ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ ಕಾರ್ಯಾಚರಣೆ ಸ್ಥಗಿತ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಕಿಶ್ ಕಂಪನಿಯಾದ ಸೆಲೆಬಿ ಏವಿಯೇಷನ್‌ನ ನಿರ್ವಹಣಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಇದೀಗ ಬೇರೆ ಏಜೆನ್ಸಿಗಳಿಗೆ ವರ್ಗಾವಣೆ ಮಾಡಲಾಗಿದೆ. ಬೇರೆ ಕಂಪನಿಗಳಿಗೆ ಸೇವೆಯನ್ನು ವರ್ಗಾಯಿಸಲಾಗಿದೆ ಎಂದು ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ  ಏವಿಯೇಷನ್‌ ಕಾರ್ಯಾಚರಣೆ ಸ್ಥಗಿತ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Edited By:

Updated on: May 16, 2025 | 11:09 AM

ಬೆಂಗಳೂರು, ಮೇ 16: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ (KIA) ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ (Celebi aviation) ಏರ್​​ಪೋರ್ಟ್ ಸೇವೆಗಳನ್ನು ಗುರುವಾರ ತಡರಾತ್ರಿಯಿಂದಲೇ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ, ಟರ್ಕಿಯ ಕಂಪನಿಗೆ ಬೆಂಗಳೂರಿನಲ್ಲಿಯೂ ಭಾರಿ ಹೊಡೆತ ನೀಡಿದಂತಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ 15 ಅಂತಾರಾಷ್ಟ್ರೀಯ ವಿಮಾನಗಳು ಮತ್ತು ಕಾರ್ಗೋ ವಿಮಾನಗಳನ್ನು ಸೆಲೆಬಿ ಏವಿಯೇಷನ್‌ ನಿರ್ವಹಣೆ ಮಾಡುತ್ತಿತ್ತು. ಅವುಗಳನ್ನು ಗುರುವಾರ ರಾತ್ರಿಯಿಂದಲೇ ಬೇರೆ ಏರ್ ಸರ್ವೀಸಸ್ ಕಂಪನಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.

ಟರ್ಕಿಯ ಸೆಲೆಬಿ ಏವಿಯೇಷನ್‌ ಕಂಪನಿಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 500 ಕ್ಕೂ ಅಧಿಕ ಜನ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಇದೀಗ ಆ ಸಿಬ್ಬಂದಿಯನ್ನು ಬೇರೆ ಏಜೆನ್ಸಿಗಳಿಗೆ ವರ್ಗಾವಣೆ ಮಾಡಲಾಗಿದೆ. ಸೆಲೆಬಿ ಏವಿಯೇಷನ್‌ ನಿರ್ವಹಿಸುತ್ತಿದ್ದ ಕೆಲಸವನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದಾಗಿ ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ
ಹೊನ್ನಾವರದ ವೀಳ್ಯದೆಲೆಗೆ ಪಾಕ್ ದೊಡ್ಡ ಮಾರುಕಟ್ಟೆ! ಆದರೂ ಕಳ್ಸಲ್ಲ ರೈತರು
ಅಂಗಾಂಗ ದಾನದಲ್ಲಿ ಧಾರವಾಡಕ್ಕೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಭಾರತದ 9 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಿಸುತ್ತಿದ್ದ ಸೆಲೆಬಿ ಏವಿಯೇಷನ್‌

ಸೆಲೆಬಿ ಏವಿಯೇಷನ್‌ ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಒಂಬತ್ತು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಾಗರಿಕ ವಿಮಾನಯಾನ ಸಚಿವಾಲಯದ ಭದ್ರತಾ ವಿಭಾಗವಾದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (BCAS) ಗುರುವಾರ ಸೆಲೆಬಿ ಏವಿಯೇಷನ್‌ನ ಪರವಾನಗಿಯನ್ನು ರದ್ದುಗೊಳಿಸಿದ್ದು, ತಕ್ಷಣದಿಂದಲೇ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಆ ಕಂಪನಿಯ ಸೇವೆ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.

ಸೆಲೆಬಿ ಏವಿಯೇಷನ್‌ ಹಿನ್ನೆಲೆಯೇನು?

ಸೆಲೆಬಿ ಏವಿಯೇಷನ್ ​​ಟರ್ಕಿಶ್ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದು ವಿಮಾನ ನಿಲ್ದಾಣಗಳ ಗ್ರೌಂಡ್ ಹ್ಯಾಂಡ್ಲಿಂಗ್ ಆಪರೇಷನ್‌ (ವಿಮಾನ ಲ್ಯಾಂಡ್ ಆಗಿ ಟ್ಯಾಕ್ಸಿ ವೇಗೆ ಬಂದ ನಂತರದ ಸೇವೆಗಳನ್ನು ಒದಗಿಸುವುದು) ಮತ್ತು ವಿಮಾನ ನಿಲ್ದಾಣದ ಇತರ ಸೇವೆಗಳನ್ನು ಒದಗಿಸುತ್ತದೆ. ಈ ಕಂಪನಿ ಟರ್ಕಿಯಲ್ಲಿ 1958 ರಲ್ಲಿ ಸ್ಥಾಪನೆಯಾಗಿದೆ. ಅಂದಿನಿಂದ ಈವರೆಗೆ ವಿಶ್ವದಾದ್ಯಂತ 70 ಸ್ಥಳಗಳಿಗೆ ಕಾರ್ಯಾಚರಣೆ ವಿಸ್ತರಿಸಿದೆ. ಗ್ರೌಂಡ್ ಹ್ಯಾಂಡ್ಲಿಂಗ್ ಆಪರೇಷನ್‌, ಸರಕು ಮತ್ತು ಗೋದಾಮಿನ ನಿರ್ವಹಣೆ ಮತ್ತು ಸಾಮಾನ್ಯ ವಾಯುಯಾನ ಬೆಂಬಲ ಸೇವೆಗಳನ್ನು ಒದಗಿಸುತ್ತಿದೆ.

ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು

ಸೆಲೆಬಿ ಏವಿಯೇಷನ್ ​​ಭಾರತದ ವೈಮಾನಿಕ ಕ್ಷೇತ್ರದಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದೆ. ಮುಂಬೈ ವಿಮಾನ ನಿಲ್ದಾಣದ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಆ ನಂತರ ಕಂಪನಿಯು ದೇಶಾದ್ಯಂತ ಒಂಬತ್ತು ವಿಮಾನ ನಿಲ್ದಾಣಗಳಿಗೆ ವಿಸ್ತರಿಸಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Fri, 16 May 25