Bengaluru Rain: ಮನೆಗೆ ನುಗ್ಗಿದ ಮಳೆ ನೀರು: ಪರೀಕ್ಷೆಯಲ್ಲಿ ಶೇ.96 ಅಂಕ ಗಳಿಸಿದ ವಿದ್ಯಾರ್ಥಿಗಿಲ್ಲ ಸಂಭ್ರಮ
ಬೆಂಗಳೂರಿನ ವೈಟ್ಫೀಲ್ಡ್ನ ಸಾಯಿ ಲೇಔಟ್ನಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ನೀರು. ಇದರಿಂದಾಗಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಯ ಸಂಭ್ರಮಕ್ಕೆ ಬ್ರೇಕ್ ಹಾಕಿದಂತಾಗಿದೆ.
ಬೆಂಗಳೂರು: ನಗರದಾದ್ಯಂತ ಧಾರಾಕಾರ ಮಳೆ(Rain)ಯಾಗುತ್ತಿದೆ. ಈ ನಡುವೆ ನಿನ್ನೆ ಎಸ್ಎಸ್ಎಲ್ಸಿ(SSLC) ಪರೀಕ್ಷೆಯ ಫಲಿತಾಂಶ(Result) ಹೊರಬಿದ್ದಿದ್ದು, ವಿದ್ಯಾರ್ಥಿಗಳು ಸಂಭ್ರಮದಲ್ಲಿದ್ದಾರೆ. ಆದರೆ, ಒಂದಷ್ಟು ವಿದ್ಯಾರ್ಥಿಗಳ ಸಂಭ್ರಮಕ್ಕೆ ಬೆಂಕಿಬಿದ್ದಂತಾಗಿದೆ. ಇದಕ್ಕೆ ಕಾರಣ ಮಳೆಯ ನೀರು. ಹೌದು, ವಿದ್ಯಾರ್ಥಿಯೊಬ್ಬನ ಮನೆಯೊಳಗೆ ನೀರು ನುಗ್ಗಿ ಪುಸ್ತಕಗಳು ಹಾಳಾಗಿವೆ. ಇದು ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಯ ಸಂಭ್ರಮಕ್ಕೆ ಬ್ರೇಕ್ ಹಾಕಿದಂತಾಗಿದೆ.
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ರಸ್ತೆಯುದ್ದಕ್ಕೂ ನೀರು ತುಂಬಿದೆ. ಅಲ್ಲದೆ, ಈ ನೀರು ಮನೆಗಳಿಗೂ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಮನೆಯೊಳಗೆ ನೀರು ನುಗ್ಗಿ ಸಮಸ್ಯೆ ಅನುಭವಿಸಿದ ವೈಟ್ಫೀಲ್ಡ್ನ ಸಾಯಿ ಲೇಔಟ್ ವಿದ್ಯಾರ್ಥಿಯೊಬ್ಬ, ”ನಿನ್ನೆ ಬಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.96.48 ಅಂಕ ಬಂದಿದೆ. ಆದರೆ, ನನ್ನ ಮನೆಯೊಳಗೆ ನೀರು ನುಗ್ಗಿ ಸಂಭ್ರಮಿಸಲೂ ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿ: KSEEB Result 2022: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ಸಂಪೂರ್ಣ ವಿವರ
”ಮನೆಯೊಳಗೆ ನೀರು ನುಗ್ಗಿದ ಹಿನ್ನೆಲೆ ನನ್ನ ಮತ್ತು ನನ್ನ ತಮ್ಮನ ಎಲ್ಲಾ ನೋಟ್ಸ್, ಬುಕ್ಸ್ ನೀರಿನಿಂದ ಹಾಳಾಗಿದೆ. ನನ್ನ ನೋಟ್ಸ್ ಮತ್ತು ಬುಕ್ಸ್ ಅನ್ನು ಜೂನಿಯರ್ಗಳಿಗೆ ಕೊಡಬೇಕು ಅಂತ ಅಂದುಕೊಂಡಿದ್ದೆ. ಆದರೆ, ನನ್ನೆಲ್ಲಾ ಪುಸ್ತಕಗಳು ಹಾಳಾಗಿ ಹೋಯ್ತು. ಮನೆಯಲ್ಲಿದ್ದ ಟಿವಿ, ವಾಷಿಂಗ್ ಮೆಷಿನ್, ಅಕ್ಕಿಯಲ್ಲಿ ನೀರು ತುಂಬಿಕೊಂಡಿದೆ. ಇಂಥ ಸಮಸ್ಯೆ ಯಾವಾಗಲೂ ಇರುತ್ತದೆ” ಎಂದು ಅಳಲು ತೋಡಿಕೊಂಡಿದ್ದಾನೆ.
ಬೆಂಗಳೂರು ನಗರದಾದ್ಯಂತ ಮಳೆಯಾಗುತ್ತಿದ್ದು, ನಿನ್ನೆ ಮೋಡ ಕವಿದ ವಾತಾವರಣವೂ ಇತ್ತು. ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಮನೆಯೊಳಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಕಳೆದ ಎರಡು ದಿನಗಳ ಹಿಂದೆಯೂ ಭಾರಿ ಮಳೆಯಾಗಿ ಪ್ರವಾಹ ತಲೆದೋರಿದಂತೆ ಆಗಿತ್ತು. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ತುಂಬಿತ್ತು. ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿತ್ತು. ಈ ನಡುವೆ ನಿನ್ನೆ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳು ಸಂಭ್ರಮ ಪಟ್ಟಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 12:26 pm, Fri, 20 May 22