ಸಾರಿಗೆ ಸಚಿವರನ್ನೇ ಬಸ್​​ನಿಂದ ಕೆಳಗಿಳಿಸಿದ್ದ ಪ್ರಕರಣ: ಬಿಎಂಟಿಸಿ ನಿರ್ವಾಹಕನ ಅಮಾನತು ಆದೇಶ ಹಿಂಪಡೆಯುವಂತೆ ಸೂಚನೆ

ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್ ಏರಿ ಪರಿಶೀಲನೆ ನಡೆಸುತ್ತಿದ್ದಾಗ, ಚಿಲ್ಲರೆ ಇಲ್ಲದ ಕಾರಣಕ್ಕೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ ಆರೋಪದಡಿ ಅಮಾನತುಗೊಂಡಿದ್ದ ನಿರ್ವಾಹಕನ ಸಸ್ಪೆಂಡ್​​ ಆದೇಶವನ್ನು ಹಿಂಪಡೆಯಲು ಸಚಿವರು ಸೂಚಿಸಿದ್ದಾರೆ. ಇದೇ ವೇಳೆ ಬಿಎಂಟಿಸಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ಬೈರತಿ ಸುರೇಶ್ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಸಾರಿಗೆ ಸಚಿವರನ್ನೇ ಬಸ್​​ನಿಂದ ಕೆಳಗಿಳಿಸಿದ್ದ ಪ್ರಕರಣ: ಬಿಎಂಟಿಸಿ ನಿರ್ವಾಹಕನ ಅಮಾನತು ಆದೇಶ ಹಿಂಪಡೆಯುವಂತೆ ಸೂಚನೆ
ಬಿಎಂಟಿಸಿ ನಿರ್ವಾಹಕನ ಆದೇಶ ಹಿಂಪಡೆಯುವಂತೆ ಸೂಚನೆ

Updated on: Jul 30, 2026 | 1:07 PM

ಮುಖ್ಯಾಂಶಗಳು

  • ರಿಯಾಲಿಟಿ ಚೆಕ್​​ ವೇಳೆ ಸಾರಿಗೆ ಸಚಿವರ ಬಳಿಯೇ ಉದ್ಧಟತನ
  • ಬೈರತಿ ಸುರೇಶ್ ಬಳಿ ವರ್ತನೆಗೆ ಕ್ಷಮೆಯಾಚಿಸಿದ ನಿರ್ವಾಹಕ
  • ಅಮಾನತು ಆದೇಶ ರದ್ದುಗೊಳಿಸಲು ಸಚಿವರಿಂದ ಸೂಚನೆ

ಬೆಂಗಳೂರು, ಜುಲೈ 30: ರಿಯಾಲಿಟಿ ಚೆಕ್​​ ನಡೆಸಲೆಂದು ಬಿಎಂಟಿಸಿ ಬಸ್​​ ಏರಿದ್ದ ವೇಳೆ ಚಿಲ್ಲರೆ ನೀಡದ ಕಾರಣ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನೇ ಬಸ್‌ನಿಂದ ಇಳಿಯುವಂತೆ ಹೇಳಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಬಿಎಂಟಿಸಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ. ಬುಧವಾರ ನಿರ್ವಾಹಕ ರಾಮಕೃಷ್ಣ ಅವರು ಸಚಿವರನ್ನು ಭೇಟಿ ಮಾಡಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ ಹಿನ್ನೆಲೆ ಅವರ ಅಮಾನತನ್ನು ರದ್ದುಗೊಳಿಸಲು ಅಧಿಕಾರಿಗಳಿಗೆ ಬೈರತಿ ಸುರೇಶ್ ನಿರ್ದೇಶನ ನೀಡಿದ್ದಾರೆ.

ಚಾಲಕರು, ನಿರ್ವಾಹಕರಿಗೆ ಸಚಿವರ ಖಡಕ್​​ ವಾರ್ನಿಂಗ್​​

ಇದೇ ವೇಳೆ ಬಿಎಂಟಿಸಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ಸಚಿವ ಬೈರತಿ ಸುರೇಶ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಚಿಲ್ಲರೆ ಹಣದ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಎಲ್ಲ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ದುರ್ವರ್ತನೆ ಕುರಿತ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಭೈರತಿ ಸುರೇಶ್​​ ರಿಯಾಲಿಟಿ ಚೆಕ್ ವೇಳೆ ಉದ್ಧಟತನ: ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನತು

ಜುಲೈ 11ರಂದು ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ವೇಷಧರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಅಚ್ಚರಿಯ ಪರಿಶೀಲನೆ ನಡೆಸಿದ್ದರು. ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಯತ್ತ ತೆರಳುತ್ತಿದ್ದ ಬಸ್‌ನಲ್ಲಿ ₹6 ಟಿಕೆಟ್‌ಗಾಗಿ ₹100 ನೋಟು ನೀಡಿದಾಗ, ನಿರ್ವಾಹಕರು ಚಿಲ್ಲರೆ ಇಲ್ಲವೆಂದು ಹೇಳಿ ಬಸ್‌ನಿಂದ ಇಳಿಯುವಂತೆ ಸೂಚಿಸಿದ್ದರೆಂದು ಆರೋಪಿಸಲಾಗಿತ್ತು. ಈ ಘಟನೆಯ ಬಳಿಕ ನಿರ್ವಾಹಕರನ್ನು ಅಮಾನತು ಮಾಡಿರೋದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹಲವರು, ಬಿಎಂಟಿಸಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಚಿವರೇ ಬಳಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಮತ್ತೊಂದೆಡೆ, ಕೇವಲ ಈ ಕಾರಣಕ್ಕೆ ನಿರ್ವಾಹಕರನ್ನು ಅಮಾನತುಗೊಳಿಸಿರುವುದು ಕಠಿಣ ಕ್ರಮ ಎಂದು ಕೆಲವರು ಟೀಕಿಸಿದರೆ, ಸಾಮಾನ್ಯ ಪ್ರಯಾಣಿಕರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಕ್ರಮ ಸಮರ್ಥನೀಯ ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us