
ಪಾಸ್‌ಪೋರ್ಟ್ ಫೋರ್ಜರಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ 7 ವರ್ಷ ಜೈಲು ಶಿಕ್ಷೆ ವಿಧಿಸಿಚೆನ್ನೈನ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ. 22 ವರ್ಷಗಳ ಸುದೀರ್ಘ ಕಾನೂನು ಹೋರಾಟ ಬಳಿಕ ಭೂಗತ ಪಾತಕಿ ಛೋಟಾ ರಾಜನ್‌ಗೆ 7 ವರ್ಷ ಜೈಲು ಶಿಕ್ಷೆಯಾಗಿದೆ.
ಸಂಪುಟ ವಿಸ್ತರಣೆ ಸಂಬಂಧ ಕೊನೆಗೂ ರಾಹುಲ್ ಗಾಂಧಿ ಅವರು ಇಂದು ಕರ್ನಾಟಕ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದು, ಸಚಿವ ಆಯ್ಕೆ ಬಗ್ಗೆ ಮಾತುಕತೆ ಮಾಡಿದ್ದಾರೆ. ಆದರೆ, ನೂತನ ಸಚಿವರ ಹೆಸರುಗಳು ಮಾತ್ರ ಇನ್ನೂ ನಿಗೂಢವಾಗಿದೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರೊಂದಿಗಿನ ಸಭೆ ಬಳಿಕ ಖರ್ಗೆ, ಸುರ್ಜೆವಾಲ, ವೇಣುಗೋಪಾಲ್ ಜೊತೆ ಚರ್ಚೆ ಮುಂದುವರೆಸಿದ್ದು, ಪಟ್ಟಿ ಫೈನಲ್ ಮಾಡಿ ಭಾನುವಾರ ರಾತ್ರಿ ರವಾನಿಸುವ ಸಾಧ್ಯತೆಗಳಿವೆ. ಹೀಗಾಗಿ ಸೋಮವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಬಹುದು ಎನ್ನಲಾಗಿದೆ.
ಸಂಪುಟ ವಿಸ್ತರಣೆ ಸಂಬಂಧ ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಸಿಎಂ ಡಿಕೆ ಶಿವಕುಮಾರ್ ಇಂದು (ಜುಲೈ 30) ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರ. ಇಂದು ಸಂಜೆ ರಾಹುಲ್ ಗಾಂಧಿ ಜೊತೆಗಿನ ಸಭೆ ಮುಗಿಯುತ್ತಿದ್ದಂತೆಯೇ ಇದೀಗ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಅಂದರೆ ಜುಲೈ 31 ವಿನಯ್ ಕುಲಕರ್ಣಿ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಹೌದು…ಹೈಕೋರ್ಟ್ ವಿಭಾಗೀಯ ಪೀಠವು ನಾಳೆ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯ ಆದೇಶವನ್ನು ಪ್ರಕಟಿಸಲಿದೆ. ಹೀಗಾಗಿ ಶಿಕ್ಷೆಗೆ ತಡೆಯಾಜ್ಞೆ ಹಾಗೂ ಜಾಮೀನು ಕೋರಿರುವ ವಿನಯ್ ಕುಲರ್ಣಿಗೆ ನಾಳೆ ಮಹತ್ವದ ದಿನವಾಗಿದೆ.
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ನಡೆಸಿದ ಸಭೆ ಮುಕ್ತಾಯವಾಗಿದ್ದು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿಕೆ ಹರಿಪ್ರಸಾದ್ ಸಭೆ ಮುಗಿಸಿ ಖರ್ಗೆ ನಿವಾಸದಿಂದ ತೆರಳಿದಿದ್ದಾರೆ. ಆದ್ರೆ, ರಾಹುಲ್ ಗಾಂಧಿ, ಖರ್ಗೆ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಸಭೆ ಮುಂದುವರೆಸಿದ್ದಾರೆ.
ಕರ್ನಾಟಕ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆ ಅಂತ್ಯವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಭಾಗಿದ್ದು, ಇದೀಗ ಸಭೆ ಮುಗಿಯುತ್ತಿದ್ದಂತೆಯೇ ಸಿಎಂ ಡಿಕೆಶಿ ಹಾಗೂ ಬಿಕೆ ಹರಿಪ್ರಸಾದ್ ಖರ್ಗೆ ನಿವಾಸದಿಂದ ಆಚೆ ಬಂದಿದ್ದಾರೆ.
ಮಳೆ ಕೊರತೆ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ CWMA ಕರ್ನಾಟಕಕ್ಕೆ ಆದೇಶಿಸಿದೆ. ಇದರ ಮಧ್ಯೆ ಕರ್ನಾಟಕಕ್ಕೆ ಮತ್ತೊಂದು ಆಘಾತವಾಗಿದೆ. ಹೌದು…ಕೇಂದ್ರ ಜಲ ಆಯೋಗವು ಮೇಕೆದಾಟು ಡಿಪಿಆರ್ ವಾಪಸ್ ಕಳುಹಿಸಿದೆ. ಕೆಲವು ಅಂಶಗಳನ್ನು ಮಾರ್ಪಡಿಸಿ ಎಂದು ಹೇಳಿ ಮೇಕೆದಾಟು ಯೋಜನೆಯ ಡಿಪಿಆರ್ ವಾಪಸ್ ಕಳುಹಿಸಿದ್ದು, ಸಿಡಬ್ಲ್ಯೂಸಿಗೆ ಪರಿಷ್ಕೃತ ಹೊಸ ಯೋಜನಾ ವರದಿ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಕರ್ನಾಟಕ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಸಭೆ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಶುರುವಾಗಿದ್ದು, ಸಭೆಗೆ ಮುಖ್ಯವಾಗಿ ರಾಹುಲ್ ಗಾಂಧಿ ಸಹ ಆಗಮಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಸಭೆಯಲ್ಲಿ ಭಾಗಿಯಾಗಿದ್ದು, ಏನೆಲ್ಲಾ ಮತುಕತೆ ಆಗುತ್ತೆ? ಯಾರಿಗೆಲ್ಲಾ ಸಚಿವ ಸ್ಥಾನ ದೊರೆಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ದೆಹಲಿಯಲ್ಲಿ ನಡೆದಿದ್ದು, ಅಂತಿಮವಾಗಿ ಇಂದು (ಜುಲೈ 30) ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬರುವಂತೆ ರಾಜ್ಯ ನಾಯಕರಿಗೆ ಬುಲಾವ್ ನೀಡಲಾಗಿದೆ. ಅದರಂತೆ ಖರ್ಗೆ ನಿವಾಸಕ್ಕೆ ತೆರಳಿದ ಸಿಎಂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿಕೆ ಹರಿಪ್ರಸಾದ್ ಅವರು ಖರ್ಗೆ ನಿವಾಸಕ್ಕೆ ತೆರಳಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ನೂತನ ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿವೆ.
ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಎಂಎ ಆದೇಶ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಮಂಡ್ಯದ ಸಂಜಯ್ ವೃತ್ತದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. KSRP ತುಕಡಿ ಸೇರಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ನಿನ್ನೆ (ಜುಲೈ 29) ನಿಗದಿಯಾಗಿದ್ದ ರಾಹುಲ್ ಗಾಂಧಿ ಜೊತೆಗಿನ ಸಭೆ ರದ್ದಾಗಿದ್ದು, ಇದೀಗ ಇಂದು (ಜುಲೈ 30) ಸಂಜೆ ಸಭೆ ನಡೆಯಲಿದೆ. ನವದೆಹಲಿಯ ರಾಜಾಜಿಮಾರ್ಗದಲ್ಲಿರುವ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಭಾಗಿಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕದ ಪರ ವಾದ ಮಂಡಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ , ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು, ನಮ್ಮ ಸರ್ಕಾರದಿಂದ ಪ್ರಬಲ ವಾದವನ್ನು ಮಂಡನೆ ಮಾಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈಗ ನಿರ್ಧಾರ ಮಾಡುತ್ತೆ. ಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಇದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಬರಗಾಲದ ನಡುವೆಯೂ ಪ್ರತಿ ನಿತ್ಯ 15 ದಿನಗಳ ಕಾಲ 3500 ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶಿಸಿದ್ದು, ಇದನ್ನ ಪ್ರಶ್ನೆ ಕರ್ನಾಟಕ ಮೇಲ್ನನವಿ ಸಲ್ಲಿಸಿದೆ. ಇದರ ಬೆನ್ನಲ್ಲೇ ಇಂದು (ಜುಲೈ 30) ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಂತ್ಯವಾಗಿದ್ದು, ತಮಿಳುನಾಡು ಅಧಿಕಾರಿಗಳು ಹಾಗೂ ಕರ್ನಾಟಕದ ಪರ ಅಧಿಕಾರಿಗಳು ತಮ್ಮ ತಮ್ಮ ವಾದ ಪ್ರತಿವಾದ ಮಂಡಿಸಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಭಾಷೆ , ನೆಲ, ಜಲ ಅಂತ ಬಂದ್ರೆ ಒಂದೇ ಧ್ವನಿ. ನಾಡು ನುಡಿ ಜಲ ಭಾಷೆ ವಿಚಾರ ಬಂದಾಗ ಎಂತ ಸಂದರ್ಭ ಬಂದ್ರೂ ಒಗ್ಗಟ್ಟಾಗಿ ಇರುತ್ತೇವೆ. ಏನೇ ಬಂದ್ರೂ ಒಗ್ಗಟ್ಟಾಗಿಬಲ ಇರ್ತೀವಿ. ಕಲಾವಿದರು ಬಂದ್ರೆನೇ ಸಕ್ಸಸ್ ಆಗುತ್ತೆ ಅಂತ ಅಲ್ಲ ಎಂದು ಹೇಳಿದರು.
ಈ ವೇಳೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ, ಕರ್ನಾಟಕದಲ್ಲಿ ಏನು ಪರಿಸ್ಥಿತಿ ಇದೆ ಅನ್ನೋದನ್ನ ಕಾವೇರಿ ನಿಯಂತ್ರಣ ಮಂಡಳಿ ಪರಿಶೀಲಿಸಬೇಕಿದೆ. ಕಳೆ ಭಾರಿ ನೀರು ಇತ್ತು. ಹಾಗಾಗಿ ಬಿಟ್ಟಿದ್ದೀವಿ. ಚಿತ್ರರಂಗ ಸ್ಪಂದಿಸಬೇಕು ಅಂತ ಹೇಳಿದ್ರು. ಸರ್ಕಾರ ಮೆಲ್ಮನವಿ ಸಲ್ಲಿಸಿದೆ. ಇವತ್ತು ಸಭೆ ಆದ ನಂತರ ಯಾವ ತೀರ್ಪು ಕೊಡ್ತಾರೆ ಅನ್ನೋದನ್ನ ಕಾದು ನೋಡ್ತಿವಿ ಎಂದರು.
ನೆಲ ಜಲ ಭಾಷೆ ಈ ಮೂರಕ್ಕೂ ಧಕ್ಕೆ ಆಗುತ್ತೆ ಅಂದಾಗ ಫಿಲಂ ಚೇಂಬರ್ ಯಾವತ್ತೂ ನಿಂತಿದ್ದೀವಿ. ಅವತ್ತು ಮಹಾದಾಯಿ, ಇವತ್ತು ಕಾವೇರಿ. 4 tmc ನೀರು ಬಿಡಬೇಕು ಅಂತ ಕೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ಇದ್ದೀವಿ ಅಂತ ಹೇಳೋಕೆ ಇಚ್ಚಿಸುತ್ತೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಸ್ಪಷ್ಟಪಡಿಸಿದರು.
ವರ್ಚುವಲ್ ಮೂಲಕ ಭಾಗಿಯಾಗಿರುವ ತಮಿಳುನಾಡು ಅಧಿಕಾರಿಗಳು, CWRC ಅತೀ ಕಡಿಮೆ ನೀರು ಬಿಡುವ ಆದೇಶ ಮಾಡಿದೆ. 3500 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿದೆ. CWRC ಆದೇಶ ಬದಿಗಿರಿಸಿ ಹೆಚ್ಚುವರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು. ಕರ್ನಾಟದ ಡ್ಯಾಂಗಳಿಗೆ ಒಟ್ಟು ಒಳಹರಿವು 36 ಟಿಎಂಸಿಯಷ್ಟಿದೆ . ವಾಡಿಕೆ ಮಳೆಯಾಗಿದ್ದರೆ ತಮಿಳುನಾಡಿಗೆ ಇಷ್ಟು ಹೊತ್ತಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಸಂಕಷ್ಟ ಸೂತ್ರವನ್ನು ಕರ್ನಾಟಕ ಸರಿಯಾಗಿ ಪಾಲಿಸಿಲ್ಲ.ಸಂಕಷ್ಟ ಸೂತ್ರದ ಅನ್ವಯಕ್ಕಿಂತ ಕಡಿಮೆ ನೀರು ಹರಿಸಿದೆ. ಎರಡು ತಿಂಗಳಲ್ಲಿ ಬಿಲಿಗುಂಡ್ಲುದಲ್ಲಿ ಕೇವಲ 3.5ಟಿಎಂಸಿ ನೀರು ಮಾತ್ರ ಹರಿದಿದೆ. ಸಂಕಷ್ಟ ಸೂತ್ರ ಅನ್ವಯ 9.46 ಟಿಎಂಸಿ ಬಾಕಿ ಉಳಿಸಿಕೊಂಡಿದೆ ಎಂದು ಪ್ರತಿವಾದ ಮಂಡಿಸಿದರು.
ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ರೈತರು, ಕನ್ನಡ ಪರ ಸಂಘಟನೆಗಳು ಹಾಗೂ ವಿಪಕ್ಷಗಳು ಡಿಕೆ ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸುತ್ತಿವೆ. ಇದರ ಮಧ್ಯೆ ರಾಜ್ಯ ಬಿಜೆಪಿ ಸಂಸದರ ನಿಯೋಗ ಕೇಂದ್ರ ಜಲಶಕ್ತಿ ಇಲಾಖೆ ಸಚಿವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಇಂದು (ಜುಲೈ 30) ಸಿ.ಆರ್. ಪಾಟೀಲ್ ಭೇಟಿ ಮಾಡಿ ಪ್ರಸ್ತುತ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಸಂಸದರಾದ ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ. ಮೋಹನ್ ಮತ್ತು ಪಿ.ಸಿ. ಗದ್ದಿಗೌಡರ್ ಇದ್ದರು.
ದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ವಾದ ಮಂಡಿಸುತ್ತಿದ್ದು, ಕರ್ನಾಟಕದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರಬಲ ವಾದ ಮಂಡಿಸುತ್ತಿದ್ದಾರೆ.CWRC ಶಿಫಾರಸ್ಸುನ್ನು ಕರ್ನಾಟಕ ಪಾಲಿಸಲು ಸಾಧ್ಯವೇ ಇಲ್ಲ. ಮಳೆಯ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಮರ್ಪಕ ನೀರಿಲ್ಲ. ಈ ವರ್ಷ ಬಿಳಿಗುಂಡ್ಲು ಬಳಿ ನಿತ್ಯ 178 ಕ್ಯೂಸೆಕ್ ಹರಿವಿದೆ. ಈ ವರ್ಷ ದ ಜೂನ್, ಜುಲೈ ನಲ್ಲಿ 3.55 ಟಿಎಂಸಿ ಹರಿದು ಹೋಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಿತ್ಯ 30,748 ಕ್ಯೂಸೆಕ್ ನೀರು ಪ್ಲೊ ಇತ್ತು. ಕಳೆದ ವರ್ಷ ಈ ಸಮಯದಲ್ಲಿ 116.92 ಟಿಎಂಸಿ ನೀರು ಹರಿದಿತ್ತು. ಸದ್ಯ ಕಾವೇರಿ ಜಲಾಶಯಗಳಲ್ಲಿ 36.69 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನಮ್ಮ ಜಲಾಶಯಗಳಲ್ಲಿ 99 ಟಿಎಂಸಿ ನೀರು ಶೇಖರಣೆಯಾಗಿತ್ತು. ಸಾಮಾನ್ಯ ವರ್ಷಗಳಲ್ಲಿ ಈ ಸಮಯಕ್ಕೆ 40 ಟಿಎಂಸಿ ನೀರು ಹರಿಸಲಾಗುತ್ತಿತ್ತು. ಆದರೆ ಈ ವರ್ಷ ಬರದ ತೀವ್ರತೆ ಹೆಚ್ಚಿರುವ ಕಾರಣ 3.5 ಟಿಎಂಸಿ ಮಾತ್ರ ಹರಿದಿದೆ. ಬರದ ತೀವ್ರತೆ, ಜಲಾಶಯಗಳಲ್ಲಿ ನೀರಿನ ಕೊರತೆಯನ್ನು ಪರಿಗಣಿಸಬೇಕು . CWRC ಪತ್ರಿನಿತ್ಯ 3500 ನೀರು ಬಿಡಿ ಎಂದಿದ್ದಾರೆ. ಬಿಳಿಗುಂಡ್ಲುವಿನಲ್ಲಿ 3500 ಕ್ಯೂಸೆಕ್ ಹರಿವು ದಾಖಲಿಸಲು ಜಲಾಶಯಗಳಿಂದ ದುಪ್ಪಟ್ಟು ನೀರು ಹರಿಸಬೇಕು ಹೀಗಾಗಿ CWRC ಆದೇಶವನ್ನು ಪರಿಶೀಲಿಸುವಂತೆ ವಾದ ಮಂಡಿಸಿದ್ದಾರೆ.

ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಹರಿಸಬೇಕೆಂಬ CWRC ಆದೇಶಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ರಾಜ್ಯ ಸರ್ಕಾರವೂ ಸಹ ಮೇಲ್ಮನವಿ ಸಲ್ಲಿಸಲು ತಿರ್ಮಾನಿಸಿದೆ. ಹೀಗಾಗಿ ಇಂದು (ಜುಲೈ 30) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ತುರ್ತು ಸಭೆ ಕರೆದಿದ್ದು, ನವದೆಹಲಿಯಲ್ಲಿ CWMA ಕಚೇರಿಯಲ್ಲಿ ತುರ್ತು ಸಭೆ ಆರಂಭವಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಬೆನ್ನಲ್ಲೇ, ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಮುಂದಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾನೂನು ಹಾಗೂ ರಾಜಕೀಯ ಹೋರಾಟದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಆಗಸ್ಟ್ 2ರ ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ‘ಸರ್ವಪಕ್ಷ ಸಭೆ’ (All-Party Meeting) ಕರೆದಿದ್ದಾರೆ.
ಸ್ಪರ್ಧಾತ್ಮಕ ಹಾಗೂ ಭವಿಷ್ಯದ ಕನಸುಗಳೊಂದಿಗೆ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವಕನೋರ್ವ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದ್ವತಿ ನದಿ ಸೇತುವೆ ಬಳಿ ನಡೆದಿದೆ. ಸಾಗರ ತಾಲೂಕಿನ ಗೌತಮಪುರ ಗ್ರಾಮದ ನಿವಾಸಿ ಮಿಲನ್ (19) ಮೃತಪಟ್ಟ ದುರದೃಷ್ಟಕರ ಯುವಕ. ಶಿರಾಳಕೊಪ್ಪದಲ್ಲಿ ನಡೆದ ಐಟಿಐ (ITI) ಪರೀಕ್ಷೆಗೆ ಹಾಜರಾಗಿದ್ದನು. ಪರೀಕ್ಷೆ ಮುಗಿದ ನಂತರ ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಸ್ವಗ್ರಾಮ ಗೌತಮಪುರಕ್ಕೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ರಾಜಧಾನಿ ಸೇರಿದಂತೆ ವಿವಿಧ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಕಸ ವಿಲೇವಾರಿ ಮಾಡುವುದಕ್ಕೆ ತಡೆಹಾಕಲು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ಮುಂದೆ ಕಸ ವಿಲೇವಾರಿ ಮಾಡುವ ಎಲ್ಲಾ ಖಾಸಗಿ ವಾಹನಗಳಿಗೆ ಜಿಪಿಎಸ್ (GPS) ಅಳವಡಿಕೆ ಹಾಗೂ ಕಡ್ಡಾಯ ನೋಂದಣಿ (Registration) ಪ್ರಕ್ರಿಯೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ಆರೋಪದ ನಡುವೆ, ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ನೇಮಕಾತಿ ಆದೇಶಕ್ಕಾಗಿ ಡಿಸಿಎಂ ಪರಮೇಶ್ವರ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 60ಕ್ಕೂ ಹೆಚ್ಚು ಅಭ್ಯರ್ಥಿಗಳು ನಾವು ಪರೀಕ್ಷೆ ಬರೆದು ಆಯ್ಕೆಯಾಗಿದ್ದೇವೆ, ಯಾರೋ ಮಾಡಿದ ತಪ್ಪಿಗೆ ನಮ್ಮ ಆದೇಶ ತಡೆ ಹಿಡಿದಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ತೀವ್ರವಾಗಿ ನಿರಾಕರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಭಾಪತಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸಿಎಂ ನನಗೆ ಕರೆ ಮಾಡಿಲ್ಲ. ನಾನು ಆಸ್ಪತ್ರೆಯಲ್ಲಿದ್ದಾಗ ಕೇವಲ ಆರೋಗ್ಯ ವಿಚಾರಿಸಲು ಕರೆ ಮಾಡಿದ್ದರು ಅಷ್ಟೇ. ರಾಜೀನಾಮೆ ವಿಚಾರವಾಗಿ ಹರಡುತ್ತಿರುವ ಸುದ್ದಿಗಳೆಲ್ಲವೂ ಬರಿ ಗಾಳಿ ಸುದ್ದಿ,” ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು: ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನ ಜೆ.ಕೆ. ಮೈದಾನದಲ್ಲಿ ನಾಳೆ (ಶುಕ್ರವಾರ) ನಡೆಯಬೇಕಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಸ್ವಾಗತ ಸಮಾವೇಶವನ್ನು ದಿಢೀರನೆ ರದ್ದುಗೊಳಿಸಲಾಗಿದೆ. ನಾಡಿದ್ದು (ಶನಿವಾರ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸಿದ್ಧತೆಗಳ ಕಾರಣ ನೀಡಿ ಈ ಸಮಾವೇಶವನ್ನು ಕೈಬಿಡಲಾಗಿದೆ.
ದೇಶಾದ್ಯಂತ ಸಾರ್ವಜನಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ತಂದಿರುವ ‘ಸಾರ್ವಜನಿಕ ಪರೀಕ್ಷೆ (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ – 2026’ (Public Examinations Prevention of Unfair Means Amendment Bill 2026) ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಮೂರು ಅಸ್ಥಿಪಂಜರಗಳ ರಹಸ್ಯ ಸದ್ಯ ಬಯಲಾಗಿದ್ದು, ವೈಜ್ಞಾನಿಕ ಡಿಎನ್‌ಎ (DNA) ಪರಿಶೀಲನೆಯಲ್ಲಿ ಮೃತರ ಗುರುತು ಪತ್ತೆಯಾಗಿದೆ.
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದಾಯಕ ಹಾಗೂ ಬಹುನಿರೀಕ್ಷಿತ ಚಿತ್ರವೆನಿಸಿಕೊಂಡಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆಯಾಗಿದೆ.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWRC ಸೂಚಿಸಿತ್ತು. ಆದರೆ, ಕೆಆರ್‌ಎಸ್ ಸೇರಿದಂತೆ ರಾಜ್ಯದ ಜಲಾಶಯಗಳಲ್ಲಿ ಕುಡಿಯುವ ನೀರಿಗೇ ಅಭಾವವಿರುವುದರಿಂದ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಈ ಆದೇಶವನ್ನು ಪ್ರಶ್ನಿಸಿ CWMA ಮುಂದೆ ಮೇಲ್ಮನವಿ ಸಲ್ಲಿಸಿದೆ.
Breaking News Today Live Updates in Kannada: ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತಾರಕಕ್ಕೇರಿದ್ದು, ತಮಿಳುನಾಡಿಗೆ ದಿನಂಪ್ರತಿ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ಇಂದು ಮಧ್ಯಾಹ್ನ 2:30ಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ನಿಗದಿಯಾಗಿದ್ದು, ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರ ಚಿತ್ತ ದೆಹಲಿ ಸಭೆಯತ್ತ ನೆಟ್ಟಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದಾಯಕ ಹಾಗೂ ಬಹುನಿರೀಕ್ಷಿತ ಚಿತ್ರವೆನಿಸಿಕೊಂಡಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್ 2026ರ 6ನೇ ದಿನದ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಒಟ್ಟು 3 ಪದಕಗಳನ್ನು ಭಾರತದ ಮಡಿಲಿಗೆ ಹಾಕಿದ್ದಾರೆ. ಇದರ ಜತೆಗೆ ಸಚಿವ ಸಂಪುಟ ರಚನೆ ಹಾಗೂ ಸಚಿವ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.
Published On - 9:18 am, Thu, 30 July 26