ಬೆಂಗಳೂರು: ಟೊಮೆಟೊ ದರದಲ್ಲಿ ಗಣನೀಯ ಏರಿಕೆಯಾದ (Tomato Price Hike) ಹಿನ್ನೆಲೆಯಲ್ಲಿ ನಗರದ ಹೋಟೆಲ್‌ಗಳು ಮತ್ತು ಚಾಟ್ ಮಾರಾಟಗಾರರು ಅಡುಗೆಯಲ್ಲಿ ಟೊಮೆಟೊ ಬಳಕೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದಾರೆ ಅಥವಾ ಕಡಿಮೆ ಮಾಡಿದ್ದಾರೆ. ಬೆಲೆ ಏರಿಕೆಯ ಬೆನ್ನಲ್ಲೇ ಈ ಹಿಂದೆ, ಮೆಕ್‌ಡೊನಾಲ್ಡ್ ಕೂಡ ನಂತರ ಟೊಮೆಟೊವನ್ನು ಮೆನುವಿನಿಂದ ಕೈಬಿಡುವುದಾಗಿ ಘೋಷಿಸಿತ್ತು. ಬೆಂಗಳೂರಿನ ಚಾಟ್ ಮಾರಾಟಗಾರರು ಟೊಮೆಟೊಗಳಿಗೆ ಪರ್ಯಾಯವಾಗಿ ಟೊಮೆಟೊ ಕೆಚಪ್ ಅನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ಮಾರಾಟಗಾರರು ಚಾಟ್‌ಗಳನ್ನು ತಯಾರಿಸಲು ಕಡಿಮೆ ಟೊಮೆಟೊಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ರೆಸಿಡೆನ್ಸಿ ರಸ್ತೆಯ ಚಾಟ್ ಸೆಂಟರ್ ಮಾಲೀಕರೊಬ್ಬರು, ದಿನಕ್ಕೆ 2 ಕೆಜಿಯಷ್ಟು ಟೊಮೆಟೊ ಈ ಹಿಂದೆ ಬಳಸುತ್ತಿದ್ದೆ. ಇದೀಗ 750 ಗ್ರಾಂ ಮಾತ್ರ ಬಳಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ‘ನ್ಯೂಸ್ 9’ ವರದಿ ಮಾಡಿದೆ.
ಟೊಮೆಟೊ ಬೆಲೆ ಏರಿಕೆಯಾಗಿರುವುದರಿಂದ ಚಾಟ್‌ಗಳ ಬೆಲೆ ಏರಿಕೆ ಮಾಡಲು ಬಯಸುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಟೊಮೆಟೊ ಬಳಸುವುದನ್ನು ನಿಲ್ಲಿಸಿದರೆ ಚಾಟ್‌ಗಳು ತಮ್ಮ ಮೂಲ ರುಚಿಯನ್ನು ಕಳೆದುಕೊಳ್ಳುತ್ತವೆ ಎಂದೂ ಅವರು ಹೇಳಿದ್ದಾರೆ.
ಜಯನಗರದ ಮತ್ತೊಬ್ಬ ಚಾಟ್ ಮಾರಾಟಗಾರ ಮಾತನಾಡಿ, ಟೊಮೆಟೊ ಬದಲು ಅದರ ಕೆಚಪ್ ಬಳಕೆಗೆ ಮುಂದಾಗಿದ್ದು, ಗ್ರಾಹಕರು ಅದರ ರುಚಿಯನ್ನು ಇಷ್ಟಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆಗೆ ಪೊಲೀಸ್ ಭದ್ರತೆ
ಹಾವೇರಿ ಜಿಲ್ಲೆಯಲ್ಲಿ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಟೊಮೆಟೊ ಬೆಲೆ ಏರಿಕೆಯಿಂದಾಗಿ ದೇವಸ್ಥಾನಗಳಲ್ಲಿ ಅನ್ನ ಮತ್ತು ಸಾಂಬಾರ್ ಬದಲಿಗೆ ಪಲಾವ್ ನೀಡಲಾಯಿತು ಎಂದೂ ವರದಿ ತಿಳಿಸಿದೆ. ಹಾವೇರಿ ಜಿಲ್ಲೆಯ ಕುಂಚೂರು ಗ್ರಾಮದಲ್ಲಿ ಜಾತ್ರೆಗೆ ಬರುವ ಜನರಿಗೆ ಅನ್ನ, ಸಾಂಬಾರು ಬಡಿಸುವುದು ವಾಡಿಕೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಕರಿಯಮ್ಮ ಮತ್ತು ಚೌಡಮ್ಮನ ಹಳ್ಳಿಗಳ ಜಾತ್ರೆಗೆ ಕನಿಷ್ಠ 5,000 ಜನರು ಸೇರುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ