ಹಾಕುತ್ತೇವೆ. ಒಬ್ಬೊಬ್ಬರನ್ನಾಗಿ ಹಿಡಿದು ಹಾಕುವುದು ನಿಶ್ಚಿತ. ನೀವು ಸಂವಿಧಾನದ ಮೇಲೆ ದಾಳಿ ಮಾಡಿದರೆ ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿಯಿಂದ ಐದು ಪ್ರಶ್ನೆ
- ಯಾಕೆ ಡಿಜಿಟಲ್ ದಾಖಲೆ ನೀಡುತ್ತಿಲ್ಲ.
- ಬಹುದೊಡ್ಡ ವಂಚನೆಯನ್ನು ಏಕೆ ಮಾಡಲಾಗುತ್ತಿದೆ.
- ಬಿಜೆಪಿ ಏಜೆಂಟ್ ರೀತಿ ಏಕೆ ಆಯೋಗ ನಡೆದುಕೊಳ್ಳುತ್ತಿದೆ.
- ವಿರೋಧ ಪಕ್ಷಗಳನ್ನು ಏಕೆ ಬೆದರಿಸಲಾಗುತ್ತಿದೆ?
- ಏಕೆ ವಿಡಿಯೋ ಫೂಟೇಜ್ ಡಿಲೀಟ್ ಮಾಡಲಾಗುತ್ತಿದೆ?
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Fri, 8 August 25




