ಬೆಂಗಳೂರಿನ ಈ ರಸ್ತೆಗಳಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್ಗಳು! ನಾನ್ ಪೀಕ್ ಅವರ್ಸ್ ಸಂಚಾರ ಇನ್ನು ಸುಗಮ
ಬೆಂಗಳೂರು ಟ್ರಾಫಿಕ್ ಪೊಲೀಸರು ಜೆಸಿ ರಸ್ತೆಯಲ್ಲಿ ಸಿಂಕ್ರೊನೈಸ್ಡ್ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದು ಪೀಕ್ ಅವರ್-ಅಲ್ಲದ ವೇಳೆಯಲ್ಲಿ ಅನಗತ್ಯ ನಿಲುಗಡೆಗಳನ್ನು ತಪ್ಪಿಸಿ, ಟೌನ್‌ಹಾಲ್‌ನಿಂದ ಪೊಲೀಸ್ ಕಾರ್ನರ್ ಜಂಕ್ಷನ್‌ವರೆಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ಹೊಸ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರು, ಅಕ್ಟೋಬರ್ 7: ಸಾಮಾನ್ಯವಾಗಿ ಬೆಂಗಳೂರಿನ ಟ್ರಾಫಿಕ್ (Bengaluru Traffic) ಸಿಗ್ನಲ್ಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಚಾಲೂ ಮಾಡಿರುತ್ತಾರೆ. ಇನ್ನು ಕೆಲವೆಡೆ ಪೊಲೀಸರೇ ಮ್ಯಾನುವಲ್ ಆಗಿ ಸಿಗ್ನಲ್ ನಿರ್ವಹಿಸುತ್ತಾರೆ. ಆದರೆ, ಈ ಸ್ವಯಂಚಾಲಿತ ವ್ಯವಸ್ಥೆ ವೇಳೆ ಪೀಕ್ ಅವರ್ ಅಲ್ಲದಿದ್ದಾಗಲೂ, ಇನ್ನೊಂದು ಬದಿಯಿಂದ ಸಂಚಾರ ದಟ್ಟಣೆ ಇಲ್ಲದಿರುವಾಗಲೂ ಸಿಗ್ನಲ್ನಲ್ಲಿ ವಿನಾ ಕಾರಣ ಕಾಯುತ್ತಲೇ ಇರಬೇಕಾಗುತ್ತದೆ. ಒಂದು ಸಿಗ್ನಲ್ ಗ್ರೀನ್ ಬಂತೆಂದು ಮುಂದೆ ಹೋಗುತ್ತಿದ್ದಂತೆಯೇ ಅಲ್ಲಿ ರೆಡ್ ಸಿಗ್ನಲ್ ಕಾಣಿಸುತ್ತಿರುತ್ತದೆ. ಹೀಗೆ ವಿನಾ ಕಾರಣ ಸಿಗ್ನಲ್ನಲ್ಲಿ ಕಾಯಬೇಕಾಗುತ್ತದೆ. ಆದರೆ, ಈ ಪರಿಸ್ಥಿತಿ ಇನ್ನು ಇಲ್ಲವಾಗಲಿದೆ. ಬೆಂಗಳೂರಿನ (Bengaluru) ಟೌನ್‌ಹಾಲ್ ಜಂಕ್ಷನ್ನಿಂದ ಎನ್ಆರ್ ಜಂಕ್ಷನ್, ಪಿಎಸ್ ಜಂಕ್ಷನ್, ಪೊಲೀಸ್ ಕಾರ್ನರ್ ವರೆಗೆ ಜೆಸಿ ರಸ್ತೆಯಲ್ಲಿ ಸಿಂಕ್ರೋನೈಸ್ಡ್ ಸಿಗ್ನಲ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಪಶ್ಚಿಮ ವಲಯ ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ನಾವು ಟೌನ್‌ಹಾಲ್ ಜಂಕ್ಷನ್‌ನ ಜೆಸಿ ರಸ್ತೆ ಬದಿಯಿಂದ ಎನ್ಆರ್ ಜಂಕ್ಷನ್ – ಪಿಎಸ್ ಜಂಕ್ಷನ್ – ಪೊಲೀಸ್ ಕಾರ್ನರ್ ಜಂಕ್ಷನ್ ವರೆಗೆ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡಿದ್ದೇವೆ. ಸುಗಮ ಪ್ರಯಾಣವನ್ನು ಆನಂದಿಸಿ ಮತ್ತು ಜನದಟ್ಟಣೆ ಇಲ್ಲದ ಸಮಯದಲ್ಲಿ ಎಲ್ಲಾ ಸಂದರ್ಭಗಳಲ್ಲಿ ಗ್ರೀನ್ ಸಿಗ್ನಲ್ ಇರಲಿದೆ ಎಂದು ಡಿಸಿಪಿ ಅನೂಪ್ ಎ ಶೆಟ್ಟಿ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಅನೂಪ್ ಎ ಶೆಟ್ಟಿ ಎಕ್ಸ್ ಸಂದೇಶ
GREEN WAVE AHEAD 🚦 We’ve synchronized signals from JC Road side of Townhall Jn to NR Jn – PS Jn – Police Corner Jn. Enjoy seamless travel & get all green signals during non-peak hours! #Bengaluru #SignalSync #SmoothRide #Traffic pic.twitter.com/xbStV95WGr
— DCP TRAFFIC WEST (@DCPTrWestBCP) October 6, 2025
ಟ್ರಾಫಿಕ್ ಸಿಗ್ನಲ್ ಸಿಂಕ್ರೊನೈಸೇಷನ್ ಎಂದರೇನು?
ಟ್ರಾಫಿಕ್ ಸಿಗ್ನಲ್ ಸಿಂಕ್ರೊನೈಸೇಷನ್ ಎಂದರೆ ಸುಧಾರಿತ ಸಂಚಾರ ನಿರ್ವಹಣೆ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ. ಈ ವ್ಯವಸ್ಥೆಯಲ್ಲಿ ವಾಹನಗಳ ಸಂಚಾರದ ಟಟ್ಟಣೆಗೆ ಅನುಗುಣವಾಗಿ ಗ್ರೀನ್ ಸಿಗ್ನಲ್ಗಳು ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಒಂದು ಕಡೆ ಗ್ರೀನ್ ಸಿಗ್ನಲ್ ಬಂದರೆ ಅಲ್ಲಿಂದ ವಾಹನಗಳು ಮುಂದೆ ಚಲಿಸಿದಂತೆ ಮುಂದಿನ ಸಿಗ್ನಲ್ನಲ್ಲಿಯೂ ಗ್ರೀನ್ ಸಿಗ್ನಲ್ ಕಾಣಿಸಿಕೊಳ್ಳಲಿದೆ. ಇದರೊಂದಿಗೆ, ನಾನ್ ಪೀಕ್ ಅವರ್ನಲ್ಲಿ ಸಿಗಮ ಸಂಚಾರ ಸಾಧ್ಯವಾಗಲಿದೆ. ಅದೇ ರೀತಿ, ವಾಹ ಸಂಚಾರ ವಿರಳವಾಗಿದ್ದರೂ ನಿರ್ದಿಷ್ಟ ಸಮಯ ಸಿಗ್ನಲ್ನಲ್ಲಿ ಕಾಯುವುದು ತಪ್ಪಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಬಿಎಂಟಿಸಿ ಬಸ್ಗಾಗಿ ಪ್ರತ್ಯೇಕ ಲೇನ್: ಹೊರ ವರ್ತುಲ ರೆಸ್ತೆಯಲ್ಲಿ ಹಳೇ ನಿಯಮ ಜಾರಿಗೆ ಚಿಂತನೆ
ಬೆಂಗಳೂರು ಸಂಚಾರ ಪೊಲೀಸ್ ಪಶ್ಚಿಮ ವಲಯದ ಈ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿ, ವಾಹನಗಳು ಲೇನ್ ಮೇಂಟೇನ್ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.




