ಬಿಎಂಟಿಸಿ ಹೊಸ ಪ್ಲ್ಯಾನ್: ಬಸ್ಸಿನೊಳಗೆ ಸ್ಪೀಕರ್ ಮೂಲಕ ಜಾಹೀರಾತು ನೀಡಲು ಮುಂದು, ಪ್ರಯಾಣಿಕರು ಗರಂ!
ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಸಂಸ್ಥೆಯು ಆದಾಯ ಹೆಚ್ಚಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಬಸ್ಸುಗಳ ಒಳಗಡೆ ಸ್ಪೀಕರ್ ಮೂಲಕ ಜಾಹೀರಾತು ನೀಡಲು ಸಿದ್ಧತೆ ನಡೆಸಿದೆ. ಆದರೆ, ಈ ನಿರ್ಧಾರದಿಂದ ನಿತ್ಯ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಲಿದ್ದು, ಮುಂದಿನ ಸ್ಟಾಪ್‌ಗಳ ಮಾಹಿತಿ ಸಿಗದೆ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಆರ್ಥಿಕ ನಷ್ಟದಿಂದ ಹೊರಬರಲು ಬಸ್ಸಿನೊಳಗೆ ಆಡಿಯೋ ಜಾಹೀರಾತು ನೀಡಲು ಬಿಎಂಟಿಸಿ ಪ್ಲ್ಯಾನ್.
- ನಿತ್ಯ ಪ್ರಯಾಣಿಸುವ 45 ಲಕ್ಷ ಜನರನ್ನು ಗುರಿಯಾಗಿಸಿಕೊಂಡು ಕೋಟಿಗಳ ಆದಾಯದ ಲೆಕ್ಕಾಚಾರ.
- ಸ್ಪೀಕರ್ ಗದ್ದಲದಿಂದ ಮುಂದಿನ ಬಸ್ ನಿಲ್ದಾಣ ತಿಳಿಯದೆ ತೊಂದರೆಯಾಗಲಿದೆ ಎಂದು ಪ್ರಯಾಣಿಕರ ಗರಂ.
ಬೆಂಗಳೂರು, ಜುಲೈ 04: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಸಾಲದ ಸುಳಿಯಿಂದ ಹೊರಬರಲು ಈಗ ಹೊಸದೊಂದು ಆದಾಯದ ಮೂಲವನ್ನು ಹುಡುಕಿಕೊಂಡಿದೆ. ಈಗಾಗಲೇ ಬಸ್ಸುಗಳ ಹೊರಭಾಗ ಹಾಗೂ ಟಿಕೆಟ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶಿಸಲು ಟೆಂಡರ್ ಕರೆದಿರುವ ನಿಗಮ, ಇದೀಗ ದೇಶದಲ್ಲೇ ಮೊದಲ ಬಾರಿಗೆ ಬಸ್ಸಿನ ಒಳಗಡೆ ಸ್ಪೀಕರ್‌ಗಳ (ಅನೌನ್ಸರ್‌ಗಳು) ಮೂಲಕ ಆಡಿಯೋ ಜಾಹೀರಾತು ಹಾಕಲು ಭರ್ಜರಿ ಪ್ಲ್ಯಾನ್ ಮಾಡಿದೆ. ಆದರೆ, ಬಿಎಂಟಿಸಿಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಆದಾಯಕ್ಕಾಗಿ ಬಿಎಂಟಿಸಿ ಕಸರತ್ತು
ಡೀಸೆಲ್ ದರ ಏರಿಕೆ ಹಾಗೂ ಶಕ್ತಿ ಯೋಜನೆಯ ಬಾಕಿ ಹಣ ಸಕಾಲಕ್ಕೆ ಬಾರದೆ ತತ್ತರಿಸಿರುವ ಬಿಎಂಟಿಸಿ, ನಷ್ಟ ಸರಿದೂಗಿಸಲು ಈಗಾಗಲೇ ಟಿಕೆಟ್ ದರ ಏರಿಕೆಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸದ್ಯ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿರುವ ಸುಮಾರು 6,800 ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್ಸುಗಳ ಮೂಲಕ ಪ್ರತಿದಿನ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇಷ್ಟೊಂದು ಬೃಹತ್ ಸಂಖ್ಯೆಯ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಆದಾಯ ಗಳಿಸಲು ಈ ಆಡಿಯೋ ಜಾಹೀರಾತು ಪ್ರಸ್ತಾವನೆಯನ್ನು ಸಾರಿಗೆ ಸಚಿವರಿಗೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ.
ಪ್ರಯಾಣಿಕರ ಆಕ್ರೋಶಕ್ಕೆ ಕಾರಣವೇನು?
ಬಿಎಂಟಿಸಿಯ ಈ ಹೊಸ ಆಲೋಚನೆಗೆ ನಿತ್ಯ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸ್ಸಿನೊಳಗೆ ನಿರಂತರವಾಗಿ ಸ್ಪೀಕರ್ ಮೂಲಕ ಜಾಹೀರಾತು ಪ್ರಸಾರ ಮಾಡಿದರೆ ಪ್ರಯಾಣಿಕರ ನೆಮ್ಮದಿಗೆ ಭಂಗ ಉಂಟಾಗುತ್ತದೆ ಎಂಬುದು ಸಾರ್ವಜನಿಕರ ದೂರು.
ಬಸ್ಸುಗಳಲ್ಲಿ ಬಹುತೇಕ ಬಡವರು ಮತ್ತು ಮಧ್ಯಮ ವರ್ಗದವರೇ ಪ್ರಯಾಣಿಸುತ್ತಾರೆ. ಈಗಾಗಲೇ ಬಸ್ಸುಗಳಲ್ಲಿ ಗದ್ದಲ ಹೆಚ್ಚಿರುತ್ತದೆ. ಇದರ ನಡುವೆ ಸ್ಪೀಕರ್‌ನಲ್ಲಿ ಜಾಹೀರಾತು ಹಾಕುತ್ತಾ ಹೋದರೆ, ಪ್ರಯಾಣಿಕರಿಗೆ ಮುಂದಿನ ಸ್ಟಾಪ್ ಯಾವುದು, ಎಲ್ಲಿ ಇಳಿಯಬೇಕು ಎಂಬುದೇ ತಿಳಿಯದಂತಾಗುತ್ತದೆ ಎಂದು ಬಿಎಂಟಿಸಿ ಪ್ರಯಾಣಿಕರಾದ ವಿದ್ಯಾಸಾಗರ್ ಮತ್ತು ಕಾಸಿರೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ




