
ಬೆಂಗಳೂರು, ಸೆಪ್ಟೆಂಬರ್ 01: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಕಾಣಿಯೂರು ಉಪ ವಲಯ ಅರಣ್ಯ ಅಧಿಕಾರಿ ಎಂದು ಹೇಳಿಕೊಂಡಿರುವ ಸಂಜೀವ್ ಪೂಜಾರಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ಸಂಸ್ಕೃತ ಭಾಷೆ, ಹಿಂದುತ್ವ ಹಾಗೂ ಸಂಘ ಪರಿವಾರವನ್ನು ಗುರಿಯಾಗಿಸಿಕೊಂಡು ಸಂಜೀವ್ ಪೂಜಾರಿ ಬರೆದಿರುವ ಬರಹಗಳು ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದು, ಸರ್ಕಾರಿ ಅಧಿಕಾರಿಯೊಬ್ಬರ ಈ ನಡವಳಿಕೆಯನ್ನು ಬಿಜೆಪಿ ನಾಯಕರು ಕಟುವಾಗಿ ವಿರೋಧಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಸಂಜೀವ್ ಪೂಜಾರಿ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಬರಹಗಳನ್ನು ಪೋಸ್ಟ್ ಮಾಡಲಾಗಿದೆ. ಆಗಸ್ಟ್ 30ನೇ ತಾರೀಕಿನಂದು “ಸುಳ್ಳನ್ನು ಯಾರಿಗೂ ಅರ್ಥವಾಗದಂತೆ ಕಿವಿಗೆ ಇಂಪಾಗಿ ಕೇಳಿಸುವ ಶ್ಲೋಕ ಮತ್ತು ಮಂತ್ರದ ಭಾಷೆಯೇ ಸಂಸ್ಕೃತ” ಎಂದು ಬರೆದು ಈ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅದಲ್ಲದೆ “ಹಿಂದುತ್ವ ಅನ್ನುವುದು ಮನೆಯಲ್ಲಿ ವಿಷವಿದ್ದಂತೆ” ಹಾಗೂ “ಸಂಘ ಪರಿವಾರಕ್ಕೆ ಸೇರಿದರೆ ಸಂಸಾರ ಹಾಳಾಗುತ್ತದೆ” ಎಂದು ಆಕ್ಷೇಪಾರ್ಹವಾಗಿ ನಿರಂತರವಾಗಿ ಪೋಸ್ಟ್ ಮಾಡಲಾಗುತ್ತಿದೆ. ಇದರ ಜೊತೆಗೆ ಸನಾತನ ಧರ್ಮ, ಮೂರ್ತಿ ಪೂಜೆ, ಜಾತಿ ಪದ್ಧತಿ ಹಾಗೂ ಕರ್ಮ ಸಿದ್ಧಾಂತಗಳ ಕುರಿತು ಪ್ರಚೋದನಾತ್ಮಕ ವಿಚಾರಗಳನ್ನೂ ಈ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ.
ಈ ಸಂಬಂಧ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್, ಸರ್ಕಾರಿ ಅಧಿಕಾರಿಯ ಈ ರೀತಿಯ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರಿ ಸೇವೆಯಲ್ಲಿದ್ದುಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಒಂದು ನಿರ್ದಿಷ್ಟ ಸಿದ್ಧಾಂತ ಹಾಗೂ ಭಾಷೆಯನ್ನು ನಿಂದಿಸುವ ಅಧಿಕಾರ ಯಾರಿಗೂ ಇಲ್ಲ. ಸಂಜೀವ್ ಪೂಜಾರಿ ಎಂಬ ಈ ವ್ಯಕ್ತಿ ನಿಜವಾಗಿಯೂ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದರೆ, ಸರ್ಕಾರಿ ನೌಕರರ ಸೇವಾ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಇವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Tue, 1 September 26