SC ಒಳ ಮೀಸಲಾತಿಗೆ ಸುಪ್ರೀಂ ಅಸ್ತು; ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯ ಎಂದ ಬೊಮ್ಮಾಯಿ

|

Updated on: Aug 01, 2024 | 7:55 PM

ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಈ ಕುರಿತು ಟ್ವೀಟ್​ ಮಾಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು, ‘ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಾಮಾಜಿಕ ನ್ಯಾಯ ಅತ್ಯಂತ ತಳ ಸಮುದಾಯಕ್ಕೆ ಸಿಗಬೇಕೆನ್ನುವ ನೀತಿಗೆ ಮತ್ತು ನಿರ್ಣಯಕ್ಕೆ ಜಯ ಸಿಕ್ಕಿರುವಂಥದ್ದು ನನಗೆ ಸಮಾಧಾನ ತಂದಿದೆ ಎಂದಿದ್ದಾರೆ.

SC ಒಳ ಮೀಸಲಾತಿಗೆ ಸುಪ್ರೀಂ ಅಸ್ತು; ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯ ಎಂದ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ನವದೆಹಲಿ, ಆ.01: ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿರುವುದು ನಮ್ಮ ಸರ್ಕಾರದ ನಿರ್ಣಯಕ್ಕೆ ಸಿಕ್ಕ ಜಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅತ್ಯಂತ ಹಿಂದುಳಿದ ಎಸ್ಸಿ ಸಮುದಾಯಗಳಿಗೆ ಶತಮಾನಗಳಿಂದಲೂ ಅನ್ಯಾಯ ಆಗಿರುವುದನ್ನು ಮನಗಂಡು, ಎಸ್ಸಿ ಸಮುದಾಯ ಸುಮಾರು ಮೂರು ನಾಲ್ಕು ದಶಕಗಳಿಂದ ಆಂತರಿಕ ಮೀಸಲಾತಿಯನ್ನು ಬೇಡಿಕೆ ಇಟ್ಟು ಹೋರಾಟ ಮಾಡುತ್ತಿದ್ದರು.

ನಮ್ಮ ಸರ್ಕಾರ ಆಂತರಿಕ ಮೀಸಲಾತಿಯನ್ನು ಸಂಪುಟದಲ್ಲಿ ಒಪ್ಪಿ, ಸರ್ಕಾರಿ ಆದೇಶವನ್ನು ಮಾಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ನಿಲುವನ್ನು ಇಂದು(ಗುರುವಾರ) ಏಳು ನ್ಯಾಯಾಧೀಶರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಸಂವಿಧಾನಿಕ ಪೀಠ ಎತ್ತಿ ಹಿಡಿದಿರುವುದು ಐತಿಹಾಸಿಕ ತೀರ್ಪು ಮತ್ತು ಎಸ್ಸಿ ಜನಾಂಗದ ಒಳ ಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಉದ್ಯೋಗದಲ್ಲಿ ಎಸ್​ಸಿ ಎಸ್​ಟಿ ಒಳಮೀಸಲಾತಿಗೆ ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂ ಕೋರ್ಟ್

ಸಂಸದ ಬಸವರಾಜ ಬೊಮ್ಮಾಯಿ ಟ್ವಿಟ್​

ಇದಕ್ಕೆ ಸಹಕಾರ ನೀಡಿದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ಅಂದು ಎಸ್ಸಿ ಸಮುದಾಯದ ಸಚಿವರಾದಂತಹ ಗೋವಿಂದ ಕಾರಜೋಳ ಮತ್ತು ನನ್ನ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಮತ್ತು ರಾಜ್ಯ ಬಿಜೆಪಿಯ ಎಲ್ಲ ನಾಯಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಜೊತೆಗೆ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತದ್ವಿರುದ್ದವಾಗಿ ಸಂವಿಧಾನದ ಆರ್ಟಿಕಲ್ 341 ಕ್ಕೆ ತಿದ್ದುಪಡಿ ಮಾಡುವುದು ಅತ್ಯಂತ ಅಗತ್ಯತೆಯೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಅದನ್ನು ಇಂದು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿ ರಾಜ್ಯ ಸರ್ಕಾರ ಎಸ್ಸಿ ಜನಾಂಗಕ್ಕೆ ವಂಚನೆ ಮಾಡುವ ನಿರ್ಣಯವನ್ನು ತಳ್ಳಿ ಹಾಕಿದೆ. ಈಗ ತಮ್ಮ ಸರ್ಕಾರ ಮಾಡಿರುವ ಶಿಫಾರಸ್ಸಿಗೆ ಜಯ ಸಿಕ್ಕಿದೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

‘ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಾಮಾಜಿಕ ನ್ಯಾಯ ಅತ್ಯಂತ ತಳ ಸಮುದಾಯಕ್ಕೆ ಸಿಗಬೇಕೆನ್ನುವ ನೀತಿಗೆ ಮತ್ತು ನಿರ್ಣಯಕ್ಕೆ ಜಯ ಸಿಕ್ಕಿರುವಂಥದ್ದು ನನಗೆ ಸಮಾಧಾನ ತಂದಿದೆ. ಎಲ್ಲ ಎಸ್ಸಿ ತಳ ಸಮುದಾಯಗಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಅಭಿನಂದನೀಯ ಪೂರ್ವಕವಾಗಿ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ