ಬೆಂಗಳೂರಿನಲ್ಲಿ ಮತ್ತೆ ಬಿಎಂಟಿಸಿ ಬಸ್ಗಾಗಿ ಪ್ರತ್ಯೇಕ ಲೇನ್: ಹೊರ ವರ್ತುಲ ರೆಸ್ತೆಯಲ್ಲಿ ಹಳೇ ನಿಯಮ ಜಾರಿಗೆ ಚಿಂತನೆ
Bengaluru Traffic: ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರಿಗರು ಸದಾ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದಕ್ಕೆ ಮುಕ್ತಿ ನೀಡುವುದಕ್ಕೆಂದು ಬೆಂಗಳೂರು ಟ್ರಾಫಿಕ್ ಪೊಲೀಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹರಸಾಹಸ ಪಡುತ್ತಿವೆ. ಏನೇ ಕ್ರಮ ಕೈಗೊಂಡರೂ ಸಮಸ್ಯೆ ಮಾತ್ರ ಪರಿಹಾರವಾಗುವುದಿಲ್ಲ. ಅದಕ್ಕಾಗಿಯೇ ಈಗ ಹಳೇ ನಿಯಮವೊಂದನ್ನು ಮತ್ತೆ ಜಾರಿ ಮಾಡುವ ತಯಾರಿ ನಡೆಯುತ್ತಿದೆ.

ಬೆಂಗಳೂರು, ಅಕ್ಟೋಬರ್ 7: ಒಂದುಕಡೆ ಟ್ರಾಫಿಕ್, ಇನ್ನೊಂದು ಕಡೆ ರಸ್ತೆ ಗುಂಡಿಗಳು. ಇದೆರೆಡರಿಂದ ಬೆಂಗಳೂರು (Bengaluru) ಮಂದಿ ಬೆಂದೋಗಿದ್ದಾರೆ. ಕೆಲವು ಖಾಸಗಿ ಕಂಪನಿಗಳು ಬೆಂಗಳೂರು ಸಹವಾಸವೇ ಬೇಡ ಎಂಬಮಟ್ಟಿಗೆ ರೋಸಿಹೋಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಏನು ಎಂದು ಯೋಚಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಳೇ ಫಾರ್ಮೂಲಾವೊಂದು ಉತ್ತರವಾಗಿ ಸಿಕ್ಕಿದೆ. ಔಟರ್ ರಿಂಗ್ ರೋಡ್ನಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಬೇಕು ಎಂದರೆ ಪ್ರತ್ಯೇಕ ಬಸ್ ಲೇನ್ ಮಾಡಿದರೆ ಒಳ್ಳೆಯದು ಎಂದು 2019ರಲ್ಲಿ ಪ್ರಯೋಗ ಮಾಡಲಾಗಿತ್ತು. ಅದರ ಫಲಿತಾಂಶ ಕೂಡ ಸಕಾರಾತ್ಮಕವಾಗಿತ್ತು. ಅಷ್ಟರಲ್ಲಿ ಬಿಎಂಆರ್ಸಿಎಲ್ ಕಾಮಗಾರಿ ಆರಂಭವಾಗಿ ಬಸ್ ಲೇನ್ ರದ್ದು ಮಾಡಬೇಕಾಯಿತು.
ಈಗ ಮತ್ತೆ ಔಟರ್ ರಿಂಗ್ ರೋಡ್ನಲ್ಲಿ ಬಸ್ ಲೇನ್ ಮಾಡುವ ಕುರಿತು ಚರ್ಚೆ ನಡೆದಿದ್ದು, ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರದವರೆಗೆ ಬಸ್ ಲೇನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಬಿಎಂಟಿಸಿ ನಿಗಮವೂ ಆಸಕ್ತಿ ತೋರಿಸಿದೆ.
ಬಸ್ ಲೇನ್ ಆರಂಭವಾದರೆ, ಔಟರ್ ರಿಂಗ್ ರೋಡ್ನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದು ಎಂಬ ಅಂದಾಜಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಇದ್ದಾರೆ.
ಇದನ್ನೂ ಓದಿ: ಕೋಟಿಗಟ್ಟಲೇ ಬೆಲೆಬಾಳುವ ಮನೆ, ತಿಂಗಳಿಗೆ 3 ಲಕ್ಷ ರೂ ಆದಾಯ, ಆದ್ರೂ ಬೆಂಗಳೂರಿನಲ್ಲಿ ಆಟೋ ಓಡಿಸುವ ವ್ಯಕ್ತಿ
ಒಟ್ಟಿನಲ್ಲಿ ಔಟರ್ ರಿಂಗ್ ರೋಡ್ನಲ್ಲಿ ಬಸ್ ಲೇನ್ ಅಗತ್ಯ ಇದೆ. ಆದರೆ, ಸದ್ಯ ಈ ರಸ್ತೆಯಲ್ಲಿ ನೀಲಿ ಮಾರ್ಗದ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದು ಮುಗಿದ ಮೇಲಷ್ಟೇ ಬಸ್ ಪ್ರತ್ಯೇಕ ಮಾರ್ಗ ಆರಂಭಿಸುವ ಸಾಧ್ಯತೆಯಿದೆ. ಹಾಗಾಗಿ, ಒಂದುಕಡೆ ಮೆಟ್ರೋ ಶುರುವಾಗಲಿದೆ. ಅದರ ಜೊತೆ ಜೊತೆಗೆ ಬಸ್ ಲೇನ್ ಶುರುವಾದರೆ ಔಟರ್ ರಿಂಗ್ ರೋಡ್ ಟ್ರಾಫಿಕ್ಗೆ ಕಡಿವಾಣ ಹಾಕಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Tue, 7 October 25



