
ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯದಲ್ಲಿ ಸಂಬಂಧಿಗಳ ನಡುವಿನ ಗಲಾಟೆ ಹಾಗೂ ದಂಪತಿ ನಡುವಿನ ವೈವಾಹಿಕ ಕಲಹವು ಎರಡು ಪ್ರತ್ಯೇಕ ಕ್ರೂರ ದುರಂತಗಳಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದ ಕುಟುಂಬಗಳ ನಡುವಿನ ಗಲಾಟೆಯಲ್ಲಿ ೬ ತಿಂಗಳ ಗರ್ಭಿಣಿಗೆ ಪೆಟ್ಟುಬಿದ್ದು ಅವಳಿ ಮಕ್ಕಳು ಗರ್ಭದಲ್ಲೇ ಕೊನೆಯುಸಿರೆಳೆದಿದ್ದರೆ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಗಂಡನೊಂದಿಗಿನ ಫೋನ್ ಜಗಳದ ಕೋಪದಲ್ಲಿ ತಾಯಿ ಇಬ್ಬರು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದ ಭೀಕರ ಘಟನೆ ಸಂಭವಿಸಿದೆ. ಈ ಎರಡೂ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮೂಡಿಸಿವೆ.
ಕೊತ್ತನೂರಿನ ಶಬರಿನಗರದಲ್ಲಿ ಸೆಪ್ಟೆಂಬರ್ 6 ರಂದು ಯಾಸಿನ್ ಹಾಗೂ ಜಾಫರ್ ಎಂಬುವವರ ಕುಟುಂಬಗಳ ನಡುವೆ ಸಣ್ಣ ಬೈಕ್ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಮಾರಾಮಾರಿಯಾಗಿದೆ. ಈ ವೇಳೆ ಜಾಫರ್ ಮಗಳು, 6 ತಿಂಗಳ ಗರ್ಭಿಣಿಯಾಗಿದ್ದ ತಾನಿಯಾ ಸಿದ್ದಿಕಿ ಎಂಬುವವರಿಗೆ ತೀವ್ರ ಪೆಟ್ಟುಬಿದ್ದಿದೆ. ಪರಿಣಾಮವಾಗಿ ಗರ್ಭದಲ್ಲಿದ್ದ ಅವಳಿ ಮಕ್ಕಳು ಅಬಾರ್ಷನ್ ಆಗಿದ್ದು, ಕಂದಮ್ಮಗಳನ್ನು ಕಳೆದುಕೊಂಡ ತಾನಿಯಾ ಕಣ್ಣೀರಿಡುತ್ತ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ಕೌಂಟರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನೆ ಎಂಬಲ್ಲಿ ವೈವಾಹಿಕ ಕಲಹ ಭೀಕರ ಸ್ವರೂಪ ಪಡೆದುಕೊಂಡಿದೆ. ಗಂಡ ಸಿನಾನ್ (32) ಹಾಗೂ ಪತ್ನಿ ನೂರುನ್ನಿಸಾ (28) ನಡುವೆ ಫೋನ್‌ನಲ್ಲಿ ಜಗಳ ನಡೆದಿದ್ದು, ಕೋಪಗೊಂಡ ನೂರುನ್ನಿಸಾ ತನ್ನ ಮೂರೂವರೆ ವರ್ಷದ ಮಗಳು ಆಲಿಯಾ ಹಾಗೂ ಗಂಡನ ತಂಗಿಯ ಮೂರು ವರ್ಷದ ಗಂಡು ಮಗು ರಭಿಹ ನನ್ನು ಬಾವಿಗೆ ಎಸೆದಿದ್ದಾಳೆ. ಘಟನೆಯಲ್ಲಿ ಗಂಡನ ತಂಗಿಯ ಮಗು ರಭಿಹ ಮೃತಪಟ್ಟಿದ್ದು, ಬದುಕಿಳಿದ ಆಲಿಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಪ್ಪಿನಂಗಡಿ ಪೊಲೀಸರು ನೂರುನ್ನಿಸಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವರದಿ: ರಾಚಪ್ಪ, ಬೆಂಗಳೂರು ಮತ್ತು ಪೃಥ್ವಿರಾಜ್, ಮಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ