2 ಡೋಸ್ ಲಸಿಕೆ ಪಡೆದವರಿಗೂ ಕೊರೊನಾ ದೃಢ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
2 ಡೋಸ್ ಲಸಿಕೆ ಪಡೆದವರಿಗೂ ಕೊರೊನಾ ದೃಢಪಟ್ಟಿದೆ. ಆದರೆ ಅವರಲ್ಲಿ ಲಕ್ಷಣಗಳು ಮತ್ತು ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸದ್ಯ ಕೊವಿಡ್ ಪ್ರಕರಣಗಳು ಸ್ವಲ್ಪ ಕಡಿಮೆಯಾಗಿದೆ. ಆದರೂ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಬೇಕು. ಹೀಗಾಗಿ ಸರ್ಕಾರ ಕಠಿಣ ನಿರ್ದೇಶನಗಳನ್ನು ನೀಡಿದೆ. ಕೊವಿಡ್ (Covid 19) ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯವಿದೆ. ಏಕೆಂದರೆ 2 ಡೋಸ್ ಲಸಿಕೆ ಪಡೆದವರಿಗೂ ಕೊರೊನಾ ದೃಢಪಟ್ಟಿದೆ. ಆದರೆ ಅವರಲ್ಲಿ ಲಕ್ಷಣಗಳು ಮತ್ತು ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಶಾಲೆ ಆರಂಭದ ಬಗ್ಗೆ ತಜ್ಞರ ಜತೆ ಚರ್ಚಿಸಿ ಸಿಎಂ ತೀರ್ಮಾನ ಶಾಲೆ ಆರಂಭದ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಗಸ್ಟ್ 23ರಿಂದ ಹಂತ ಹಂತವಾಗಿ ಶಾಲೆ ಆರಂಭಕ್ಕೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಸಂಬಂಧ ತಜ್ಞರ ಜತೆ ಚರ್ಚಿಸಿ ಸಿಎಂ ತೀರ್ಮಾನ ಮಾಡಲಾಗುತ್ತದೆ. ಶಿಕ್ಷಕರಿಗೆ ವ್ಯಾಕ್ಸಿನ್ ಪಡೆದಿರಬೇಕೆಂದು ಷರತ್ತು ಹಾಕಲಾಗಿದೆ. ಮಕ್ಕಳಿಗೆ ಇನ್ನೂ ವ್ಯಾಕ್ಸಿನ್ ನೀಡುವ ನಿಯಮ ಬಂದಿಲ್ಲ. ಮುಂದೆ ಮಕ್ಕಳಿಗೆ ವ್ಯಾಕ್ಸಿನ್ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 400ಕ್ಕಿಂತ ಕಡಿಮೆ ಪ್ರಕರಣಗಳಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಬೆಂಗಳೂರಿನಲ್ಲಿ ನಿರ್ಬಂಧಗಳು ಮುಂದುವರಿಯಬೇಕು. ನೈಟ್ ಕರ್ಫ್ಯೂ ಜಾರಿಯಲ್ಲಿದೆ, ಅದು ಮುಂದುವರಿಯುತ್ತಿದೆ. ಸಭೆ, ಸಮಾರಂಭಗಳಿಗೆ ಇರುವ ನಿರ್ಬಂಧ ಮುಂದುವರಿಕೆಯಾಗಲಿದೆ. ದೇವಸ್ಥಾನಗಳ ಭೇಟಿಗೆ ಈಗಾಗಲೇ ನಿರ್ಬಂಧ ಜಾರಿ ಇದೆ. ಜನರು ಇದನ್ನು ಪಾಲಿಸಿದರೆ ಮತ್ತಷ್ಟು ನಿರ್ಬಂಧ ಅಗತ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸದ್ಯಕ್ಕೆ ವಿಕೇಂಡ್ ಕರ್ಫ್ಯೂ ಜಾರಿ ಅನುಮಾನ ಬೆಂಗಳೂರಿನಲ್ಲಿ ವಿಕೇಂಡ್ ಕರ್ಫ್ಯೂ ಜಾರಿ ಅಷ್ಟು ಸುಲಭವಲ್ಲ. ವಿಕೇಂಡ್ ಕರ್ಫ್ಯೂ ಜಾರಿ ಮಾಡಿದರೆ, ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳುವ ಆತಂಕ ಶುರುವಾಗಿದೆ. ಹೀಗಾಗಿ ಸದ್ಯಕ್ಕೆ ವಿಕೇಂಡ್ ಕರ್ಫ್ಯೂ ಜಾರಿ ಅನುಮಾನವಾಗಿದೆ. ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆ ಆದರೆ, ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆ ಇದೆ.
ಪಾಸಿಟಿವಿಟಿ ರೇಟ್ ಶೇ. 2 ರಷ್ಟು ಬಂದಲ್ಲಿ ಮಾತ್ರ ವಿಕೇಂಡ್ ಕರ್ಫ್ಯೂ ಜಾರಿ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕೆಲ ವಾಣಿಜ್ಯ ಚಟುವಟಿಕೆಗಳು, ವ್ಯಾಪಾರ ವಹಿವಾಟು ವಿಕೇಂಡ್ ನಂಬಿಕೊಂಡಿದ್ದು, ಸದ್ಯಕ್ಕೆ ವಿಕೇಂಡ್ ಕರ್ಫ್ಯೂ ಜಾರಿ ಅಸಾಧ್ಯ. ಅಲ್ಲದೆ ಕೆಲ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದ್ದು, ಹಬ್ಬ ಹರಿದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಸಾಕು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಮೂರನೇ ಅಲೆಯ ಆತಂಕದ ನಡುವೆಯೂ ಶಾಲೆ ಓಪನ್; ಇಂದೇ ನಿರ್ಧಾರವಾಗುತ್ತೆ ಶಾಲೆಗಳ ಭವಿಷ್ಯ
Lockdown: ನಿಯಂತ್ರಣಕ್ಕೆ ಬಾರದ ಕೊರೊನಾ; ಬೆಂಗಳೂರಿಗೆ ಭಾಗಶಃ ಬೀಗ ಹಾಕಲು ಬಹುತೇಕ ತಯಾರಿ – ಇಂದು ಸಿಎಂ ಸಭೆ
Published On - 10:45 am, Sat, 14 August 21