ಬೆಂಗಳೂರಿನ ಹಲವೆಡೆ ‘ಪೇ ಸಿಎಂ’ ಪೋಸ್ಟರ್ ಪ್ರಕರಣ; ಬಿಬಿಎಂಪಿ ಅಧಿಕಾರಿಗಳು ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲು
ಆಧಾರ ರಹಿತವಾಗಿ ಇಂತಹ ಅಭಿಯಾನ ಮಾಡುವುದು ಸರಿಯಲ್ಲ. ‘ಪೇಸಿಎಂ’ ಪೋಸ್ಟರ್ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ನಗರದಲ್ಲಿ ಹಲವೆಡೆ ‘ಪೇ ಸಿಎಂ’ ಪೋಸ್ಟರ್ ಹಾಕಿದ್ದ ಪ್ರಕರಣ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ ಪಬ್ಲಿಕ್ ಪೋಸ್ಟ್ ಡಿಸ್ಫಿಗರ್ಮೆಂಟ್ ಆ್ಯಕ್ಟ್ ಅಡಿ ಕೇಂದ್ರ ವಿಭಾಗದ ಮೂರು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಆರ್.ಟಿ.ನಗರ, ಸದಾಶಿವನಗರ, ಶೇಷಾದ್ರಿಪುರಂ, ಭಾರತಿನಗರ, ಹೈಗ್ರೌಂಡ್ಸ್, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಬೆಂಗಳೂರು ಉತ್ತರ ವಿಭಾಗ ಜೆ.ಸಿ.ನಗರ, ಸಂಜಯನಗರ ಠಾಣೆಗೂ ಬಿಬಿಎಂಪಿ ದೂರು ನೀಡಲಿದೆ. ಸಾರ್ವಜನಿಕ ಸ್ಥಳದಲ್ಲಿ ಸ್ಲೋಗನ್, ಪೋಸ್ಟರ್ ಹಾಕುವುದು ಬಾಹಿರ. ಕೇಸ್ ದಾಖಲಿಸಿಕೊಂಡ ಪೊಲೀಸರು ಪೋಸ್ಟರ್ ಅಂಟಿಸಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
‘ಪೇಸಿಎಂ’ ವಿರುದ್ಧ ಸಿಎಂ ಕಿಡಿ: ಕ್ರಮಕ್ಕೆ ಆಗ್ರಹ: ಸಿಎಂ ಬೊಮ್ಮಾಯಿ
ಪ್ರಕರಣದ ಕುರಿತಾಗಿ ಹೆಚ್.ಡಿ.ದೇವೇಗೌಡರ ನಿವಾಸದ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು, ಆಧಾರ ರಹಿತವಾಗಿ ಇಂತಹ ಅಭಿಯಾನ ಮಾಡುವುದು ಸರಿಯಲ್ಲ. ‘ಪೇಸಿಎಂ’ ಪೋಸ್ಟರ್ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಇಂತಹ ಪೋಸ್ಟರ್ ಹಾಕುವುದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತೆ. ಕಿಡಿಗೇಡಿಗಳು ಯಾರೇ ಇದ್ದರೂ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
‘ಪೇ ಸಿಎಂ’ ಪೋಸ್ಟರ್ ಪ್ರಕರಣ: ಸಿಸಿಬಿಗೆ ವರ್ಗಾವಣೆ
ಇನ್ನೂ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದು, ವರ್ಗಾವಣೆ ಆಗ್ತಿದ್ದಂತೆ ಸಿಸಿಬಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸಿಸಿಬಿ ಸ್ಪೆಷಲ್ ಎನ್ಕ್ವೈರಿ ವಿಂಗ್ನಿಂದ ಎಸಿಪಿ ಸುರೇಶ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ.ಪೋಸ್ಟರ್ ಅಂಟಿಸಿರೋ ಜಾಗಗಳಿಗೆ ಸಿಸಿಬಿ ಪೊಲೀಸರು ವಿಸಿಟ್ ಮಾಡಿದ್ದು, ಯಾವ್ಯಾವ ಠಾಣಾ ವ್ಯಾಪ್ತಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ ಎಲ್ಲಾ ಜಾಗಗಳಿಗೂ ಭೇಟಿ ಪರಿಶೀಲನೆ ಮಾಡಿದರು. ಪೋಸ್ಟರ್ ಅಂಟಿಸಿರೋ ಜಾಗದ ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಪಡೆದಿದ್ದು, ಸಿಸಿಬಿ ಟೀಂ ಪರಿಶೀಲನೆ ನಡೆಸಿದೆ. ಸಿಸಿಬಿ ಸ್ಪೆಷಲ್ ಎನ್ಕ್ವೈರಿ ಟೀಂನಿಂದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನಕ್ಕೆ ಸಿ.ಟಿ.ರವಿ ಆಕ್ರೋಶ
ಕಾಂಗ್ರೆಸ್ನ ‘ಪೇಸಿಎಂ’ ಅಭಿಯಾನಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸಿ.ಟಿ ರವಿ ದೆಹಲಿಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಟೂಲ್ ಕಿಟ್ ತಯಾರು ಮಾಡಿದೆ. ಇದು ಟೂಲ್ ಕಿಟ್ ಒಂದು ಭಾಗ. 40% ಸರ್ಕಾರ ಎಂದು ಮೂರ್ನಾಲ್ಕು ತಿಂಗಳಿನಿಂದ ಪ್ರಯತ್ನ ಮಾಡುತ್ತಿದೆ. ಈವರೆಗೂ ಸಾಕ್ಷಿ ಸಮೇತ ದೂರು ಕೊಡುವ ಪ್ರಯತ್ನ ಮಾಡಿಲ್ಲ. ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡುತ್ತಿದ್ದಾರೆ. ಲೋಕಾಯುಕ್ತ ಈಗ ಓಪನ್ ಇದೆ ಹೋಗಿ ದೂರ ಕೊಡಲಿ. ಕಾಂಗ್ರೆಸ್ ಸಾಕಷ್ಟು ಹಗರಣ ಮುಚ್ಚಿ ಹಾಕಿದೆ. ನಾವು ಪಿಎಸ್‌ಐ ಹಗರಣ ಮುಚ್ಚಿ ಹಾಕಬಹುದಿತ್ತು. ಆದರೆ ನಾವು ಐಜಿಪಿಯಂತಹ ಹಿರಿಯ ಅಧಿಕಾರಯನ್ನು ಬಂಧಿಸಿದ್ದೇವೆ.
ಹಗರಣ ಮುಚ್ಚಿದ ಕಾಂಗ್ರೆಸ್ ಬೇಕಾ, ಅಧಿಕಾರಿಯನ್ನೇ ಬಂಧಿಸಿದ ಬಿಜೆಪಿ ಬೇಕಾ ಜನರು ನಿರ್ಧರಿಸಲಿ. ಜನರು ಬಿಜೆಪಿ ಮೇಲೆ ವಿಶ್ವಾಸ ಇಡ್ತಾರೆ ಎನ್ನುವ ನಂಬಿಕೆ ಇದೆ. ದೇಶದ 73% ಜನರಿಗೆ ನಾವು ಬೇರೆ ಬೇರೆ ಯೋಜನೆಗಳ ಮೂಲಕ ಸಹಾಯ ಮಾಡಿದ್ದೇವೆ. ನಮ್ಮ ಯೋಜನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗ್ತಿವಿ. ನಾವು ವಿರೋಧ ಪಕ್ಷವಾಗಿ ಫೇಲ್ ಆಗಿಲ್ಲ. ಹಗರಣ ನಡೆದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ನಾವು ವಿಪಕ್ಷ ದಲ್ಲಿದ್ದ ಅವಧಿಯಲ್ಲೂ ವಕ್ಫ್ ಬೋರ್ಡ್ ಸೇರಿ ಹಲವು ತನಿಖೆಗಳು ನಡೆದಿವೆ. ಭ್ರಷ್ಟಾಚಾರರನ್ನು ಕಾಂಗ್ರೆಸ್ ರಕ್ಷಣೆ ಮಾಡಿತ್ತು.ವಾಚ್, ಹಾಸಿಗೆ ದಿಂಬು, ಶಿಕ್ಷಕರ ನೇಮಕ ಸೇರಿ ಹಲವು ಹಗರಣ ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ: ಪ್ರಿಯಾಂಕ್ ಖರ್ಗೆ
ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಸಾರ್ವಜನಿಕವಾಗಿ ಚರ್ಚೆ ಆಗಿರುವುದನ್ನ ಅಭಿಯಾನ ಮಾಡ್ತಿದ್ದೇವೆ. ಇದಕ್ಕೆ ಉತ್ತರ ಕೊಡಬೇಕಾದವರು ಬಿಜೆಪಿಯವರು. ಪೋಸ್ಟರ್ ಹರಿದು ಟ್ವಿಟ್ಟರ್, ವೆಬ್‌ಸೈಟ್ ಹ್ಯಾಕ್ ಮಾಡಬಹುದು. ಆದರೆ ಚರ್ಚೆ ಮಾಡಲು ಬಿಜೆಪಿಯವರು ಹೆದರುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷದ ಪೇ ಸಿಎಂ ಅಭಿಯಾನ ಬಗ್ಗೆ ಕಮಿಷನರ್ ಪ್ರತಿಕ್ರಿಯೆ
ಪೋಸ್ಟರ್ಗಳ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಕಮಿಷನರ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Wed, 21 September 22